ಧಾರವಾಡ: ತಾಲ್ಲೂಕಿನ ಅಮ್ಮಿನಭಾವಿ ಬಳಿ ಇರುವ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯ ಮಲಪ್ರಭಾ ನೀರು ಸರಬರಾಜು ಪೈಪ್‌ಲೈ್ನ್ ಒಡೆದು ಅಪಾರ ಪ್ರಮಾಣ ನೀರು ವ್ಯರ್ಥವಾಗಿ ಹರಿದಿದೆ. ರಸ್ತೆಯಲ್ಲೇ ಕಾರಂಜಿ ನಿರ್ಮಾಣವಾದ ದೃಶ್ಯ ಕಂಡು ಬಂದಿದೆ.
750 ಮಿ.ಮೀ. ವ್ಯಾಸದ ಎಂಎಸ್ ಕೊಳವೆ ಗುರುವಾರ ಮಧ್ಯಾಹ್ನ ಒಡೆಯಿತು. ಇದರಿಂದಾಗಿ ಸವದತ್ತಿ ಮಾರ್ಗದಲ್ಲಿ ನೀರು ಪ್ರವಾಹದಂತೆ ಹರಿಯಿತು. ಈ ಸಂದರ್ಭದಲ್ಲಿ ವಾಹನ ಸಂಚಾರಕ್ಕೂ ಸಮಸ್ಯೆ ಉಂಟಾಯಿತು.
ಕೂಡಲೇ ಸ್ಥಳಕ್ಕೆ ಧಾವಿಸಿದ ಜಲಮಂಡಳಿ ಅಧಿಕಾರಿಗಳು ಅಮ್ಮಿನಭಾವಿ ನೀರು ಶುದ್ಧೀಕರಣ ಹಾಗೂ ಸರಬರಾಜು ಘಟಕದಿಂದ ನೀರು ಪೂರೈಕೆ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾದರು.
ವಿದ್ಯುತ್ ಪೂರೈಕೆಯಲ್ಲಿ ಆಗಾಗ ವ್ಯತ್ಯಯದಿಂದ ಉಂಟಾಗುವ ಹಿಮ್ಮುಖ ಒತ್ತಡವು ಕೊಳವೆ ಒಡೆಯಲು ಕಾರಣ. ಶುಕ್ರವಾರ ಸಂಜೆಯ ಹೊತ್ತಿಗೆ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ಮಾರ್ಗದಲ್ಲಿ ಮತ್ತು ಧಾರವಾಡದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ.