ಹುಬ್ಬಳ್ಳಿ: ನಗರದ ಉತ್ತರ ಸಂಚಾರ ಪೊಲೀಸ್ ಠಾಣೆಯ ಎಸ್ಐಎ ಪುರಾಣಿಕಮಠ ಅವರ ಮೇಲೆ ಪಕ್ಕದ ಮನೆಯ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಹಳೇ ಹುಬ್ಬಳ್ಳಿಯ ಸಹದೇವ ನಗರದಲ್ಲಿ ಸೋಮವಾರ ನಡೆದಿದೆ.
ಪಕ್ಕದ ಮನೆಯ ಭರತೇಶ ಹಲ್ಲೆ ನಡೆಸಿದ ವ್ಯಕ್ತಿ. ಕ್ಷುಲ್ಲಕ ಕಾರಣಕ್ಕಾಗಿ ಬೆಳಿಗ್ಗೆ ಪುರಾಣಿಕಮಠ ಅವರೊಂದಿಗೆ ಜಗಳ ತೆಗೆದ ಭರತೇಶ ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದಾನೆ. ತಲೆಯಿಂದ ತೀವ್ರ ರಕ್ತಸ್ರಾವವಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.