Saturday, December 14, 2024
Homeರಾಜ್ಯಕರಾವಳಿ ಕರ್ನಾಟಕದಣಿವರಿಯದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‌ಗೆ ರಾಜ್ಯೋತ್ಸವ ಪ್ರಶಸ್ತಿ

ದಣಿವರಿಯದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‌ಗೆ ರಾಜ್ಯೋತ್ಸವ ಪ್ರಶಸ್ತಿ

ತುಳುನಾಡಿನ ಜಾನಪದದ ಅಧ್ಯಯನ ಮಾಡುವ ವಿಶ್ವವಿವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಮೊದಲು ಸಿಗುವ ಆಕಾರ ಗ್ರಂಥಗಳೇ ಬನ್ನಂಜೆ ಬಾಬು ಅಮೀನ್‌ ಅವರದ್ದು. ಅಚ್ಚರಿ ಅಂದರೆ ಅವರು ಕಲಿತಿರುವುದು 10ನೇ ತರಗತಿ. ಅವರ ಬದುಕೇ ಒಂದು ಪಠ್ಯ. ಅವರ ಬರಹವೇ ಸಂಶೋಧಕರಿಗೆ ದಾರಿ ದೀಪ. ಇಂಥ ಜಾನಪದ ವಿದ್ವಾಂಸನಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.20ಕ್ಕೂ ಅಧಿಕ ಕೃತಿಗಳನ್ನು ಅವರು ಬರೆದಿದ್ದಾರೆ. ಬಹುತೇಕ ಎಲ್ಲವೂ ಐದಾರು ಮುದ್ರಣಗಳನ್ನು ಕಂಡಿವೆ. ಆದರೆ ಉಡುಪಿಯ ಕನ್ನಡ ಸಾರಸ್ವತ ಲೋಕ ಅವರನ್ನು ಮುಟ್ಟಿಯೂ ನೋಡಿಲ್ಲ. ಯಾಕೆಂದರೆ ಅವರು ಜನಸಾಮಾನ್ಯರ ಬಗ್ಗೆ ಬರೆದವರು. ಅವರ ನಂಬಿಕೆಗಳು, ಸಂಪ್ರದಾಯಗಳು, ಸಂಸ್ಕೃತಿಗಳ ಬಗ್ಗೆ ಬರೆದವರು. ತುಳುನಾಡಿನ ದೈವಗಳನ್ನು ಸಮಗ್ರವಾಗಿ ಕಟ್ಟಿಕೊಟ್ಟವರು. ಮದುವೆ ಹಿಂದೆ ಹೇಗೆ ನಡೆಯುತ್ತಿತ್ತು. ಈ ಪುರೋಹಿತರಿಂದ ಹೇಗೆ ಹಾಳಾಗುತ್ತಿದೆ ಎಂದು ಭಾಷಣ ಮಾಡಿದ್ದು ಮಾತ್ರವಲ್ಲ. ಮದುವೆ ಸಹಿತ ನಮ್ಮ ಸಂಪ್ರದಾಯಗಳು ಹೀಗೆ ಇದ್ದವು ಎಂದು ದಾಖಲಿಸಿನೀಡಿದ್ದರು.

ಕನ್ನಡ ಸಾರಸ್ವತ ಲೋಕ ಯಾರ ಕೈಯಲ್ಲಿದೆ ಎಂಬುದನ್ನು ಬಿಡಿಸಿಹೇಳಬೇಕಿಲ್ಲ. ಹಾಗಾಗಿ ಸಹಜವಾಗಿಯೇ ಬನ್ನಂಜೆ ಬಾಬು ಅಮೀನರು ಕಡೆಗಣಿಸಲ್ಪಟ್ಟಿದ್ದರು. ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನಗಳ ಬಗ್ಗೆ, ಯಾವುದೋ ಮಠ ನೀಡುವ ಪ್ರಶಸ್ತಿ ಬಗ್ಗೆ ಒಮ್ಮೆಯೂ ತಲೆಕೆಡಿಸಿಕೊಂಡವರಲ್ಲ. ಎಲ್ಲರ ಪ್ರತಿನಿಧಿಯಾಗಿ ಇರುವ ಸರ್ಕಾರ ಗುರುತಿಸದೇ ಇದ್ದಿದ್ದ ಬಗ್ಗೆ ಅವರಿಗೆ ಬೇಸರವಿತ್ತು. ತಡವಾಗಿಯಾದರೂ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.’ಉಗುರಿಗೆ ಮುಡಿಯಕ್ಕಿ’, ’ಕೋಟಿ ಚೆನ್ನಯ’, ’ಪೂ ಪೊದ್ದೊಲು’, ’ಮಾನೆಚ್ಚಿ’ ಕೃತಿಗಳು ಅವರ ಸೃಜನಶೀಲ ಸೃಷ್ಟಿಯ ವೈಶಿಷ್ಟಗಳನ್ನು ಹೇಳುತ್ತವೆ. ’ತುಳು ಜಾನಪದ ಆಚರಣೆ’, ’ದೈವದ ಮಡಿಲಲ್ಲಿ’, ’ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ’, ’ತುಳುನಾಡ ದೈವಗಳು’, ’ತುಳು ಜಾನಪದ ಆಚರಣೆಲು’ – ಅವರ ಸಂಶೋಧನೆಯ ಆಳ-ವಿಸ್ತಾರಗಳನ್ನು ತಿಳಿಸುತ್ತವೆ. ’ನುಡಿಕಟ್ಟ್’ ಆನ್ವಯಿಕ ಜಾನಪದಕ್ಕೆ ಒಳ್ಳೆಯ ಉದಾಹರಣೆ. ಅವರು ಬರೆದಿರುವ ನೂರಕ್ಕೂ ಹೆಚ್ಚಿನ ಲೇಖನಗಳು ಅವರ ಅಧ್ಯಯನಶೀಲತೆಯ ಅಭಿವ್ಯಕ್ತಿಗಳಾಗಿವೆ.

ಬನ್ನಂಜೆ ಬಾಬು ಅಮೀನರ ಜನನ 04-08-1944. ತಂದೆ ಸೋಮ ಪೂಜಾರಿ. ತಾಯಿ ದಾರಮ್ಮ ಪೂಜಾರ್ತಿ. ಏಳು ಗಂಡು ಮತ್ತು ಎರಡು ಹೆಣ್ಣು ಮಕ್ಕಳಲ್ಲಿ ಬನ್ನಂಜೆಯವರು ಕೊನೆಯವರು. ಒಂದು ಕಾಲದಲ್ಲಿ ಉಡುಪಿಯ ಕಡೆಕಾರಿನ ಬಿಲ್ಲವ ಕುಟುಂಬ ಅವರದು. ಪಡುತೋಟು ಬೊಗ್ಗು ಪೂಜಾರಿಯ ಮೂಲ ಅವರದು. ಬಹುದೊಡ್ಡ ಅವಿಭಕ್ತ ಕುಟುಂಬವಾಗಿತ್ತು. ಆದರೆ ಬನ್ನಂಜೆ ಬಾಬು ಅಮೀನರು ಹುಟ್ಟಿದ ಸಂದರ್ಭದಲ್ಲಿ ಅದು ಗತವೈಭವವನ್ನು ಕಳೆದುಕೊಂಡಿತ್ತು. ಅವರ ತಾಯಿಗೆ ಸೋದರ ಸಂಬಂಧದಲ್ಲೆ ಮದುವೆಯಾಗಿತ್ತು.

ಕಡೆಕಾರಿನ ಅವಿಭಕ್ತ ಕುಟುಂಬದಲ್ಲಿ ಉಂಟಾದ ಸಣ್ಣ ಬಿನ್ನಾಬಿಪ್ರಾಯದಿಂದಾಗಿ ಕುಟುಂಬದಲ್ಲಿ ಬಿರುಕು ಉಂಟಾಯಿತು. ಛಲಗಾರ್ತಿಯಾದ ದಾರಮ್ಮ ಪೂಜಾರ್ತಿಯವರು ಐದು ಮಕ್ಕಳೊಂದಿಗೆ ಬನ್ನಂಜೆಯ ಮನೆಗೆ ಬಂದು ನೆಲೆಸಿದರು. ಅಲ್ಲಿ ಬಾಬು ಅಮೀನರು ಹುಟ್ಟಿದರು. ಇದರಿಂದ ಕಡೆಕಾರಿನ ಕುಟುಂಬದ ಮೂಲದವರಾದರೂ ’ಬನ್ನಂಜೆ’ಯು ಅವರ ಹೆಸರಿನೊಂದಿಗೆ ಸದಾ ಇರಲು ಕಾರಣವಾಯಿತು.ಬಡತನದಲ್ಲೂ ಪ್ರೀತಿಯ ವಾತಾವರಣದಲ್ಲೆ ಬೆಳೆದವರು ಬಾಬು ಅಮೀನರು.

ತಾಯಿಯ ಛಲ ಮತ್ತು ಸ್ವಾಭಿಮಾನ ಅವರಿಗೆ ದಾರಿದೀಪವಾಯಿತು. ಮನೆಯ ಜವಾಬ್ದಾರಿಯ ಬಗ್ಗೆ ತಂದೆ ತಲೆಕೆಡಿಸಿಕೊಂಡವರಲ್ಲ. ತುಳುನಾಡಿನ ಹೆಣ್ಣುಮಕ್ಕಳಂತೆ ತಾಯಿ ಸ್ವಾಭಿಮಾನದಿಂದ ದುಡಿದು ಮಕ್ಕಳನ್ನು ಸಾಕಿದರು. ಅವರ ಕುಟುಂಬದಲ್ಲೆ ಮೊದಲ ಬಾರಿಗೆ ಮೆಟ್ರಿಕ್ ಪಾಸಾದವರು ಬನ್ನಂಜೆಯವರು. ವಿದ್ಯಾಭ್ಯಾಸದ ಸಂದರ್ಭದಲ್ಲಿ ಬುದ್ಧಿವಂತ ವಿದ್ಯಾರ್ಥಿ ಎಂದೆನಿಸಿದವರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಆದಿಉಡುಪಿಯ ಸರಕಾರಿ ಶಾಲೆಯಲ್ಲಿ ನಡೆಯಿತು.

ಮುಖ್ಯೋಪಾಧ್ಯಾಯರಾದ ಶ್ರೀ ಟಿ.ಕೆ. ಶ್ರೀನಿವಾಸ ರಾಯರ ಪ್ರೋತ್ಸಾಹವನ್ನು ಅವರು ನೆನಪಿಸಿಕೊಳ್ಳುತ್ತಾರೆ. ವಿದ್ಯಾವಂತರಲ್ಲದ ತಾಯಿ ಕಷ್ಟದ ದಿನಗಳಲ್ಲಿ ತನ್ನ ಕಿವಿಯ ಬೆಂಡೋಲೆಯನ್ನು ಅಡವಿಟ್ಟು ಓದಿಸಿ, ತನ್ನ ವಿದ್ಯಾಭ್ಯಾಸದ ಬಗ್ಗೆ ವಹಿಸಿದ ಕಾಳಜಿಯನ್ನು ತುಂಬು ಹೃದಯದಿಂದ ಸ್ಮರಿಸಿಕೊಳ್ಳುತ್ತಾರೆ.1961ರಲ್ಲಿ ಮೆಟ್ರಿಕ್ ಮುಗಿಸಿದ ಬಾಬು ಅಮೀನರು ಸಣ್ಣಪುಟ್ಟ ಉದ್ಯೋಗವನ್ನು ನಿರ್ವಹಿಸಿ 1963ರಲ್ಲಿ ಮಣಿಪಾಲದ ಕಸ್ತೂರಿ ಬಾ ಕಾಲೇಜಿನಲ್ಲಿ ಕಛೇರಿ ಸಹಾಯಕರಾಗಿ ಉದ್ಯೋಗ ಸೇರಿದರು.

ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ಅವರು ಆಗಲೇ ಗುರುತಿಸಿಕೊಂಡಿದ್ದರು. 1964ರಲ್ಲಿ ಶಿರಿಬೀಡು ಜಂಗಮರ ಮಠದ ಯಕ್ಷಗಾನ ಕಲಾಕ್ಷೇತ್ರದ ಸದಸ್ಯರಾದರು. ಇದರಿಂದ ಹಿರಿಯರ ಮಾರ್ಗದರ್ಶನದಲ್ಲಿ ಯಕ್ಷಗಾನದ ಆಸಕ್ತಿ ಬೆಳೆದು ಹವ್ಯಾಸಿ ಕಲಾವಿದರಾಗಿ ರೂಪುಗೊಂಡರು. ಇದು ಅವರ ಮೊದಲ ಸಾಂಘಿಕ ಚಟುವಟಿಕೆ. 1966ರಲ್ಲಿ ಬಿಲ್ಲವ ಸೇವಾ ಸಂಘದ ಸದಸ್ಯರಾಗಿ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿದರು. 1969ರಲ್ಲಿ ಅವರ ಬರವಣಿಗೆ ರೂಪುಗೊಂಡಿತು. ಯಕ್ಷಗಾನ ಕಲಾಕ್ಷೇತ್ರದ ಅರ್ಥ ಸಹಿತ ’ಕೋಟಿಚೆನ್ನಯ’ ಪ್ರಸಂಗ ರಚನೆಯಲ್ಲಿ ಸಕ್ರಿಯ ಪಾತ್ರ ವಹಿಸಿದರು. 1970ರಲ್ಲಿ ಭೋಜಪ್ಪ ಸುವರ್ಣರ ಮಗಳು ಇಂದಿರಾರನ್ನು ವಿವಾಹವಾದರು. ಭಾರತಿ ಮತ್ತು ರಾಘವೇಂದ್ರ ಅವರ ಇಬ್ಬರು ಮಕ್ಕಳು.

1970ರಲ್ಲಿ ಮಣಿಪಾಲ ಬಿಟ್ಟು ಉಡುಪಿಯಲ್ಲಿ ಉದ್ಯೋಗಕ್ಕೆ ಸೇರಿದರೂ ಮತ್ತೆ ಮಣಿಪಾಲಕ್ಕೆ ಹಿಂತಿರುಗಿದರು. 1973ರಲ್ಲಿ ಕಸ್ತೂರಿ ಬಾ ಮೆಡಿಕಲ್ ಕಾಲೇಜಿನ ನೌಕರರ ಸಂಘದ ಕಾರ್ಯದರ್ಶಿಯಾದರು. ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದರು. ಅವರ ಸಂಘಟನಾ ಕ್ರಮದಿಂದ ಆಡಳಿತ ವರ್ಗದ ಕೋಪಕ್ಕೆ ತುತ್ತಾದರು. ಆಡಳಿತ ವರ್ಗವು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಅವರೊಂದಿಗೆ 23 ಜನ ನೌಕರರನ್ನು ಕೆಲಸದಿಂದ ವಜಾ ಮಾಡಿತು. ಬ್ಯಾಂಕಿನಿಂದ ಸಾಲ ಪಡೆದು ಉಡುಪಿಯ ಕಲ್ಯಾಣಪುರದಲ್ಲಿ ಜವುಳಿ ಅಂಗಡಿ ತೆರೆದರೂ, ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಸಕ್ತಿಯು ವ್ಯಾಪಾರದಲ್ಲಿ ಅವರನ್ನು ಮುಂದುವರಿಯದಂತೆ ಮಾಡಿತು. ಇದರಿಂದ ಅಂಗಡಿಯನ್ನು ಪರಭಾರೆ ಮಾಡಿ ಮುಂಬಯಿಗೆ ಪ್ರವೇಶಿಸಿದರು.

1977ರಲ್ಲಿ ಮುಂಬಯಿಗೆ ಹೋದ ಅಮೀನರು ನ್ಯೂಕಮ್ ಪ್ರೊಡೆಕ್ಟ್ ಸಂಸ್ಥೆಯ ಕಛೇರಿ ಸಹಾಯಕರಾಗಿ ಸೇರಿದರು. ಬಳಿಕ ಮುಂಬಯಿ ದೈಸರಿನ ಗೋಲ್ಡನ್ ಕೆಮಿಕಲ್ಸ್ನಲ್ಲಿ ಮೇಲ್ವಿಚಾರಕರಾಗಿ ಸೇರಿದರು. ಬಳಿಕ 1983-91ವರೆಗೆ ಕಂಪೆನಿಗಳ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಈ ರೀತಿ ಉದ್ಯೋಗದಲ್ಲಿರುವ ಸಂದರ್ಭದಲ್ಲೆ ಮುಂಬಯಿಯಲ್ಲಿ ತುಳು ಮತ್ತು ಕನ್ನಡಕ್ಕೆ ಸಂಬಂಧಿಸಿದ ಸಂಘಟನೆ, ಸಾಹಿತ್ಯ ರಚನೆ ಮತ್ತು ಸಂಶೋಧನೆಗಳಿಂದ ಜನಪ್ರಿಯರಾದರು.

1982ರಲ್ಲಿ ಮಿತ್ರರಿಂದ ಹಣ ಸಂಗ್ರಹ ಮಾಡಿ ‘ಕೋಟಿಚೆನ್ನಯ’ ಚೊಚ್ಚಲ ಕೃತಿಯನ್ನು ಪ್ರಕಟಿಸಿದರು. ಆಗಲೇ ತುಳುನಾಡಿನ ಉದ್ದಗಲಕ್ಕೂ ಇರುವ ಗರೋಡಿಗಳ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ತೊಡಗಿದರು. ಮುಂಬಯಿಯಲ್ಲಿದ್ದುಕೊಂಡೆ ತುಳುನಾಡಿ ನಲ್ಲಿರುವ ಮಿತ್ರರನ್ನು ಸಂಪರ್ಕಿಸಿ 214 ಗರೋಡಿಗಳ ಮಾಹಿತಿ ಸಂಗ್ರಹಿಸಿದರು.1985ರಲ್ಲಿ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನದ ಸ್ಥಾಪನೆ ಯಾಯಿತು. ಸಂಗ್ರಹಿಸಿದ ಮಾಹಿತಿಗಳನ್ನು ಕ್ಷೇತ್ರಕಾರ್ಯದ ಸಿದ್ಧಾಂತಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿ ಪ್ರಕಟನೆಗೆ ಸಿದ್ಧಗೊಳಿಸಿದರು.

1990ರಲ್ಲಿ ಪ್ರೊ. ಮೋಹನ್ ಕೋಟ್ಯಾನ್ ರೊಂದಿಗೆ ಸಹ ಲೇಖಕರಾಗಿ ’ತುಳುನಾಡಿನ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ’ ಬೃಹತ್ ಗ್ರಂಥವನ್ನು ಪ್ರಕಟಿಸಿದರು.ಮುಂಬಯಿಯಲ್ಲಿ ಹಲವು ಸಂಸ್ಥೆಯಲ್ಲಿ ಬಾಬು ಅಮೀನರು ಗುರುತಿಸಲ್ಪಟ್ಟರು. ಮುಂಬಯಿ ಬಿಲ್ಲವರ ಅಸೋಸಿಯೇಷನ್ನಿನ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ನವೀಕರಣ ಕಾರ್ಯದಲ್ಲೂ ದುಡಿದರು. ಬಿಲ್ಲವರ ಅಸೋಸಿಯೋಶನಿನ ಜನಪ್ರಿಯ ಮಾಸಪತ್ರಿಕೆ ’ಅಕ್ಷಯ’ದ ಸಂಪಾದಕರಾಗಿ ಕೆಲಸಮಾಡಿದರು. ಸಂಪಾದಕ ಮಂಡಳಿಯ ಸಹಯೋಗದಿಂದ ಅಕ್ಷಯ ಪತ್ರಿಕೆಯನ್ನು ಒಂದು ಅರ್ಥಪೂರ್ಣ ಮಾಸಿಕವನ್ನಾಗಿ ಪರಿವರ್ತಿಸುವ ಜೊತೆಗೆ ಪತ್ರಿಕೆಗೆ ನಾವೀನ್ಯವನ್ನು ಅಳವಡಿಸಿದರು. ತುಳು ಜಾನಪದದ ಕುರಿತಾಗಿ ಅಂಕಣವನ್ನು ಆರಂಭಿಸಿ, ತುಳು ಸಂಸ್ಕೃತಿಯ ಪ್ರಸರಣದಿಂದ ಮುಂಬಯಿಯಲ್ಲಿ ಜನಪ್ರಿಯರಾದರು. ’ಕರ್ನಾಟಕ ಮಲ್ಲ’ ದಿನಪತ್ರಿಕೆಯಲ್ಲಿ ತುಳು ಅಂಕಣಕಾರರಾಗಿ ಪ್ರಸಿದ್ಧರಾದರು. 1982ರಲ್ಲಿ ಮುಂಬಯಿಯ ಅಯೋಧ್ಯಾ ನಗರದಲ್ಲಿ ಸಮಾನ ಮನಸ್ಕರ ಜೊತೆಗೂಡಿ ಸಾರ್ವಜನಿಕ ಶನಿಪೂಜಾ ಸಮಿತಿಯನ್ನು ಸ್ಥಾಪಿಸಿದರು.

1990ರಲ್ಲಿ ಮುಂಬಯಿಯಲ್ಲೂ ಉದ್ಯೋಗವನ್ನು ಕಳೆದುಕೊಂಡರು. ಬಹುಶಃ ಅವರ ಸಾಂಸ್ಕೃತಿಕ ಅಧ್ಯಯನದ ಆಸಕ್ತಿಯು ಅವರನ್ನು ವೃತ್ತಿ ಕ್ಷೇತ್ರದಲ್ಲಿ ಒಂದು ಕಡೆ ನೆಲೆ ನಿಲ್ಲಲು ಬಿಡಲಿಲ್ಲ. ಅನೇಕ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದರೂ ಅವರ ಸ್ವಾಭಿಮಾನ ಅದಕ್ಕೆ ತಡೆಯುಂಟು ಮಾಡಿತು. ಸಾಂಸ್ಕೃತಿಕ ಹವ್ಯಾಸವು ಪ್ರಧಾನವಾಗಿ ಜೀವನ ನಿರ್ವಹಣೆಗಾಗಿ ಜೀವ ವಿಮಾ ಪ್ರತಿನಿದಿಯಾದರು.

ಅವರ ಜಾನಪದ ಸಂಶೋಧನೆಯ ಆಸಕ್ತಿಯು ಮುಂದುವರಿಯಿತು. ತುಳು ಜನಪದ ಆಚರಣೆಗಳ ಬಗ್ಗೆ ಜನರ ಆಸಕ್ತಿಯನ್ನು ಗುರುತಿಸಿ ಕ್ಷೇತ್ರಕಾರ್ಯದ ಮೂಲಕ ಮಾಹಿತಿ ಸಂಗ್ರಹಿಸಿ ’ತುಳು ಜಾನಪದ ಆಚರಣೆಗಳು’ ಕೃತಿಯನ್ನು ಪ್ರಕಟಿಸಿದರು. ಈ ಕೃತಿ ಅತ್ಯಂತ ಜನಪ್ರಿಯವಾಗಿ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯಿತು. ಹೀಗೆ ವೃತ್ತಿ ಕ್ಷೇತ್ರದಲ್ಲಿ ತಳವೂರಲು ವಿಫಲರಾದಷ್ಟು ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಜನಪ್ರಿಯರಾದರು. ಮುಂಬಯಿ ಮತ್ತು ತುಳುನಾಡಿನಲ್ಲಿ ಸಂಘಟಕರಾಗಿ, ಸಾಹಿತಿಯಾಗಿ, ಸಂಶೋಧಕರಾಗಿ ಗುರುತಿಸಲ್ಪಟ್ಟರು.

ತಾಯಿ ಮತ್ತು ಇಬ್ಬರು ಅಣ್ಣಂದಿರ ಮರಣ, ಮಗಳ ಮದುವೆ, ಮಗನ ವಿದ್ಯಾಭ್ಯಾಸ ಪೂರ್ತಿ ಇತ್ಯಾದಿ ಕಾರಣಗಳಿಂದ ಇಪ್ಪತ್ತನಾಲ್ಕು ವರ್ಷಗಳ ಮುಂಬಯಿ ಬದುಕಿಗೆ ವಿದಾಯ ಹೇಳಿ 2001 ಏಪ್ರಿಲ್ 12ರಂದು ಮರಳಿ ಊರಿಗೆ ಬಂದರು.ಹುಟ್ಟೂರಿಗೆ ಮರಳಿದರೂ ವಿಶ್ರಾಂತಿ ಜೀವನದಲ್ಲಿ ಕ್ರಿಯಾಶೀಲರಾದರು. ಯಕ್ಷಗಾನ ಕಲಾಕ್ಷೇತ್ರದ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ದುಡಿದರು. ಅವರ ಸೇವೆಯನ್ನು ಗುರುತಿಸಿ 2001-04ರ ಸಾಲಿಗೆ ಕರ್ನಾಟಕ ಸರಕಾರವು ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿಯ ಸದಸ್ಯರನ್ನಾಗಿ ನೇಮಿಸಿತು. ಕ್ರಿಯಾಶೀಲ ಸದಸ್ಯರಾಗಿ ಹಲವು ಕಾರ್ಯಕ್ರಮಗಳನ್ನು ಯೋಜಿಸಿದರು. ಮುಂಬಯಿ, ಹೊರನಾಡು, ಕರ್ನಾಟಕದ ಹಲವು ಭಾಗಗಳಲ್ಲಿ ಸಮ್ಮೇಳನ, ವಿಚಾರಗೋಷ್ಠಿಗಳಲ್ಲಿ ಅಧ್ಯಕ್ಷತೆ, ಪ್ರಬಂಧ ಮಂಡನೆ, ಸನ್ಮಾನಗಳ ಗೌರವ ದೊರೆತಿದೆ.

2002ರಲ್ಲಿ ಅವರ ಕೃತಿಗಳನ್ನು ಪ್ರಕಟಿಸುವ ಉದ್ದೇಶದಿಂದ ಕೆಮ್ಮಲಜೆ ಪ್ರಕಾಶನವನ್ನು ಪ್ರಾರಂಭಿಸಿದರು. ಸುಮಾರು 10ರಷ್ಟು ಕೃತಿಗಳನ್ನು ಪ್ರಕಟಿಸಿದರು. ಕೃತಿಗಳ ಪ್ರಕಟನೆಯೊಂದಿಗೆ ಜಾನಪದ ಆಚರಣೆಗಳ ಅನ್ವಯಿಕ ಕಾರ್ಯವನ್ನು ಆರಂಭಿಸಿದರು. ಭೂತಾರಾಧನೆ, ಮದುವೆಗಳಂಥ ಆಚರಣೆಗಳನ್ನು ಸಂಪ್ರದಾಯಬದ್ಧವಾಗಿ ನಡೆಸುವುದಕ್ಕೆ ಮಾರ್ಗದರ್ಶನ ಮಾಡತೊಡಗಿದರು. ಅವರ ನೇತೃತ್ವದಲ್ಲಿ ತರಬೇತಿ – ಪಾತಕ್ಷಿಕೆಗಳು ನಡೆದವು. ಇಂದು ಉಡುಪಿ ಜಿಲ್ಲೆ ಹಲವು ಭಾಗಗಳಲ್ಲಿ ಈ ಆಚರಣೆಗಳು ಸಂಪ್ರದಾಯ ಬದ್ಧವಾಗಿ ನಡೆಯುವಲ್ಲಿ ಅಮೀನರ ಕೊಡುಗೆ ಮಹತ್ವದ್ದಾಗಿದೆ.

ಹೀಗೆ ಸಾಮಾನ್ಯರಾಗಿದ್ದುಕೊಂಡೆ ಅಸಾಮಾನ್ಯ ಸಾಧನೆಗಳನ್ನು ಮಾಡುತ್ತಾ ಶೂನ್ಯದಿಂದ ಸೃಷ್ಟಿಯಾದ ಬಾಬು ಅಮೀನರ ಬದುಕು ನಿಜಕ್ಕೂ ಹೋರಾಟದ ಬದುಕಾಗಿದೆ. ಸ್ವಪ್ರಯತ್ನದಿಂದ ಬದುಕು ಕಟ್ಟುವುದಕ್ಕೆ ಅವರೊಂದು ಒಳ್ಳೆಯ ಉದಾಹರಣೆ. 75ದ ಬನ್ನಂಜೆ ಬಾಬು ಅಮೀನ್‌ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಅವರ ಪರಿಶ್ರಮಕ್ಕೆ, ಪ್ರತಿಭೆಗೆ ಸಂದ ಗೌರವವಾಗಿದೆ.