ಬೆಂಗಳೂರು: ಬಾಹ್ಯಾಕಾಶ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ಪ್ರಾಬಲ್ಯ ಸಾಧಿಸಿದೆ. ಅದು ಈಗ ಜಾಗತಿಕ ಮಟ್ಟದ ಪ್ರಬಲ ಶಕ್ತಿಯಾಗಿ ಬೆಳೆದು ನಿಂತಿದ್ದು, ಚೀನಾವನ್ನು ನಿರ್ಲಕ್ಷಿಸಲಾಗದು ಎಂದು ರಕ್ಷಣಾ ಇಲಾಖೆ ಕಾರ್ಯದರ್ಶಿ ಅಜಯ್ ಕುಮಾರ್ ಹೇಳಿದರು.
1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತೀಯ ಸೇನೆಯು ಸಾಧಿಸಿದ ಗೆಲುವಿನ ಸುವರ್ಣ ಮಹೋತ್ಸವದ ಸ್ಮರಣೆಗಾಗಿ ಜಕ್ಕೂರು ವಾಯುನೆಲೆಯಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ‘ಸ್ವರ್ಣಿಮ ವಿಜಯ ವರ್ಷ’ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಚೀನಾ ಈಗ ಪ್ರಾದೇಶಿಕ ಶಕ್ತಿಯಾಗಿ ಉಳಿದಿಲ್ಲ. ಅದು ಈಗ ಜಗತ್ತಿನ ಒಂದು ಪ್ರಬಲ ಶಕ್ತಿಯಾಗಿದೆ. ಚೀನಾದ ಬಳಿ 281 ಉಪಗ್ರಹಗಳಿವೆ. ಅತಿಹೆಚ್ಚು ಉಪಗ್ರಹಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅದು ಎರಡನೇ ಸ್ಥಾನ ಪಡೆದಿದೆ. ರಷ್ಯಾದ ಬಳಿ 64 ಉಪಗ್ರಹಗಳಿದ್ದರೆ, ಭಾರತದ ಬಳಿ 33 ಮಾತ್ರ ಇವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಿರುವ ನೆರೆಯ ರಾಷ್ಟ್ರವು, ಅದನ್ನು ಬಳಸಿಕೊಂಡು ಜಗತ್ತಿನ ಹಲವು ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸುತ್ತಿದೆ ಎಂದರು.
ಏಕೀಕೃತ ಕಮಾಂಡ್ಗಳನ್ನು ರಚಿಸಿಕೊಂಡಿರುವ ಚೀನಾ, 2035ರೊಳಗೆ ತನ್ನ ಸೇನೆಯನ್ನು ಆಧುನೀಕರಣಗೊಳಿಸುವ ಪ್ರಕ್ರಿಯೆ ಆರಂಭಿಸಿದೆ. 2049ರೊಳಗೆ ಜಾಗತಿಕ ಮಿಲಿಟಿರಿ ಶಕ್ತಿಯನ್ನಾಗಿ ಪರಿವರ್ತಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ಕ್ಷಿಪಣಿ ತಂತ್ರಜ್ಞಾನದಲ್ಲಿ ಮತ್ತಷ್ಟು ಮುನ್ನಡೆ ಸಾಧಿಸಿದೆ. ಬಾಹ್ಯಾಕಾಶ, ಸೈಬರ್ ಸೇರಿದಂತೆ ತಂತ್ರಜ್ಞಾನ ಆಧಾರಿತ ಯುದ್ಧತಂತ್ರ ರೂಪಿಸುವುದಕ್ಕಾಗಿಯೇ ಪ್ರತ್ಯೇಕ ಕಮಾಂಡ್ ರಚಿಸಿದೆ. 120 ರಾಷ್ಟ್ರಗಳಿಗೆ ಮಾಹಿತಿ ತಂತ್ರಜ್ಞಾನ ಸೇವೆ ನೀಡುತ್ತಿರುವ ಚೀನಾ, ಅದರ ಮೂಲಕವೇ ಜಗತ್ತಿನ ಹಲವು ದೇಶಗಳ ಮೇಲೆ ಹಿಡಿತ ಸಾಧಿಸಲು ಹೊರಟಿದೆ ಎಂದು ಹೇಳಿದರು.
ದಕ್ಷಿಣ ಚೀನಾ ಸಮುದ್ರದ ಮೇಲೆ ಪೂರ್ಣ ಹಿಡಿತ ಸಾಧಿಸಲು ಚೀನಾ ಪ್ರಯತ್ನಿಸುತ್ತಿದೆ. ಅಲ್ಲಿ ನಿರಂತರವಾಗಿ ಆ ರಾಷ್ಟ್ರದ ಚಟುವಟಿಕೆಗಳು ಹೆಚ್ಚಾಗಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಹೊರಗಿನ ಕುಮ್ಮಕ್ಕು ಹೆಚ್ಚುತ್ತಿದೆ. ಅಪ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳೂ ಮುಂದೊಂದು ದಿನ ತಲೆನೋವಾಗಿ ಕಾಡಬಹುದು ಎಂದು ಅಜಯ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
ಸೇನಾ ಶಕ್ತಿಯ ಆಧುನೀಕರಣ ವೇಗವಾಗಿ ನಡೆಯುತ್ತಿದೆ. ವಾಯುಪಡೆಯ ಆಧುನೀಕರಣಕ್ಕಾಗಿ ಐದು ವರ್ಷಗಳ ಅವಧಿಯಲ್ಲಿ ₹ 2.5 ಲಕ್ಷ ಕೋಟಿ ವ್ಯಯಿಸಲಾಗಿದೆ. 1,000 ನವೋದ್ಯಮಗಳು ಸೇನೆಗೆ ತಾಂತ್ರಿಕ ನೆರವು ನೀಡಲು ಸಜ್ಜಾಗಿವೆ. ಬಾಹ್ಯಾಕಾಶ, ಸೈಬರ್, ಮಾನವರಹಿತ ಯುದ್ಧ ತಂತ್ರಗಳ ಅಭಿವೃದ್ಧಿ ಹಾಗೂ ಬಳಕೆಗೆ ಭಾರತವೂ ಸಜ್ಜಾಗುತ್ತಿದೆ ಎಂದರು.
ಕಂದಾಯ ಸಚಿವ ಆರ್. ಅಶೋಕ, ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ, ವಾಯುಪಡೆಯ ಬೆಂಗಳೂರು ತರಬೇತಿ ಕೇಂದ್ರದ ಮುಖ್ಯಸ್ಥ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಉಪಸ್ಥಿತರಿದ್ದರು.