Monday, May 19, 2025
Homeಸುದ್ದಿರಾಷ್ಟ್ರೀಯಠಾಣೆಯಲ್ಲಿ ಯುವಕ ಸಾವು: ಐವರು ಪೊಲೀಸರ ಅಮಾನತು

ಠಾಣೆಯಲ್ಲಿ ಯುವಕ ಸಾವು: ಐವರು ಪೊಲೀಸರ ಅಮಾನತು

ಲಕ್ನೊ: ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಲ್ಲಿ 22 ವರ್ಷದ ಯುವಕ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಯುವಕ ಅಲ್ತಾಫ್‌ನ ವಿರುದ್ಧ ಯುವತಿಯನ್ನು ಅಪಹರಿಸಿ ಬಲವಂತದ ಮದುವೆಗೆ ಸಂಬಂಧಿಸಿದಂತೆ ಕಳೆದ ವಾರ ಪ್ರಕರಣದ ದಾಖಲಾಗಿತ್ತು. ಮಂಗಳವಾರ ಬೆಳಗ್ಗೆ ಅಲ್ತಾಫ್‌ರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಅವರು ಠಾಣೆಯಲ್ಲೇ ಮೃತಪಟ್ಟಿದ್ದಾರೆ.

ಅಪ್ತಾಫ್‌ ಪೊಲೀಸ್ ಠಾಣೆಯಲ್ಲಿ ಶೌಚಾಲಯಕ್ಕೆ ಹೋಗಬೇಕು ಎಂದು ಕೇಳಿದ್ದರು. ಕೆಲವು ನಿಮಿಷಗಳಾದರೂ ಅವರು ಶೌಚಾಲಯದಿಂದ ಹಿಂತಿರುಗದಿದ್ದಾಗ, ಪೊಲೀಸರು ಒಳಗೆ ಹೋಗಿ ನೋಡಿದ್ದಾರೆ. ಅಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಇಟಾಹ್‌ನ ಪೊಲೀಸ್ ಮುಖ್ಯಸ್ಥ ರೋಹನ್ ಪ್ರಮೋದ್ ಬೋತ್ರೆ ಹೇಳಿಕೆ ನೀಡಿದ್ದಾರೆ.

ನಾನು ನನ್ನ ಮಗನನ್ನು ಪೊಲೀಸರಿಗೆ ಒಪ್ಪಿಸಿದ್ದೇನೆ. ಆತನ ಸಾವಿನಲ್ಲಿ ಪೊಲೀಸರ ಕೈವಾಡವಿದೆ ಎಂಬ ಸಂಶಯವಿದೆ ಎಂದು ಮೃತ ಅಲ್ತಾಫ್ ಅವರ ತಂದೆ ಚಾಂದ್ ಮಿಯಾನ್ ಆರೋಪಿಸಿದ್ದಾರೆ.

ಸಿಬಿಐ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಸೇರಿದಂತೆ ದೇಶದ ಎಲ್ಲಾ ಪೊಲೀಸ್ ಠಾಣೆಗಳು ಮತ್ತು ತನಿಖಾ ಸಂಸ್ಥೆಗಳಲ್ಲಿ ನೈಟ್‌ ವಿಶನ್‌ ಮತ್ತು ಆಡಿಯೋ ರೆಕಾರ್ಡಿಂಗ್ ಹೊಂದಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ಆದರೆ, ಉತ್ತರ ಪ್ರದೇಶದ ಎಷ್ಟು ಪೊಲೀಸ್ ಠಾಣೆಗಳಲ್ಲಿ ಇದುವರೆಗೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.