ಬೆಳಗಾವಿ: ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮಂಜೂರಾಗಿದ್ದ ಅನುದಾನ ಬಿಡುಗಡೆಗಾಗಿ ಶೇ.5ರಷ್ಟು ಲಂಚ ಕೇಳಿದ್ದ ಬೆಳಗಾವಿಯ ಮುಜರಾಯಿ ಇಲಾಖೆ ತಹಶೀಲ್ದಾರ್ ಮತ್ತು ಅವರ ಸಂಬಂಧಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಶುಕ್ರವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
ಮುಜರಾಯಿ ತಹಶೀಲ್ದಾರ್ ದಶರಥ ನಕುಲ ಜಾಧವ ಹಾಗೂ ಅವರ ಸಂಬಂಧಿ ಸಂತೋಷ ಕಡೋಲಕರ ಬಂಧಿತ ಆರೋಪಿಗಳು.
ಜಿಲ್ಲೆಯ ರಾಮದುರ್ಗದಲ್ಲಿನ ಯಕಲಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯ ಆರಾಧನಾ ಯೋಜನೆಯಲ್ಲಿ ₹ 4 ಲಕ್ಷ ಮಂಜೂರಾಗಿತ್ತು. ಅನುದಾನ ಬಿಡುಗಡೆಗಾಗಿ ನಕುಲ ಜಾಧವ ಅವರು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಚಾರವಾಗಿ ದೇವಸ್ಥಾನದ ಸುಭಾಷ ಗೋಡಕೆ ಎನ್ನುವವರು ಎಸಿಬಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ತಹಶೀಲ್ದಾರ್ ಪರವಾಗಿ ಲಂಚ ಪಡೆಯುತ್ತಿದ್ದ ಅವರ ಸಂಬಂಧಿಯನ್ನು ಬಂಧಿಸಿದ್ದಾರೆ. ಬಳಿಕ ಇದೇ ಪ್ರಕರಣದಲ್ಲಿ ತಹಶೀಲ್ದಾರ್ ಜಾಧವ್ ಅವರನ್ನೂ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಸಿಬಿ ಎಸ್ಪಿ ಬಿ. ಎಸ್. ನೇಮಗೌಡ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಅಡಿವೇಶ ಗುದಿಗೊಪ್ಪ ಹಾಗೂ ಸುನೀಲಕುಮಾರ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.