ಉಡುಪಿ: ಕೋಟತಟ್ಟುವಿನ ಕೊರಗರ ಕಾಲೊನಿಯಲ್ಲಿ ಕೊರಗರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಬ್ರಹ್ಮಾವರದ ಕೋಟತಟ್ಟು ಗ್ರಾಮ ಪಂಚಾಯಿತಿಯ ಕೊರಗರ ಕಾಲೊನಿಗೆ ಭೇಟಿನೀಡಿದ ಸಚಿವರು, ಈಗಾಗಲೇ ಪ್ರಕರಣದಲ್ಲಿ ಕೋಟ ಪಿಎಸ್‌ಐ ಅಮಾನತಾಗಿದ್ದು, ಐವರು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಕೊರಗರ ಮೇಲಿನ ದೌರ್ಜನ್ಯ ಹಾಗೂ ಅವರ ವಿರುದ್ಧ ದಾಖಲಾಗಿರುವ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಹಲ್ಲೆ ನಡೆಸಿದ ಪ್ರಕರಣವನ್ನು ಸಿಒಡಿ ತನಿಖೆಗೊಳಪಡಿಸಲಾಗುವುದು. ಸತ್ಯಾಸತ್ಯತೆ ಹೊರಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಕೊರಗರ ಮೇಲೆ ಹಲ್ಲೆ ನಡೆದು ಎರಡ್ಮೂರು ದಿನಗಳ ಬಳಿಕ ಕಾನ್‌ಸ್ಟೇಬಲ್‌ವೊಬ್ಬರು ಆಸ್ಪತ್ರೆಗೆ ದಾಖಲಾಗಿ, ಕೊರಗರ ವಿರುದ್ಧ ಸರ್ಕಾರಿ ನೌಕರಿಗೆ ಅಡ್ಡಿ ಹಾಗೂ ಹಲ್ಲೆ ಪ್ರಕರಣ ದಾಖಲಿಸಿರುವುದು ಮೇಲ್ನೋಟಕ್ಕೆ ಸುಳ್ಳು ಎಂದು ತಿಳಿಯುತ್ತದೆ. ಸಾಮಾನ್ಯರು ಸುಳ್ಳು ಕೇಸ್ ದಾಖಲಿಸುವುದನ್ನು ಸಾಮಾನ್ಯ. ಆದರೆ, ರಕ್ಷಣೆ ನೀಡಬೇಕಾದ ಕಾನ್‌ಸ್ಟೆಬಲ್ ಸುಳ್ಳು ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಗೃಹ ಸಚಿವ ಆಕ್ರೋಶ ಹೊರಹಾಕಿದರು.
ಕೊರಗರ ಮೇಲೆ ಹಲ್ಲೆ ನಡೆದ ದಿನವೇ ಸಂಬಂಧಪಟ್ಟ ಠಾಣೆಯ ಪಿಎಸ್‌ಐ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು. ಆದರೆ, ಮಾಹಿತಿ ನೀಡದೆ ಪಿಎಸ್‌ಐ ದಾಷ್ಟ್ಯತನ ಪ್ರದರ್ಶಿಸಿದ್ದಾರೆ. ಪೊಲೀಸರು ಮನುಷ್ಯತ್ವ ಕಳೆದುಕೊಂಡು ಕೊರಗರ ಮೇಲೆ ಹಲ್ಲೆನಡೆಸಿ ಇಲಾಖೆಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾರೆ ಎಂದು ಗೃಹ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಕೊರಗರು ಹೆದರಬೇಕಿಲ್ಲ; ಸರ್ಕಾರ ಜತೆಗಿದೆ ಎಂದು ತಿಳಸಿದ ಗೃಹ ಸಚಿವರು, ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಆರು ಮಂದಿಗೆ ಸರ್ಕಾರ ತಲಾ ₹2 ಲಕ್ಷ ಪರಿಹಾರ ನೀಡಲಿದೆ. ಮೊದಲ ಹಂತದಲ್ಲಿ ತಲಾ 50,000 ಸಾವಿರವನ್ನು ಇಂದೇ ವಿತರಿಸಲಾಗುತ್ತಿದೆ ಎಂದರು.
ಸರ್ಕಾರದ ಪರಿಹಾರ ಧನ ಕೊರಗರ ಮನಸ್ಸಿಗೆ ಆಗಿರುವ ನೋವನ್ನು ಕಡಿಮೆ ಮಾಡುವುದಿಲ್ಲ ಎಂಬ ಅರಿವಿದೆ. ಆದರೆ, ಸರ್ಕಾರ ಕೊರಗರ ಜತೆಗಿದೆ ಎಂಬುದನ್ನು ತಿಳಿಸಲಷ್ಟೆ ಪರಿಹಾರ ನೀಡಲಾಗುತ್ತಿದೆ. ಪೊಲೀಸರು ದಾಖಲಿಸಿರುವ ಪ್ರಕರಣದ ಬಗ್ಗೆ ಭಯ ಪಡಬೇಕಿಲ್ಲ. ಕೊರಗರಿಗೆ ಯಾವುದೇ ತೊಂದರೆ ಎದುರಾಗದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದು ಗೃಹಸಚಿವರು ಹೇಳಿದರು.