ಬೆಳಗಾವಿ: ಕೆಲಸ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಅಂಗವಿಕಲರ ಹಾಗೂ ವಿವಿಧೋದ್ದೇಶ (ಎಂಆರ್ಡಬ್ಲ್ಯು), ಗ್ರಾಮೀಣ ಮತ್ತು ನಗರ ಪುನರ್ವಸತಿ (ವಿಆರ್ಡಬ್ಲ್ಯು ಹಾಗೂ ಯುಆರ್ಡಬ್ಲ್ಯು) ಕಾರ್ಯಕರ್ತರ ಒಕ್ಕೂಟದ ಸದಸ್ಯರಾದ ಅಂಗವಿಕಲರು ತಾಲ್ಲೂಕಿನ ಸುವರ್ಣ ವಿಧಾನಸೌಧದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
‘ವಿವಿಧೋದ್ದೇಶ, ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರ (ನೌಕರರ) ಕ್ಷೇಮಾಭಿವೃದ್ಧಿ ಅಧಿನಿಯಮ ಜಾರಿಗೊಳಿಸಿ, ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್ಡಬ್ಲ್ಯುಗಳನ್ನು ತಾಲ್ಲೂಕು ಅಂಗವಿಕಲರ ಅಧಿಕಾರಿಯನ್ನಾಗಿ, ವಿಆರ್ಡಬ್ಲ್ಯುಗಳನ್ನು ಗ್ರಾಮ ಮಟ್ಟದ ಅಭಿವೃದ್ಧಿ ಸಹಾಯಕರನ್ನಾಗಿ ಹಾಗೂ ಯುಆರ್ಡಬ್ಲ್ಯುಗಳನ್ನು ನಗರ ಅಂಗವಿಕಲರ ಅಭಿವೃದ್ಧಿ ಸಹಾಯಕರನ್ನಾಗಿ ಹುದ್ದೆಗಳನ್ನು ಸೃಜಿಸಿ ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ವಯೋನಿವೃತ್ತಿ ಹೊಂದುವ ನೌಕರರಿಗೆ ನಿವೃತ್ತಿ ಇಡುಗಂಟಾಗಿ ಎಂಆರ್ಡಬ್ಲ್ಯುಗಳಿಗೆ ₹ 25 ಲಕ್ಷ ಹಾಗೂ ಉಳಿದವರಿಗೆ ₹ 20 ಲಕ್ಷ ನೀಡಬೇಕು. ಆಕಸ್ಮಿಕ ದುರ್ಘಟನೆಗಳಿಗೆ ಗುರಿಯಾಗಿ ಮರಣ ಹೊಂದಿದರೆ ಕುಟುಂಬದವರಿಗೆ ನೀಡುವ ಪರಿಹಾರ ಧನವನ್ನು ₹ 59ಸಾವಿರದಿಂದ ಸರಾಸರಿ ₹ 25 ಲಕ್ಷದಿಂದ ₹ 30 ಲಕ್ಷ ಕೊಡಬೇಕು’ ಎಂದು ಆಗ್ರಹಿಸಿದರು.
‘ಎಸಿಡಿಪಿಒ ಅವರನ್ನು ಅಂಗವಿಕಲರ ಯೋಜನೆಗಳ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಹೊರಡಿಸಿದ ಅಧಿಸೂಚನೆ ರದ್ದುಪಡಿಸಬೇಕು. ರಾಜ್ಯ ಅಂಗವಿಕಲ ಅಧಿನಿಯಮ ಆಯುಕ್ತರ ಹುದ್ದೆಗೆ ಅಂಗವಿಕಲರನ್ನೇ ನೇಮಿಸಬೇಕು. ಕೊರೊನಾ ಯೋಧರಿಗೆ ನೀಡುವ ಪರಿಹಾರ ಧನವನ್ನು ನಮಗೂ ಕಲ್ಪಿಸಬೇಕು. ಸರ್ಕಾರಿ ನೌಕರರಿಗೆ ದೊರೆಯುವ ಎಲ್ಲ ಸೌಲಭ್ಯಗಳನ್ನೂ ಒದಗಿಸಬೇಕು. ಅಂಗವಿಕಲರಿಗೆ ಮೀಸಲಾದ ಬ್ಯಾಕ್ಲಾಗ್ ಹುದ್ದೆಗಳಿಗೆ ಕೂಡಲೇ ನೇಮಕಾತಿ ಮಾಡಬೇಕು. ಮಾಸಾಶನವನ್ನು ₹ 5ಸಾವಿರಕ್ಕೆ ಹೆಚ್ಚಿಸಬೇಕು. ಪಟ್ಟಣ ಪಂಚಾಯ್ತಿಗಳಿಗೂ ವಿಆರ್ಡಬ್ಲ್ಯುಗಳನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.
ಅಧ್ಯಕ್ಷ ಕೆ. ಸುಬ್ರಹ್ಮಣ್ಯಂ, ರಾಜ್ಯ ಸಂಚಾಲಕ ಜೆ. ದೇವರಾಜು ಹಾಗೂ ರಾಜ್ಯ ಘಟಕದ ಕಾರ್ಯದರ್ಶಿ ಎಸ್. ಕೃಷ್ಣಪ್ಪ ನೇತೃತ್ವ ವಹಿಸಿದ್ದರು.