ನವದೆಹಲಿ: ಧಾರವಾಡದವರಾದ ಭಾರತೀಯ ಸೇನೆಯ ಕುಸ್ತಿಪಟು ರಫಿಕ್ ಹೊಳಿ ಅವರು ದೆಹಲಿಯಲ್ಲಿ ನಡೆದ ಇಂಟರ್ ಸರ್ವೀಸಸ್ ಕುಸ್ತಿ ಚಾಂಪಿಯನ್ಷಿಪ್ನ 77 ಕೆ.ಜಿ. ಗ್ರೀಕೊ ರೋಮನ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ರಫಿಕ್ ಹೊಳಿ ಅವರು ಮಹಾರಾಷ್ಟ್ರದ ಶಿವಾಜಿ ಪಾಟೀಲ್ ವಿರುದ್ಧ 8–0ರಲ್ಲಿ ಗೆಲುವು ಸಾಧಿಸಿದರು. ಇದಕ್ಕೂ ಮೊದಲು ನಡೆದ ಮೊದಲ ಪಂದ್ಯದಲ್ಲಿ ರಫಿಕ್ ಅವರು 8–2ರಲ್ಲಿ ಹರಿಯಾಣದ ಸೋನು ಅವರನ್ನು ಮಣಿಸಿದ್ದರು. ಇನ್ನೊಂದು ಪಂದ್ಯದಲ್ಲಿ ದೆಹಲಿಯ ಮಜಿತ್ ವಿರುದ್ಧ 5–3ರಲ್ಲಿ ಗೆಲುವು ಸಾಧಿಸಿದ್ದರು.
ಭೋಪಾಲ್ನ 3 ಇಎಂಇ ರೆಜಿಮೆಂಟ್ನಲ್ಲಿ ಹವಾಲ್ದಾರ್ ಆಗಿರುವ ರಫಿಕ್ ಅವರು ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ನಲ್ಲಿ ಕುಸ್ತಿ ಅಭ್ಯಾಸ ಮಾಡುತ್ತಿದ್ದಾರೆ. ಮುಂದಿನ ವರ್ಷ ಇರಾನ್ನಲ್ಲಿ ನಡೆಯಲಿರುವ ವಿಶ್ವ ಕುಸ್ತಿ ಚಾಂಪಿಯನ್ಷಿಪ್ಗೆ ತಾಲೀಮು ನಡೆಸುತ್ತಿದ್ದಾರೆ.
ರಫಿಕ್ ಅವರು ಈ ಹಿಂದೆ ದಾವಣಗೆರೆಯ ಕ್ರೀಡಾ ವಸತಿನಿಲಯದಲ್ಲಿದ್ದುಕೊಂಡು ಅಂತರರಾಷ್ಟ್ರೀಯ ತರಬೇತುದಾರ ಶಿವಾನಂದ ಆರ್. ಅವರ ಬಳಿ ಕುಸ್ತಿ ತರಬೇತಿ ಪಡೆದುಕೊಂಡಿದ್ದರು.