ಬೆಳಗಾವಿ: ‘ಗುತ್ತಿಗೆದಾರನಾಗಿದ್ದ ನನ್ನ ತಮ್ಮ ಸಂತೋಷ್ ಪಾಟೀಲ ಸಾವಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಈಶ್ವರಪ್ಪ ಅವರೇ ನೇರ ಕಾರಣ’ ಎಂದು ಪ್ರಶಾಂತ್ ಪಾಟೀಲ ಆರೋಪಿಸಿದರು.
ಇಲ್ಲಿನ ಕ್ಯಾಂಪ್ ಪೊಲೀಸ್ ಠಾಣೆಗೆ ಬಂದಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
‘ತಮ್ಮ ಹಿಂದಿನಿಂದಲೂ ಗುತ್ತಿಗೆ ಮಾಡುತ್ತಿದ್ದ. ₹ 4 ಕೋಟಿ ಮೊತ್ತದ ಕೆಲಸ ಮಾಡಿದ್ದೇನೆ. ಹಣ ಬಂದಿಲ್ಲ, ಬಹಳ ಕಷ್ಟವಾಗಿದೆ ಎಂದು ಹೇಳಿದ್ದ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯೂ ದಾಖಲಾಗಿತ್ತು. ಜೀವ ಬೆದರಿಕೆಯೂ ಇದೆ ಎಂದಿದ್ದ. ಅವರ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ನಮ್ಮ ಸಮುದಾಯದವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಬಿ.ಎಸ್. ಯಡಿಯೂರಪ್ಪ ಅವರು ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದರು.
‘ತಮ್ಮ ಈಶ್ವರಪ್ಪ ಜೊತೆ ಚೆನ್ನಾಗಿದ್ದರು. ಸಂತೋಷ್ ಪರಿಚಯವೇ ಇಲ್ಲ ಎಂದು ಈಶ್ವರಪ್ಪ ಸುಳ್ಳು ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.
‘ಈಶ್ವರಪ್ಪ ಅವರನ್ನು ಬಂಧಿಸುವವರೆಗೂ ನಾವು ಅಂತ್ಯಕ್ರಿಯೆ ನಡೆಸುವುದಿಲ್ಲ’ ಎಂದು ತಿಳಿಸಿದರು.
ಅವರಿಗೆ ಒಂದು ವರ್ಷದ ಮಗುವಿದೆ. ಅವರ ಪತ್ನಿ ಊರಲ್ಲಿಲ್ಲ ಎಂದು ಹೇಳಿ ಕಣ್ಣೀರಿಟ್ಟರು.