Saturday, December 14, 2024
Homeಸುದ್ದಿಕತ್ತಿಯೊಂದಿಗೆ ಮಸೀದಿಗೆ ನುಗ್ಗಲು ಯತ್ನಿಸಿದ ವ್ಯಕ್ತಿ ಬಂಧನ

ಕತ್ತಿಯೊಂದಿಗೆ ಮಸೀದಿಗೆ ನುಗ್ಗಲು ಯತ್ನಿಸಿದ ವ್ಯಕ್ತಿ ಬಂಧನ

ಮಂಗಳೂರು: ಬಂಟ್ವಾಳ ತಾಲ್ಲೂಕಿನ ಮಿತ್ತಬೈಲ್ ಮಸೀದಿಗೆ ಕತ್ತಿಯೊಂದಿಗೆ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಸ್ಥಳದಲ್ಲಿದ್ದವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಂಗಳವಾರ ರಾತ್ರಿ ಸ್ಕೂಟರ್‌ನಲ್ಲಿ ಬಂದಿದ್ದ ಕಲ್ಲಡ್ಕ ನಿವಾಸಿ ಬಾಬು, ಮಸೀದಿಯ ಸಮೀಪ ಅನುಮಾನಾಸ್ಪವಾಗಿ ವರ್ತಿಸುತ್ತಿದ್ದ. ಮಸೀದಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದವರು ಆತನನ್ನು ವಿಚಾರಿಸಿದ್ದಾರೆ.

ಆರಂಭದಲ್ಲಿ ‘ನಾನು ಮಡಿಕೇರಿಯಿಂದ ಬಂದಿದ್ದು, ಪ್ರಾರ್ಥನೆ ಮಾಡಲು ಧರ್ಮ ಗುರು ಬೇಕು’ ಎಂದು ಹೇಳಿದ್ದಾನೆ. ನಂತರ ‘ನಾನು ಮಸೀದಿಯ ಗುರುಗಳನ್ನು ಹತ್ಯೆ ಮಾಡಲು ಬಂದಿದ್ದು, ನೀವು ಏನೂ ಮಾಡಲು ಸಾಧ್ಯವಿಲ್ಲ’ ಎಂದಿದ್ದಾನೆ. ಕೂಡಲೇ ಆತನನ್ನು ಹಿಡಿದ ಕೆಲಸಗಾರರು, ಸ್ಕೂಟರ್ ಪರಿಶೀಲಿಸಿದಾಗ ಅದರಲ್ಲಿ ಕತ್ತಿ ಸಿಕ್ಕಿದೆ.

ನಂತರ ಮಸೀದಿ ಆಳಿತ ಕಮಿಟಿಯವರಿಗೆ ಮಾಹಿತಿ ನೀಡಿದ್ದು, ಕಮಿಟಿಯವರು ಆತನನ್ನು ವಿಚಾರಿಸಿದಾಗ ಕಲ್ಲಡ್ಕದ ನಿವಾಸಿ, ಹೆಸರು ಬಾಬು ಎಂದು ಹೇಳಿದ್ದಾನೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಯಾವುದೋ ದುರುದ್ದೇಶದಿಂದ ಆಯುಧದೊಂದಿಗೆ ಮಸೀದಿಗೆ ಬಂದಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಸೋನಾವಣೆ ತಿಳಿಸಿದ್ದಾರೆ.