ಬೇರೆಯವರು ಬರೆದ ಲೇಖನಗಳನ್ನು ಓದಿದಾಗ ಖುಷಿಯ ಜೊತೆಗೆ ಹೊಟ್ಟೆ ಕಿಚ್ಚುಆಗುತಿತ್ತು. ಅವರ ಓದು ಅನುಭವ, ಕಂಡಿದ್ದು ನೋಡಿದ್ದು, ಕೆಲವೊಮ್ಮೆ ಅನುಭವಿಸಿದ್ದು, ರಾಜಕೀಯ ವಿಮರ್ಶೆಗಳೆಲ್ಲ ಓದಿದಾಗ ನನಗೂ ಯಾಕೆ ಬರೆಯಬಾರದು ಎಂದನ್ನಿಸಿದಿದೆ.
ನಾನು ಓದಿದ್ದು ತುಂಬಾ ತುಂಬಾನೆ ಕಡಿಮೆ. ಶಿಕ್ಷಕಿಯಾಗಬೇಕು ಎಂಬ ಕನಸು ಕಂಡಿದ್ದೆ. ಅದರ ಜತೆಗೆ ಇನ್ನೂ ನೂರಾರು ಕನಸುಗಳನ್ನು ಕಟ್ಟಿಕೊಂಡೇ ಬೆಳೆದೆ. ನಾನ್ಯಾಕೆ ಈ ಕೆಲಸವನ್ನು ಆಯ್ಕೆ ಮಾಡಿಕೊಂಡೆ ಎಂಬ ಪ್ರಶ್ನೆ ನನಗೆ ಆಗಾಗ ಕಾಡುತ್ತಿರುತ್ತದೆ. ಪ್ರತಿಯೊಂದು ಯಶಸ್ಸಿನ ಹಿಂದೆ ಒಂದು ಹೆಣ್ಣು/ ಮಹಿಳೆ (ತಾಯಿ, ಹೆಂಡತಿ, ಸ್ನೇಹಿತೆ,ತಂಗಿ, ಮಗಳು) ಇರುತ್ತಾಳೆಂದು ನಾಣ್ನುಡಿ ಇದೆ. ಆದರೆ ನನ್ನ ಜೀವನದಲ್ಲಿ ನನಗೆ ಸಿಕ್ಕಿದ್ದು ಆಪ್ತ ಗೆಳೆಯ. ನನಗೆ ಕಲಿಸಿದ್ದೇನೆಂದರೆ ನಾಲ್ಕು ಅಕ್ಷರ ನೀನು ಕಲಿತಿಯಾ ಅದನ್ನು ನೀನು ಹುಟ್ಟಿದ ಸಮುದಾಯಕ್ಕೆ ಉಪಯೋಗಿಸು ಎಂಬುದು ಅವನ ನಿತ್ಯ ನಿರಂತರ ಸಲಹೆಯಾಗಿದೆ.
ಈಯಮ್ಮಳಿಗೆ ಯಾಕೆ ಬೇಕು ಈ ಹೋರಾಟ? ಇಂಥ ಕೆಲಸವನ್ನು ಮಾಡುವ ಬದಲು ಸುಮ್ಮನೆ ಮದುವೆಯಾಗಿ ಮಕ್ಕಳನ್ನು ಹೆತ್ತು ಹೊತ್ತು ಇರಬಹುದಿತ್ತು. ಅದೆಲ್ಲ ಬಿಟ್ಟು ಮಹಿಳೆಯರನ್ನು ಕಟ್ಕೊಂಡು ಏನೆಲ್ಲ ಮಾಡುತ್ತಾಳಲ್ಲ ಎಂಬ ಉರಿ ಕೆಲವರಿಗೆ ಕಾಡುತ್ತಿದ್ದರೆ, ಇವಳು ಏನ್ ಮಾಡಬಹುದು? ಇವಳಿಂದ ಏನ್ ಸಾಧ್ಯ? ಇವಳಿಗೆ ಏನಾದರು ಲಾಭ ಇರಬಹುದೇ? ಯಾಕಿಷ್ಟು ಕಾಳಜಿ? ಮಹಿಳೆಯರ ಉಸಾಬರಿ, ಊರ ಉಸಾಬರಿ ಯಾಕೆ? ಎನ್ನುವವರು ಇನ್ನೊಂದಷ್ಟು ಮಂದಿಗೆ ಕಾಡುತ್ತಿದೆ.
ನಾನು ಹುಟ್ಟಿದ್ದು ಮತ್ತು ಬೆಳೆದಿದ್ದು ಬೀಡಿ ಕಾರ್ಮಿಕ ಕುಟುಂಬದಲ್ಲಿ. ಅಮ್ಮ ಬೀಡಿ ಕಟ್ಟುವಾಗ 1000 ಬೀಡಿಗೆ 3 ರೂಪಾಯಿ ಇತ್ತು. ಇವತ್ತು ಕನಿಷ್ಠ ವೇತನ 220 ರೂಪಾಯಿ ಇದೆ. ಕಾರ್ಮಿಕರಿಗೆ 160/170 ರೂಪಾಯಿ ಸಿಗುತ್ತಾ ಇದೆ. ಅದು ಕೂಡ ನಮ್ಮ ಯೂನಿಯನ್ನಿನ ಹೋರಾಟದ ಪ್ರತಿಫಲವಾಗಿ. ಆರೋಗ್ಯ ಸಮಸ್ಯೆಯಿಂದಾಗಿ ನನ್ನ ತಾಯಿ 4 ವರ್ಷವಾಗಿದೆ ಬೀಡಿ ಕಟ್ಟುವುದನ್ನ ನಿಲ್ಲಿಸಿದ್ದಾರೆ.
ಹಿಂದೆ ಸಿಕ್ಕಾಪಟ್ಟೆ ಶೋಷಣೆ ಇತ್ತು. ಅವರ ಶ್ರಮದ ಅಪಮೌಲಿಕರಣ ಮಾಡಲಾಗುತಿತ್ತು. ಕೆಲಸದ ಭದ್ರತೆ ಇಲ್ಲ. ಗುರುತಿಸುವಿಕೆ ಇಲ್ಲ. ಕನಿಷ್ಠಕ್ಕಿಂತ ಕನಿಷ್ಠ ವೇತನ. ಪ್ರಶ್ನೆ ಮಾಡಿದರೆ ಕೆಲಸದ ನಿರಾಕರಣೆ. ಸಂಘಟನೆ ಕಟ್ಟಿದರೆ ಮಾರನೇ ದಿನ ಎಲೆ ತಂಬಾಕು ಸಿಗುತ್ತಿರಲಿಲ್ಲ.
ನಾನು ಇವತ್ತು ಬೀಡಿ ಕಾರ್ಮಿಕರ ಮಹಿಳೆಯರನ್ನು ಯಾಕೆ ಸಂಘಟಿಸುತಿದ್ದೇನೆಂದರೆ ನಾನು ಕೂಡ ಬೀಡಿ ಕಾರ್ಮಿಕಳು. ವಾರಕ್ಕೆ 10/12ಸಾವಿರ ಬೀಡಿಯನ್ನು ಕಟ್ಟಿದ್ದೇನೆ. ಒಂದೊಂದು ಬೀಡಿಯ ಎಲೆಯನ್ನು ಕಟ್ಟು ಮಾಡುವಾಗ ಆಗುವ ಕಷ್ಟ. ಬೆರಳು, ಕೈ, ಭುಜಗಳ ನೋವು, ಒಂದೆ ಸಮ ಕೂತು ತುಂಬಾ ಹೊತ್ತು ಕೂತು ಬೀಡಿ ಕಟ್ಟುವಾಗ ಆಗುವ ಬೆನ್ನು ನೋವು ಹೇಳಬಾರದು. ರಾತ್ರಿ ಮಲಗಿದಾಗ ಪ್ರಜ್ಙೆತಪ್ಪಿ ಬಿದ್ದಿರುವ ಹಾಗೆ ನಿದ್ದೆಗೆ ಜಾರುವುದು. ಇಷ್ಟೆಲ್ಲ ಕಷ್ಟ ಪಟ್ಟು ಕಟ್ಟಿದ ಬೀಡಿಯನ್ನು ಗುತ್ತಿಗೆದಾರನ ಬಳಿ ತೆಗೆದುಕೊಂಡು ಹೋದರೆ ಅಲ್ಲಿ ನೂರಾರು ತಕರಾರರು. ಬೀಡಿ ಉದ್ದವಾಯಿತು, ಸಣ್ಣದಾಯಿತು, ಕೆಳಗೆ ತಂಬಾಕು ಬಂದಿಲ್ಲ, ದಾರ ಮೇಲಾಗಿದೆ ಹೀಗೆ ಹಲವಾರು ಕಾರಣ ಹೇಳಿ ಸಿಕ್ಕಾಪಟ್ಟೆ ಬೀಡಿಯನ್ನು ಕಿತ್ತು ಹೋಕಿಗೆ(ವೇಸ್ಟ್) ಬೀಡಿ ಹಾಕುವುದನ್ನು ನೋಡಲಾಗುತ್ತಿರಲಿಲ್ಲ. ಬೀಡಿ ಕೊಟ್ಟು ಬರುವ ತನಕ ಜೀವ ಇರುತ್ತಿರಲಿಲ್ಲ. ಇವತ್ತು ಕೂಡ ಈ ಹಿಂಸೆ ಜೀವಂತವಾಗಿದೆ. ಅಷ್ಟಕ್ಕೂ ಭಾನುವಾರ ಬಂದರೆ ಬೀಡಿ ಕಟ್ಟಿದ ಮಜೂರಿಗಾಗಿ ತಹತಹಿಸುವ ದಿನ. ಅವತ್ತೆ ಬಜೆಟ್ ಮಂಡನೆ; ಸಾಲಕ್ಕಿಷ್ಟು ಹೊಟ್ಟೆಗಿಷ್ಟು.. ಇವೆಲ್ಲನ್ನು ಹೋರಾಟದ ಮೂಲಕ ಒಂದಷ್ಟಾದರೂ ಬದಲಾವಣೆ ಮಾಡೋಣ ಎಂದು ಸಂಘಟನೆ ಕಟ್ಟಿದೆ.
ವರ್ಷ ವರ್ಷ ಕ್ಯಾಲೆಂಡರ್ ಮಾತ್ರ ಬದಲಾಗುತ್ತದೆ ಹೊರತು ಇವತ್ತಿಗೂ ಕೂಡ ನಮ್ಮ ಬೀಡಿ ಕಾರ್ಮಿಕರ ಪರಿಸ್ಥಿತಿ ಬದಲಾಗಿಲ್ಲ. ಅವರನ್ನು ಹೇಳುವವರಿಲ್ಲ, ಕೇಳುವವರಿಲ್ಲ. ಇವತ್ತಿಗೂ ದಾವಣಗೆರೆಲ್ಲಿ ಸ್ಥಳಿಯವಾಗಿ 8/10 ಸಾವಿರ ಬೀಡಿ ಕಾರ್ಮಿಕರಿದ್ದಾರೆ. ಜಿಲ್ಲೆಯಲ್ಲಿ 20/25 ಸಾವಿರದಷ್ಟು ಬೀಡಿ ಕಾರ್ಮಿಕರಿರಬಹುದು. ಇದು ಪಕ್ಕ ಸಮಿಕ್ಷೆಯ ವರದಿಯಂತೂ ಅಲ್ಲವೇ ಅಲ್ಲ! ಯಾವ ಇಲಾಖೆ ಕಾರ್ಮಿಕರ ಹೊಣೆ ಹೊತ್ತಿದೆಯೋ ಅಲ್ಲೇ ಪಕ್ಕಾ ಲೆಕ್ಕ ಇಲ್ಲ. ಸರ್ಕಾರದಲ್ಲೂ ಇಲ್ಲ. ನಮ್ಮನ್ನು ಆಳುವಂತಹ ಸರ್ಕಾರಗಳಿಗೆ ನಮ್ಮ ಬೀಡಿ ಕಾರ್ಮಿಕರ ಓಟು ಬೇಕು. ಅವರ ಬದುಕು ಬವಣೆಗಳು ಆಲಿಸುವ ಜನಪ್ರತಿನಿಧಿ ಈವರೆಗೆ ಬಂದಿಲ್ಲ.
ಒಂದು ಕಡೆ ಸರ್ಕಾರ ಮತ್ತೊಂದು ಕಡೆ ದುಡಿಸಿಕೊಳ್ಳುತ್ತಿರುವ ಗುತ್ತಿಗೆದಾರರು ಇವತ್ತಿಗೂ ಕನಿಷ್ಠ ವೇತನದಲ್ಲಿ ಮೋಸ, ಗುರುತಿನ ಚೀಟಿ, ಪಿಎಫ್, ಬೋನಸ್ ಲಾಗ್ ಪುಸ್ತಕ ಕೊಡದೆ ಹಗಲು ದರೋಡೆ ಮಾಡುತಿದ್ದರು ಕಾರ್ಮಿಕ ಇಲಾಖೆ ಇದ್ದು ಸತ್ತಂಗಾಗಿದೆ. ನಾವು ಮನವಿ ಕೊಟ್ಟಗೊಮ್ಮೆ ಕಾಟಚಾರಕ್ಕೆ ಸಂಧಾನ ಪ್ರಕ್ರಿಯೆ ನಡೆಯುತ್ತದೆ. ಇಲ್ಲಾಂದರೆ ಮುಂದಕ್ಕೆ ಹೋಗುವುದಿಲ್ಲ
ಕಾರ್ಮಿಕರ ರಕ್ಷಣೆಗಾಗಿ ಕಾರ್ಮಿಕ ಕಾನೂನುಗಳಿರುವ ಈ ಕಾಲದಲ್ಲಿಯೇ ಪರಿಸ್ಥಿತಿ ಹೀಗಿರುವಾಗ ನಾಳೆ ದಿನ 44 ಕಾರ್ಮಿಕ ಕಾನೂನುಗಳು ಕಾರ್ಮಿಕ ಸಂಹಿತೆಯಾಗಿ ಜಾರಿ ಮಾಡಿದರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಬರಬಹುದೆಂದು ಉಹಿಸಿಕೊಳ್ಳಿ!
ಕಾರ್ಮಿಕರು ಹೋರಾಟಗಳನ್ನು ಮಾಡಿ, ಎಷ್ಟೊ ಮಂದಿ ಜೀವಗಳನ್ನು ಕಡೆದುಕೊಂಡು ಪಡೆದ ಕಾನೂನುಗಳು ಇವು. ಇವನ್ನು ಬದಲಾಯಿಸಲು ಯಾರ ಒಪ್ಪಿಗೆ ಇಲ್ಲದೆ, ಅವರ ಅಭಿಪ್ರಾಯ ಪಡೆಯದೆ ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಲಾಗುತ್ತಿದೆ. ಇವರ ಉದ್ದೇಶ ಕಾರ್ಮಿಕರು ನೂರಾರು ವರ್ಷದ ಹಿಂದೆ ಹೇಗೆ ಗುಲಾಮರಾಗಿದ್ದರು. ಅದು ಮತ್ತೆ ಮರುಕಳಿಸುವಂತೆ ಮಾಡುವುದೇ ಆಗಿದೆ. ಮತ್ತದೇ ಬಂಡವಾಳ ಶಾಹಿ ವ್ಯವಸ್ಥೆಯನ್ನು ಜಾರಿ ಮಾಡಿ ಕಾರ್ಮಿಕರ ಶ್ರಮವನ್ನು ಹಿಂಡಿ ದೋಚಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರುವ ಹುನ್ನಾರವಾಗಿದೆ.
ದುಡಿಯುವ ವರ್ಗ ಸಂಘಟಿತರಾದಾಗ ಮಾತ್ರ ಈ ಅನ್ಯಾಯ ಅಸಮಾನತೆ, ಶೋಷಣೆ, ದಬ್ಬಾಳಿಕೆ ದೌರ್ಜನ್ಯವನ್ನು ಹಿಮ್ಮೆಟ್ಟಿಸಿ ನಮ್ಮ ಹಕ್ಕನ್ನು ರಕ್ಷಿಸಿಕೊಳ್ಳಬಹುದು ಮತ್ತು ಪಡೆಯಬಹುದು.
✍️ಜಬೀನಾ ಖಾನಂ ದಾವಣಗೆರೆ
ನೆರಳು ಬೀಡಿ ಯೂನಿಯನ್ ಅಧ್ಯಕ್ಷರು