Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆಕರಿಬಸವೇಶ್ವರ ಸ್ವಾಮಿಯ ರಥ ಎಳೆದ ಮಹಿಳೆಯರು

ಕರಿಬಸವೇಶ್ವರ ಸ್ವಾಮಿಯ ರಥ ಎಳೆದ ಮಹಿಳೆಯರು

ದಾವಣಗೆರೆ:‌ ಯರಗುಂಟೆಯಲ್ಲಿ ಗುರು ಕರಿಬಸವೇಶ್ವರ ಸ್ವಾಮಿಯ ರಥವನ್ನು ಮಹಿಳೆಯರೇ ಎಳೆಯುವ ಮೂಲಕ ಪ್ರತಿ ವರ್ಷದ ವೈಶಿಷ್ಟ್ಯ ಗುರುವಾರವೂ ಮುಂದುವರಿಯಿತು.

ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದ ಪರಮೇಶ್ವರ ಸ್ವಾಮೀಜಿ ಇದೇ ಸಂದರ್ಭದಲ್ಲಿ ಮಾತನಾಡಿ, ‘ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿದಿದ್ದಾರೆ. ಸಂಸಾದರ ನೊಗ ಎಳೆಯುತ್ತಿರುವ ಜತೆಗೆ ಸಾಮಾಜಿಕ ಕ್ಷೇತ್ರಗಳನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. 2028ರ ವೇಳೆಗೆ ಈ ರಾಜ್ಯದಲ್ಲಿ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ’ ಎಂದು ಭವಿಷ್ಯ ನುಡಿದರು.

ಪ್ರತಿವರ್ಷ ಮಹಿಳೆಯರಿಂದಲೇ ರಥೋತ್ಸವ ಎಳೆಸುವ ಕಾರ್ಯಕ್ರಮವನ್ನು ಸಾಂಗವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇದು ಗುರು ಕರಿಬಸವೇಶ್ವರರ ಆಶಯವಾಗಿತ್ತು. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವುದರ ಜೊತೆಗೆ ಮಹಿಳೆಯರಿಗೂ ಸಮಾನತೆಯನ್ನು ನೀಡಿದ ಕೀರ್ತಿ ಗುರು ಕರಿಬಸವೇಶ್ವರರಿಗೆ ಸಲ್ಲುತ್ತದೆ ಎಂದರು.

ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ‘ಕರಿಬಸವೇಶ್ವರರು ಕೇವಲ ದೆವ್ವ ಭೂತಗಳನ್ನು ಬಿಡಿಸಲಿಲ್ಲ. ಭಕ್ತರ ಮನಸಿನಲ್ಲಿ ಗಾಢವಾಗಿದ್ದ ಅಜ್ಞಾನ, ಅಂಧಾನುಕರಣೆಗಳನ್ನು ದೂರ ಮಾಡಿದರು. ಮಹಿಳೆಯರಿಂದ ರಥೋತ್ಸವ ಎಳೆಸುವ ಮೂಲಕ ಹೊಸ ಚಿಂತನೆಗಳಿಗೆ ಸಮಾಜವನ್ನು ಕೊಂಡೊಯ್ದರು’ ಎಂದರು.

ಹಾಲಸ್ವಾಮಿ ವಿರಕ್ತಮಠದ ಡಾ.ಬಸವಜಯಚಂದ್ರ ಮಹಾಸ್ವಾಮೀಜಿ, ‘ಸೇವಾ ಮನೋಭಾವ ಇರುವವರು ಮಾತ್ರ ನಿಜವಾದ ಭಕ್ತರಾಗಲು ಸಾಧ್ಯ. ಆದರೆ ಇಂದು ಅಂಥ ಮನೋಭಾವ ಕಡಿಮೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ರಥೋತ್ಸವದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.