ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ದೃಢ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಜ. 4) ಸಂಜೆ ತಜ್ಞರ ಜೊತೆ ಚರ್ಚಿಸುತ್ತೇನೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಒಟ್ಟಾರೆ ಸ್ಥಿತಿಗತಿಯನ್ನು ಅವಲೋಕಿಸಿ, ಎಲ್ಲ ವಿಚಾರಗಳನ್ನು ಸಂಪುಟ ಸಹೋದ್ಯೋಗಿಗಳ ಜೊತೆ ಚರ್ಚಿಸಿ ನಿಯಂತ್ರಣಕ್ಕೆ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತೀರ್ಮಾನಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸುತ್ತಿದ್ದೇವೆ. ಎಲ್ಲರಿಗೂ ಗೊತ್ತಿರುವಂತೆ ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಸೋಂಕು ಬಹಳ ವೇಗದಲ್ಲಿ ಹರಡುತ್ತಿದೆ. ಹೀಗಾಗಿ, ಈ ಬಗ್ಗೆ ತಜ್ಞರ ಜೊತೆ ಚರ್ಚೆ ನಡೆಸುವ ಅಗತ್ಯವಿದೆ. ಬಳಿಕ ಸೋಂಕು ನಿಯಂತ್ರಣಕ್ಕೆ ದೀರ್ಘಾವಧಿ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದರು.
‘ಕೋವಿಡ್ ಮೊದಲ ಮತ್ತು ಎರಡನೇ ಅಲೆಯನ್ನು ನಿಭಾಯಿಸಿದ ಅನುಭವದ ಹಿನ್ನೆಲೆಯಲ್ಲಿ, ಜನರಿಗೆ ಯಾವುದೇ ತೊಂದರೆ ಆಗದಂತೆ ನಿಯಂತ್ರಣಕ್ಕೆ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಸಲಹೆ ನೀಡುವಂತೆ ತಜ್ಞರಿಗೆ ಸೂಚಿದ್ದೆವು. ಅದರಂತೆ ತಜ್ಞರ ಸಮಿತಿ ಸಲಹೆಗಳನ್ನು ನೀಡಿದೆ’ ಎಂದೂ ಹೇಳಿದರು.
‘ಕೋವಿಡ್ ಸೋಂಕು ಹರಡದಂತೆ ತಡೆಯಲು ಜನರೇ ಸ್ವಯಂ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಮಾಡಬೇಕು’ ಎಂದೂ ಸಲಹೆ ನೀಡಿದರು.
ಸಹಕಾರ ಅಗತ್ಯ: ‘ರಾಜ್ಯದಾದ್ಯಂತ 15ರಿಂದ 18ರವರೆಗಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಇಂದು ಆರಂಭವಾಗುತ್ತಿದೆ. ಈ ವರ್ಗದವರನ್ನೂ ಕೋವಿಡ್ ಸುರಕ್ಷಾ ಚಕ್ರದ ಒಳಗೆ ತರಲು ವ್ಯಾಪಕವಾಗಿ ಅಭಿಯಾನದ ಕೈಗೊಳ್ಳಬೇಕಾಗಿದೆ. ಇದಕ್ಕೆ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲರೂ ಸಹಕಾರ ನೀಡಬೇಕು’ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.