ಚಿಕ್ಕಮಗಳೂರು: ಗ್ರಾಮ ಸ್ವರಾಜ್ಯದ ಮೂಲಕ ಮಹಾತ್ಮ ಗಾಂಧಿ ಅವರ ಕನಸು ನನಸು ಮಾಡಬೇಕಿದೆ ಎಂದು ತಾಲೂಕಿನ ಕೂದುವಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಉಮೇಶ್ ಹೇಳಿದರು.
ತಾಲ್ಲೂಕಿನ ಕೂದುವಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ‘ಜನ ಜಾಗೃತಿ ಗೀತೆ’ ಕಿರುಚಿತ್ರದ ಚಿತ್ರೀಕರಣದ ಮುಹೂರ್ತ ಸಮಾರಂಭದಲ್ಲಿ ಮಾತನಾಡಿದರು.
ಮಹಾತ್ಮ ಗಾಂಧಿ ಅವರು ಗ್ರಾಮ ಸ್ವರಾಜ್ಯದ ಮೂಲಕ ರಾಮರಾಜ್ಯದ ಕನಸು ಕಂಡಿದ್ದರು. ಅವರ ಕನಸನ್ನು ನನಸು ಮಾಡಲು ನಾವೆಲ್ಲರೂ ಮುಂದಾಗಬೇಕು ಎಂದರು.
ಗ್ರಾಮಗಳ ಅಭ್ಯುದಯ, ವ್ಯಸನ ಮುಕ್ತ ಜೀವನ, ಸ್ವಚ್ಛ ಸುಂದರ ಪರಿಸರ ನಿರ್ಮಾಣ ಎಲ್ಲ ಜವಾಬ್ದಾರಿಯಾಗಿದೆ. ಹೊಣೆಗಾರಿಕೆಯಿಂದ ಯಾರೂ ನುಣುಚಿಕೊಳ್ಳಬಾರದು ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಜೆ. ಸುರೇಶ್ ಮಾತನಾಡಿ, ಸರ್ಕಾರದ ಸೌಲಭ್ಯವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದರು.
ಕಲಾವಿದರ ಸಂಘದ ನೈತ್ಯ ಸಂಯೋಜಕ ಅಜಿತ್ ಮಾತನಾಡಿ, ಸವಲತ್ತುಗಳು ಫಲಾನುಭವಿಗಳಿಗೆ ತಲುಪಬೇಕು ಎಂಬುದು ಸರ್ಕಾರದ ಆಶಯ. ಆ ನಿಟ್ಟಿನಲ್ಲಿ ನಮ್ಮದೊಂದು ಅಳಿಲು ಸೇವೆ ಎಂದರು.
ಗ್ರಾಮ ಪಂಚಾಯಿತಿ ಉಪಧ್ಯಾಕ್ಷೆ ಶೈಲ, ಸದಸ್ಯರಾದ ಅರವಿಂದ್, ಜ್ಯೋತಿ, ಸಂಘದ ಅಧ್ಯಕ್ಷ ಶಶಿಧರ ಕೋಟೆ, ಗೌರವಾಧ್ಯಕ್ಷ ವಿರೂಪಾಕ್ಷ, ಬಿಎಸ್‌ಪಿ ಮುಖಂಡ ಕೆ.ಟಿ. ರಾಧಾಕೃಷ್ಣ, ನವ್ಯಾಅಜಿತ್, ಶಿವಣ್ಣ, ಜೈಪ್ರಕಾಶ್, ವಿದ್ಯಾ, ಸ್ವರ್ಣಾ ಇದ್ದರು