ಒಂದು ಹುಲ್ಲಿನ ಕ್ರಾಂತಿ ಪುಸ್ತಕವು ಹನ್ನೊಂದನೇ ಮರು ಮುದ್ರಣಗೊಂಡಿದೆ. ಸುಮಾರು 22000 ಕ್ಕೂ ಹೆಚ್ಚು ಪುಸ್ತಕಗಳು ಮಾರಾಟವಾಗಿವೆ, ಎಂದು ತಿಳಿಸಲು ಸಂತೋಷವೆನಿಸುತ್ತದೆ. ಈ ಪುಸ್ತಕ ಮೊದಲು ಮುದ್ರಣಗೊಂಡಾಗ ನನಗೆ 28 ವರ್ಷ.ಈಗ ನನಗೆ 60 ವರ್ಷ. ನನ್ನ ಬದುಕಿನ ದಿಕ್ಕನ್ನೇ ಬದಲಿಸಿದ ಪುಸ್ತಕ ಇದು. ಇದರ ಇಂಗ್ಲೀಷ್ ಮೂಲವನ್ನು ನಾನು ಮೊದಲ ಬಾರಿಗೆ ಓದಿದಾಗ ಆದ ರೋಮಾಂಚನ ನನ್ನಲ್ಲಿ ಇನ್ನೂ ಹಸಿರಾಗಿದೆ. ಈಗಲೂ ಆ ಪುಸ್ತಕವನ್ನು ಓದಿದಾಗ ಅದೇ ಅನುಭವವಾಗುತ್ತದೆ.
ಫುಕುವೊಕಾ ಅವರ ಈ ಅನುಭವ ಮತ್ತು ಚಿಂತನೆಯಿಂದ ಪ್ರಪಂಚ ಋಜು ದಿಕ್ಕಿನಲ್ಲಿ ಚಲಿಸಬೇಕಿತ್ತು. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿರುವ ಸಮಾಜಕ್ಕೆ ಅವುಗಳ ಇತಿ ಮತಿಗಳು ಅರ್ಥವಾಗುತ್ತಿಲ್ಲ. ಜೊತೆಗೆ ನೈತಿಕ ಅಧ: ಪತನವೂ ಸೇರಿ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಇಂದು ನಡೆದಿದೆ. ಅರಿತವರು ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ಮುಂದಿನ ಮೂವತ್ತು ವರ್ಷದಲ್ಲಿ ನಮ್ಮ ಜೀವನ ವಿಧಾನವನ್ನು ಬದಲಿಸಿಕೊಳ್ಳದಿದ್ದರೆ ಹವಾಮಾನದಲ್ಲಿ ಆಗಲಿರುವ ಬದಲಾವಣೆಗಳನ್ನು ಮನುಷ್ಯನು ಎದುರಿಸಿ ಬದುಕುವುದೇ ಸವಾಲಗಲಿದೆ ಎನ್ನುತ್ತಿದ್ದಾರೆ. ಆದರೆ ಈ ಮಾತು ಎಷ್ಟು ಜನರಿಗೆ ಅರ್ಥವಾಗುತ್ತಿದೆ? ಎಷ್ಟು ಸರ್ಕಾರಗಳ ಅರಿವಿಗೆ ಬರುತ್ತಿದೆ?
ಒಂದು ಹುಲ್ಲಿನ ಕ್ರಾಂತಿಯಂತಹ ಪುಸ್ತಕಗಳು ಮರು ಮುದ್ರಣಗೊಳ್ಳುತ್ತಿವೆ ಎಂದರೆ, ಜನ ಸಾಮಾನ್ಯರಿಗೆ ಅವುಗಳ ವಿಚಾರಗಳು ಇಷ್ಟವಾಗುತ್ತಿವೆ ಎಂದೇ ಅರ್ಥ. ಅವರೇ ಏನಾದರೂ ಬದಲಾವಣೆಯ ದಾರಿಗಳನ್ನು ಹುಡುಕಬೇಕು.ಒಂದು ಹುಲ್ಲಿನ ಕ್ರಾಂತಿ ಕೇವಲ ಹೊಲದಲ್ಲಿ ಬೆಳೆಯುವ ಕೃಷಿಗೆ ಸಂಬಂಧಿಸಿದ ಪುಸ್ತಕವಲ್ಲ. ಮನದಲ್ಲಿ ಬೆಳೆಯಬೇಕಾದ ಬೆಳೆಯ ಬಗೆಗಿನ ಪುಸ್ತಕವೂ ಹೌದು. ಹಾಗಾಗಿ ಇದು ಎಲ್ಲರಿಗೂ ಸಲ್ಲಬೇಕಾದ ವಿಚಾರ.
1988 ರಲ್ಲಿ ಮುಂದೆ ನನ್ನ ಬಾಳ ಸಂಗಾತಿಯಾದ ಗೀತಾ ಅವರು ಒಂದೊಂದೇ ಅಧ್ಯಾಯವನ್ನು ಟೈಪ್‌ರೈಟರ್‌ನಲ್ಲಿ ಟೈಪಿಸಿಕೊಟ್ಟಿದ್ದು, ದೊಡ್ಡಬಳ್ಳಾಪುರದಲ್ಲಿದ್ದ ಗೆಳೆಯ ಕೆ.ಪಿ.ಸುರೇಶ ಅದನ್ನು ತಿದ್ದಿ ಅಂಚೆಯಲ್ಲಿ ಹಿಂದಿರುಗಿಸುತ್ತಿದ್ದದ್ದು, ನಾಗೇಶ ಹೆಗಡೆ ಅದಕ್ಕೆ ಮುನ್ನುಡಿ ಬರೆದು ಕೊಟ್ಟದ್ದು .ತೇಜಸ್ವಿ,, ಲಂಕೇಶ್ ಅವರನ್ನು ಒಳಗೊಂಡು ಹಲವಾರು ಜನ ಇದಕ್ಕೆ ಪ್ರತಿಕ್ರಿಯಿಸಿದ್ದು ಎಲ್ಲವೂ ಹಸಿರಾಗಿದೆ. ಅದೇ ಸಮಯದಲ್ಲಿ ಮೂವತ್ತೈದು ವರ್ಷಗಳ ಹಿಂದೆ ಕಂಡ ಕನಸು ನನಸಾಗದೇ ಹಾಗೆ ಉಳಿದು ಮತ್ತಷ್ಟು ಬಿಕ್ಕಟ್ಟಿನೆಡೆಗೆ ಪ್ರಪಂಚ ಚಲಿಸುತ್ತಿರುವುದು ಆತಂಕ ತರುತ್ತಿದೆ. ನಾನು ಮತ್ತೆ, ಮತ್ತೆ ಫುಕುವೊಕಾ ಅವರ ಈ ಪುಸ್ತಕದ ಅನೇಕ ಸಾಲುಗಳನ್ನು ಓದುತ್ತೇನೆ. ನಾಳಿನ ಒಳಿತಿಗಾಗಿ ಅದರಿಂದ ಸ್ಫೂರ್ತಿ ಪಡೆಯುತ್ತೇನೆ. ದೀಪಾವಳಿ ನಮ್ಮೆಲ್ಲರ ಮನದಲ್ಲಿ ಹೊಸ ಬೆಳಕನ್ನು ಹಚ್ಚಲಿ.ಈ ಪುಸ್ತಕ ಮರು ಮುದ್ರಣಕ್ಕೆ ಬಂದಾಗಲೆಲ್ಲಾ ಗೆಳೆಯ ಸಚ್ಚಿದಾನಂದ ಅದಕ್ಕೊಂದು ಹೊಸ ರೂಪ ಕೊಡುತ್ತಾ ಬಂದಿದ್ದಾರೆ. ಈ ಬಾರಿ ಪುಸ್ತಕವನ್ನು ಕ್ರೌನ್ ಅಷ್ಟಾಕೃತಿಗೆ ಇಳಿಸಿ ಸುಂದರವಾದ ಹೊಸ ರಕ್ಷಾ ಕವಚವನ್ನು ವಿನ್ಯಾಸಗೊಳಿಸಿದ್ದಾರೆ. ನಿಮಗೂ ಸಹ ಅದು ಇಷ್ಟವಾಗುತ್ತದೆ ಎಂಬ ಭರವಸೆ ನಮಗಿದೆ. ಹೆಚ್ಚಾದ ಮುದ್ರಣ ವೆಚ್ಚದಿಂದಾಗಿ ಪುಸ್ತಕದ ಬೆಲೆ 200 ರೂ. ಆಗಿದೆ.
ಆಸಕ್ತರು 9620670624 (ನಿರ್ಮಲಾ ವೈ. ಆರ್) ದೂರವಾಣಿ ಸಂಖ್ಯೆಗೆ ಎರಡು ನೂರು ಕಳುಹಿಸಿ ಪುಸ್ತಕ ಪಡೆಯಬಹುದಾಗಿದೆ.
ಸಂತೋಷ ಕೌಲಗಿ