Saturday, December 14, 2024
Homeಕಲ್ಯಾಣ ಕರ್ನಾಟಕರಾಯಚೂರುನಿಂತಲ್ಲೇ ಹೊತ್ತಿ ಉರಿದ ಶಾಲಾ ವ್ಯಾನ್‌!

ನಿಂತಲ್ಲೇ ಹೊತ್ತಿ ಉರಿದ ಶಾಲಾ ವ್ಯಾನ್‌!


ರಾಯಚೂರು: ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ನಿಲುಗಡೆ ಮಾಡಲಾಗಿದ್ದ ಶಾಲಾ ಓಮ್ನಿ ವ್ಯಾನ್‌ ಇದ್ದಕ್ಕಿದ್ದಂತೆ ಹೊತ್ತಿ ಉರಿದು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಬುಧವಾರ ನಡೆಯಿತು.
ದೇವದುರ್ಗ ತಾಲ್ಲೂಕು ಗೊಬ್ಬೂರ ಗ್ರಾಮದ ಖಾಸಗಿ ಶಾಲೆಯ ವ್ಯಾನ್‌ ಇದಾಗಿದ್ದು, ಬೆಂಕಿ ಅವಘಡದಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ. ವ್ಯಾನ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಚಾಲಕ ಹಾಗೂ ಕೆಲವು ಜನರು ನೀರು ಹಾಕಿ ನಂದಿಸಲು ಯತ್ನಿಸಿದ್ದಾರೆ. ರೈಲ್ವೆ ನಿಲ್ದಾಣದೊಳಗಿನಿಂದ ಮರಳು ಹಾಗೂ ಬೆಂಕಿನಂದಿಸುವ ಉಪಕರಣ ತಂದು ಹಾಕಲಾಗಿತ್ತು. ಆದರೂ ಇದ್ದಕ್ಕಿದ್ದಂತೆ ಬೆಂಕಿ ಕೆನ್ನಾಲಿಗೆ ಚಾಚಿ ವ್ಯಾನ್‌ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ವಾಹನವು ತಲುಪುವ ಮೊದಲೇ ವಾಹನ ಉರಿದುಹೋಗಿತ್ತು.
ರೈಲ್ವೆ ನಿಲ್ದಾಣದಲ್ಲಿ ಅನ್ಯ ಕೆಲಸದ ನಿಮಿತ್ತ ಶಾಲೆಯ ಮುಖ್ಯಸ್ಥರು ಬಂದಿದ್ದರು. ಈ ವೇಳೆ ಘಟನೆ ನಡೆದಿದೆ. ‘ವ್ಯಾನ್‌ ಬೇರೆಯವರಿಂದ ಖರೀದಿ ಮಾಡಿದ್ದೆ. ಇನ್ನೂ ದಾಖಲೆಗಳನ್ನು ಮಾಡಿಕೊಳ್ಳುವುದು ಬಾಕಿ ಇತ್ತು. ವ್ಯಾನ್‌ನಲ್ಲಿ ಏನಾಯಿತು ಗೊತ್ತಿಲ್ಲ. ಒಮ್ಮೇಲೆ ಉರಿದುಹೋಗಿದೆ. ಈ ಬಗ್ಗೆ ಪೊಲೀಸ್‌ ಠಾಣೆಗೆ ಇನ್ನೂ ದೂರು ಸಲ್ಲಿಸಿಲ್ಲ’ ಎಂದು ಶಾಲೆಯ ಮುಖ್ಯಸ್ಥ ರವಿ ಅವರು ತಿಳಿಸಿದರು.
ಇನ್ನೊಂದು ವಾಹನಕ್ಕೂ ಬೆಂಕಿ: ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಟಾಟಾ ಏಸ್‌ ವಾಹನಕ್ಕೆ ನಿಲುಗಡೆ ಮಾಡಿರುವ ಜಾಗದಲ್ಲೇ ಬೆಂಕಿ ಹೊತ್ತಿಕೊಂಡಿದ್ದ ಘಟನೆ ಕೂಡಾ ಬುಧವಾರವೇ ನಡೆದಿದೆ.
ವಾಹನದ ಮುಂಭಾಗ ಮಾತ್ರ ಸುಟ್ಟುಹೋಗಿದೆ. ನೆರೆದಿದ್ದ ಜನರು ಕೂಡಲೇ ವಾಹನದ ಮೇಲೆ ಮಣ್ಣು ಹಾಗೂ ನೀರು ಸುರಿದು ಬೆಂಕಿ ನಂದಿಸಿದ್ದಾರೆ. ಯಾವುದೇ ಜೀವಹಾನಿಯಾಗಿಲ್ಲ.