Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿಎಸಿಬಿ ದಾಳಿಗೊಳಗಾಗಿದ್ದ ನಾಥಾಜಿ ‍‍ಪಾಟೀಲ ಅಮಾನತು

ಎಸಿಬಿ ದಾಳಿಗೊಳಗಾಗಿದ್ದ ನಾಥಾಜಿ ‍‍ಪಾಟೀಲ ಅಮಾನತು

ಬೆಳಗಾವಿ: ನಗರದಲ್ಲಿ ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ದಾಳಿಗೆ ಒಳಗಾಗಿದ್ದ ಹೆಸ್ಕಾಂ ಉಪವಿಭಾಗ–3ರ ಮಹಾಂತೇಶ ನಗರ ಶಾಖೆಯ ಲೈನ್‌ ಮೆಕ್ಯಾನಿಕ್‌ ಗ್ರೇಡ್‌–2 ನಾಥಾಜಿ ಪಾಟೀಲ ಅವರನ್ನು ನ.24ರಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಕಾರ್ಯಪಾಲಕ ಎಂಜಿನಿಯರ್ ಗುರುವಾರ ಆದೇಶಿಸಿದ್ದಾರೆ.

‘ಈ ನೌಕರನ ವಿರುದ್ಧದ ಪ್ರಕರಣ ತನಿಖೆಯ ಹಂತದಲ್ಲಿದೆ. ಅವರು ಚರ ಮತ್ತು ಸ್ಥಿರಾಸ್ತಿಯನ್ನು ವಿಲೇ ಮಾಡಬಹುದು. ಖಾಸಗಿ ವ್ಯಕ್ತಿಗಳೊಂದಿಗೆ ಮಾಡಿದ ಹಣದ ವ್ಯವಹಾರಗಳನ್ನು, ಅವರಿಗೆ ಹೆದರಿಸುವ ಮೂಲಕ ಸಾಕ್ಷಿಗಳನ್ನು ನಾಶಪಡಿಸಬಹುದು ಮತ್ತು ಬೇನಾಮಿ ವ್ಯವಹಾರಗಳನ್ನು ಮುಚ್ಚಿ ಹಾಕಿ ತನಿಖಾಧಿಕಾರಿಗೆ ಮಾಹಿತಿ ಲಭ್ಯವಾಗದಂತೆ ಮಾಡುವ ಸಾಧ್ಯತೆ ಇರುವುದರಿಂದಾಗಿ ಅಮಾನತಿನಲ್ಲಿಡಬೇಕು’ ಎಂದು ಎಸಿಬಿ ಎಸ್ಪಿ ಹೆಸ್ಕಾಂಗೆ ಪತ್ರ ಬರೆದಿದ್ದರು.

ಇದನ್ನು ಆಧರಿಸಿ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.‘ಸಿ’ ದರ್ಜೆ ನೌಕರರಾದ ನಾಥಾಜಿ, ಅವರ ವೈಭವ ನಗರದ ಮನೆ, ಪತ್ನಿ ತಮ್ಮ ವಾಸಿಸುವ ಕಂಗ್ರಾಳಿ ಬಿ.ಕೆ. ಗ್ರಾಮದ ಮರಾಠಾ ಕಾಲೊನಿಯ ಮನೆ ಹಾಗೂ ಶ್ರೀನಗರ ಹೆಸ್ಕಾಂ ಶಾಖೆಯ ಕಚೇರಿ ಮೇಲೆ ಎಸಿಬಿಯವರು ದಾಳಿ ನಡೆಸಿದ್ದರು.

ಬಿ.ಕೆ. ಕಂಗ್ರಾಳಿಯ ಮನೆ, 2 ಪ್ಲಾಟ್, ನಿರ್ಮಾಣ ಹಂತದಲ್ಲಿರುವ 2 ಮನೆ, ಕಾರು, ದ್ವಿಚಕ್ರವಾಹನ, ₹ 10.80 ಲಕ್ಷ ಮೌಲ್ಯದ 239.670 ಗ್ರಾಂ. ಬಂಗಾರ, ₹ 1.18 ಲಕ್ಷ ಮೌಲ್ಯದ 1,803 ಗ್ರಾಂ. ಬೆಳ್ಳಿ ಆಭರಣಗಳು, ₹ 20 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, ₹ 38,766 ನಗದು ಪತ್ತೆಯಾಗಿದೆ. ಬಲ್ಲ ಮೂಲಗಳಿಗಿಂತ ಒಟ್ಟು ₹ 1.83 ಕೋಟಿ (ಶೇ.141ರಷ್ಟು) ಮೌಲ್ಯದ ಹೆಚ್ಚಿನ ಅಕ್ರಮ ಸಂಪತ್ತು ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದರು.