- ಜಬೀನಾಖಾನಂ
ಅಸಂಘಟಿತ ಕಾರ್ಮಿಕರಿಗೆ ವೇತನವನ್ನು ನಿಗದಿ ಮಾಡಲು ಒಂದು ಸಮಿತಿ ಇದೆ. ಈ ಸಮಿತಿಯು 210 ರೂಪಾಯಿಯನ್ನು ನಿಗದಿ ಮಾಡಿದೆ. ಕಾರ್ಮಿಕರ ಕಾನೂನು ಪ್ರಕಾರ ಕನಿಷ್ಠ ಕೂಲಿ ತಿಂಗಳಿಗೆ 18000 ಇರಬೇಕು ಎಂದಿದೆ. ಅಂದರೆ ದಿನಕ್ಕೆ 600 ರೂಪಾಯಿ ಇರಬೇಕು. ಇಷ್ಟೆಲ್ಲ ಇದ್ದರೂ ಸಮಿತಿ 210 ರೂಪಾಯಿಯನ್ನು ಅಂದರೆ ತಿಂಗಳಿಗೆ 6300 ರೂಪಾಯಿಯನ್ನು ಯಾವ ಮಾನದಂಡದಲ್ಲಿ ನಿಗದಿ ಮಾಡಿದೆ ಎಂಬುದು ಅರ್ಥವಾಗುತ್ತಿಲ್ಲ.
ಬೀಡಿ ಕಾರ್ಮಿಕರಿಗೆ ಗುತ್ತಿಗೆದಾರರು ಕಳಪೆ ಗುಣಮಟ್ಟದ ಎಲೆ ತಂಬಾಕು ನೀಡುತ್ತಾರೆ. ಆದರೆ ಅದರಿಂದ ಕಟ್ಟಬಹುದಾದ ಬೀಡಿಯ ಪ್ರಮಾಣಕ್ಕಿಂತ ಅಧಿಕ ಬೀಡಿಯನ್ನು ನಿರೀಕ್ಷೆ ಮಾಡುತ್ತಾರೆ. ಉದಾಹರಣೆಗೆ ಅರ್ಧ ಕೆ.ಜಿ. ಎಲೆ, 200 ಗ್ರಾಂ ತಂಬಾಕಿನಲ್ಲಿ 750ರಿಂದ 800 ಬೀಡಿ ಕಟ್ಟಲು ಸಾಧ್ಯ. ಆದರೆ ಗುತ್ತಿಗೆದಾರ 1150 ಬೀಡಿ ನಿರೀಕ್ಷಿಸುತ್ತಾನೆ. ಈ ನಿರೀಕ್ಷೆ ಮುಟ್ಟಲು ಸಾಧ್ಯವಿಲ್ಲ ಕಾರಣ. ಪ್ರತಿಬಾರಿ ದಂಡದ ರೂಪದಲ್ಲಿ 40–50 ರೂಪಾಯಿ ಕಡಿತವಾಗುತ್ತದೆ. ಇದರಿಂದ ಬಡ ಬೀಡಿ ಕಾರ್ಮಿಕರ ಬದುಕು ಸಾಗಲು ಸಾಧ್ಯವೇ? ಮಕ್ಕಳ ಶಿಕ್ಷಣದ ವೆಚ್ಚ ಭರಿಸಲು ಸಾಧ್ಯವೇ?
ಬೀಡಿ ಕಾರ್ಮಿಕರಾಗಿ ಇರುವವಲ್ಲಿ ಮುಸ್ಲಿಂ ಮಹಿಳೆಯರ ಸಂಖ್ಯೆಯೇ ಅಧಿಕ. ಈ ಸಮುದಾಯವನ್ನು ಕಡೆಗಣಿಸುವುದೇ ಪ್ರಭುತ್ವದ ಧೋರಣೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಹುಸಿ ದೇಶಭಕ್ತಿ, ದೇಶಪ್ರೇಮದ ಹೆಸರಲ್ಲಿ ಆಹಾರದ ಮೇಲೆ ದಾಳಿ, ಉಡುವ ಬಟ್ಟೆ, ರೀತಿ ರಿವಾಜುಗಳಿಗೆ ಆಕ್ಷೇಪ ನಿರಂತರವಾಗಿದೆ. ಈ ಸಮುದಾಯ ಬಹುತೇಕ ಸ್ಲಂಗಳಲ್ಲಿ ವಾಸಿಸುತ್ತದೆ. ಸುತ್ತಮುತ್ತ ಗಬ್ಬು ನಾರುತ್ತಿದೆ.
ಉತ್ತಮ ಶಿಕ್ಷಣ ನೀಡುವ ವ್ಯವಸ್ಥೆ, ಆರೋಗ್ಯ ಸೌಲಭ್ಯಗಳು ಕೈಗೆಟಕುವ ದರದಲ್ಲಿ ಇಲ್ಲದೇ ಇರುವುದು ಎಲ್ಲ ಸೇರಿ ಬದುಕು ಅತಂತ್ರವಾಗಿದೆ. ರಾಜಕೀಯ ಪಕ್ಷಗಳು ಬರೀ ಓಟ್ ಬ್ಯಾಂಕ್ ಆಗಿ ನೋಡುವುದರಿಂದ ಕಾರ್ಮಿಕರಿಗೆ ಅದರಲ್ಲೂ ಮುಸ್ಲಿಂ ಕಾರ್ಮಿಕರಿಗೆ ಮತದಾನದ ಹಕ್ಕು ಬಿಟ್ಟು ಬೇರೆ ಯಾವ ಸೌಲಭ್ಯಗಳು, ಹಕ್ಕುಗಳು ಮರೀಚಿಕೆಯಾಗಿವೆ.
ಮೊನ್ನೆ ನವೆಂಬರ್ 26ರಂದು ದೇಶದಾದ್ಯಂತ 72ನೇ ಸಂವಿಧಾನ ಅನುಮೋದನೆ ದಿನವನ್ನು ಆಚರಿಸಲಾಯಿತು. ಸಂವಿಧಾನದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯ ಇಂದು ಗಾಳಿಗೆ ತೂರಲಾಗಿದೆ. ಇವತ್ತಿಗೂ ಹಸಿವು, ಬಡತನ, ನಿರುದ್ಯೋಗ ಕಾಡುತ್ತಿದೆ. ಉತ್ತಮ ವೇತನ, ಸಾಮಾಜಿಕ ಭದ್ರತೆಗಳಿಲ್ಲದೇ ಲಕ್ಷ ಲಕ್ಷ ಕಾರ್ಮಿಕರು ಇಂದು ಅಸಂಘಟಿತ ವಲಯದಲ್ಲಿ ಕಾರ್ಮಿಕರಾಗಿ ಹಂಚಿ ಹೋಗಿದ್ದಾರೆ. ಸರ್ಕಾರ ಗುರುತಿಸಿದ 74ನೇ ಅಸಂಘಟಿತ ಕ್ಷೇತ್ರಗಳಲ್ಲಿ ಬೀಡಿ ಕಾರ್ಮಿಕರೂ ಸೇರಿದ್ದಾರೆ.
40–50 ವರ್ಷಗಳಿಂದ ಈ ಕಾಯಕ ಮಾಡುತ್ತಿದ್ದರೂ ಪಿಎಫ್, ಬೋನಸ್, ಲಾಗ್ಬುಕ್ ಇಲ್ಲದೇ ಬೀಡಿ ಕಾರ್ಮಿಕರು ಜೀತದಾಳುಗಳಂತೆ ದುಡಿಯುತ್ತಿದ್ದಾರೆ. ಒಂದು ಕಡೆ ಕಾರ್ಮಿಕ ಇಲಾಖೆ, ಮಾಲೀಕ ವರ್ಗ, ಗುತ್ತಿಗೆದಾರರು ನಿರ್ಲಕ್ಷಿಸುತ್ತಿದ್ದರೆ, ಇನ್ನೊಂದು ಕಡೆ ಸರ್ಕಾರವೂ ಗಮನ ಕೊಡುತ್ತಿಲ್ಲ. ಒಟ್ಟಾರೆ ಜಿಲ್ಲೆಯಲ್ಲಾಗಲಿ, ರಾಜ್ಯದಲ್ಲಾಗಲಿ ಬೀಡಿ ಕಾರ್ಮಿಕರ ನಿಖರ ಮಾಹಿತಿಯು ಕಾರ್ಮಿಕ ಇಲಾಖೆಯಲ್ಲಿ ಸರ್ಕಾರದಲ್ಲಿ ಇಲ್ಲ.
ಅಸಂಘಟಿತ ಕಾರ್ಮಿಕರು ಘನತೆಯಿಂದ, ಗೌರವದಿಂದ ಬದುಕುವಂತೆ ಮಾಡಲು ಕನಿಷ್ಠ ದಿನಕ್ಕೆ 600 ರೂಪಾಯಿ ವೇತನ ನಿಗದಿ ಮಾಡಬೇಕು. ಈ ಕನಿಷ್ಠ ವೇತನವನ್ನು ಪಡೆಯಲು ಇನ್ನೆಷ್ಟು ಹೋರಾಟ ಮಾಡಬೇಕು? ಸರ್ಕಾರ ಯಾವಾಗ ಕಣ್ಣು ತೆರೆದು ಈ ಕಾರ್ಮಿಕರ ನೆರವಿಗೆ ಬರುತ್ತದೆ? ಎಂಬ ಪ್ರಶ್ನೆಗಳು ಮಾತ್ರ ನಿರಂತರವಾಗಿ ಉಳಿದಿದೆ.
ಜಬೀನಾಖಾನಂ, ಸಾಮಾಜಿಕ ಹೋರಾಗಾರ್ತಿ ಮತ್ತು ದಾವಣಗೆರೆ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷರು