ಕೊಡಗು ಜಿಲ್ಲೆ: ‘ಅಂಬೇಡ್ಕರ್ ಜಿಂದಾಬಾದ್’ ಎಂಬ ವಿಡಿಯೊ ತಿರುಚಿ ಪಾಕಿಸ್ತಾನ್ ಜಿಂದಾಬಾದ್ ಎಂದು ಮಾಡಿದ್ದ ಪ್ರಕರಣ ಸಂಬಂಧ ಶನಿವಾರಸಂತೆ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎನ್.ರಘು, ಮಾಜಿ ಸದಸ್ಯ ಹಾಗೂ ಪತ್ರಕರ್ತ ಎಚ್.ಆರ್.ಹರೀಶ್ ಕುಮಾರ್, ಕುಶಾಲನಗರದ ಗಿರೀಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಗುಪ್ತದಳ ವಿಭಾಗದ ಸಿಬ್ಬಂದಿ ಪ್ರದೀಪ್ ಕುಮಾರ್ ಮೂವರ ವಿರುದ್ಧ ದೂರು ನೀಡಿದ್ದಾರೆ.
ನ.12ರ ಸಂಜೆ ಸ್ವಸಹಾಯ ಸಂಘದ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಪ್ರಕರಣವೊಂದರ ಸಂಬಂಧ ಅಮಾಯಕರ ಬಂಧಿಸದಂತೆ ಆಗ್ರಹಿಸಿ, ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದರು. ಆಗ ‘ಅಂಬೇಡ್ಕರ್ ಜಿಂದಾಬಾದ್’ ಎಂಬ ಘೋಷಣೆ ಕೂಗಿ, ನಂತರ ಅಲ್ಲಿಂದ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನ.13ರಂದು ಎಸ್.ಎನ್.ರಘು, ಎಚ್.ಆರ್.ಹರೀಶ್ ಕುಮಾರ್ ಅವರು ಮುಸ್ಲಿಂ ಮಹಿಳೆಯರು ಧರಣಿ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ. ಹಿಂದೂ ಸಂಘಟನೆಗಳ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಬಂದಿದೆ ಎಂದು ಆಪಾದಿಸಿ, ಶನಿವಾರಸಂತೆ ಬಂದ್‌ಗೆ ಕರೆ ನೀಡಿದ್ದರು.
ಇಬ್ಬರ ಮಾತಿನಿಂದ ಪ್ರಚೋದನೆಗೆ ಒಳಗಾದ ಗಿರೀಶ್ ತನ್ನ ಮೊಬೈಲ್‌ನಿಂದ ಧರಣಿ ವಿಡಿಯೊವನ್ನು ವಿವಿಧ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ಷೇರ್ ಮಾಡಿ, ಮುಸ್ಲಿಂ ಮಹಿಳೆಯರು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ. ದೇಶ ವಿರೋಧಿಗಳನ್ನು ಬಂಧಿಸಬೇಕು. ಅವರ ವಿರುದ್ಧ ಕೇಸ್ ದಾಖಲಿಸಬೇಕು’ ಎಂದು ಬರೆದಿದ್ದರು. ಅದು ಎಲ್ಲೆಡೆ ಹರಿದಾಡಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಕೋಮು ಸೌಹಾರ್ದ ಕದಡಿ, ಕೊಡಗು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಬೆಳವಣಿಗೆಗಳು ನಡೆಯುತ್ತಿವೆ. ಪೊಲೀಸರು ಇದಕ್ಕೆ ಅವಕಾಶ ನೀಡಬಾರದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮುಸ್ಲಿಂ ಸಮುದಾಯದ ಮುಖಂಡರು ಕೋರಿ, ಎಸ್‌ಪಿಗೆ ಮನವಿ ಸಲ್ಲಿಸಿದ್ದಾರೆ.