ದಾವಣಗೆರೆ: ದೇವರ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ವಂಚನೆ ಮಾಡಿದ ಸಂಬಂಧ ಹೊನ್ನಾಳಿ ನಗರದ ಹಳದಮ್ಮ ದೇವಿ ದೇವಸ್ಥಾನದ ಪೂಜಾರಿಯನ್ನು ಬಂಧಿಸಲಾಗಿದೆ.
‘ನಿಮ್ಮ ಗಂಡನಿಗೆ ಮತ್ತು ನಿಮ್ಮ ಮನೆಗೆ ಗಂಡಾಂತರವಿದೆ. ದೇವಸ್ಥಾನದಲ್ಲಿ ಪೂಜೆ ಮಾಡಿದರೆ ಎಲ್ಲವೂ ಸರಿಹೋಗುತ್ತದೆ ಎಂದು ನಂಬಿಸಿ 120 ಗ್ರಾಂ ಬಂಗಾರದ ಒಡವೆ ಹಾಗೂ ₹ 2.80 ಲಕ್ಷ ನಗದು ತೆಗೆದುಕೊಂಡು ಪೂಜಾರಿ ಎಂ.ಜಿ. ಚಂದ್ರು ವಂಚಿಸಿದ್ದಾನೆ’ ಎಂದು ನಗರದ ಕಲ್ಕೇರಿ ಬೀದಿಯ ನಿವಾಸಿ ಬಿ.ವಿ. ಪ್ರಮಿಳಾ ಸುಭಾಶ್ ದೂರು ನೀಡಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಸಿಪಿಐ ಟಿ.ವಿ. ದೇವರಾಜ್, ‘ಮಹಿಳೆಯನ್ನು ನಂಬಿಸಿ ಒಡವೆ, ಹಣ ಪಡೆದುಕೊಂಡ ಬಗ್ಗೆ ಡಿ.7ರಂದು ಹೊನ್ನಾಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಎಂ.ಜಿ. ಚಂದ್ರು ಹಳದಮ್ಮ ದೇವಿ ದೇವಸ್ಥಾನದ ಹಿಂಭಾಗದಲ್ಲಿಯೇ ವಾಸ ಮಾಡುತ್ತಿದ್ದು, ಪೂಜಾರಿ ವೃತ್ತಿ ಮಾಡುತ್ತಿದ್ದ. ಆತನನ್ನು ಬಂಧಿಸಿ 120 ಗ್ರಾಂ ಬಂಗಾರದ ಒಡವೆಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಎಸ್ಪಿ, ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಸಿಪಿಐ ದೇವರಾಜ್, ಪಿಎಸ್ಐ ಬಸವನಗೌಡ ಬಿರಾದರ್, ಹಾಗೂ ಪಿಎಸ್ಐ ಅಜ್ಜಪ್ಪ, ಪೊಲೀಸ್ ಸಿಬ್ಬಂದಿ ಗಾಳಿ ಯೋಗೀಶ್, ಬಸವರಾಜ್, ನಾಗರಾಜ್, ಅಪರಾಧ ದಳದ ಸಿಬ್ಬಂದಿ ಸಿದ್ದನಗೌಡ, ಬೋಜಪ್ಪ ಕಿಚಡಿ ಕಾರ್ಯಾಚರಣೆ ನಡೆಸಿದ್ದರು ಎಂದರು.