Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆನಿವೃತ್ತ ಯೋಧ ಕುಮಾರ್‌ಗೆ ಸಂಭ್ರಮದ ಸ್ವಾಗತ

ನಿವೃತ್ತ ಯೋಧ ಕುಮಾರ್‌ಗೆ ಸಂಭ್ರಮದ ಸ್ವಾಗತ

ಸಂತೇಬೆನ್ನೂರು: ಭಾರತೀಯ ಸೇನೆಯಿಂದ ನಿವೃತ್ತರಾದ ಸಮೀಪದ ಮರಡಿ ಗ್ರಾಮದ ಎಂ.ಪಿ. ಕುಮಾರ್ ಅವರನ್ನು ಕೆಎಸ್‌ಡಿಎಲ್ ಅಧ್ಯಕ್ಷ
ಕೆ. ಮಾಡಾಳ್ ವಿರೂಪಾಕ್ಷಪ್ಪ ಮರಡಿ ಗ್ರಾಮಕ್ಕೆ ಸ್ವಾಗತಿಸಿದರು.

ಗ್ರಾಮಸ್ಥರು ವೀರ ಯೋಧನ ದೇಶಸೇವೆಯನ್ನು ಸ್ಮರಿಸಿ ಜಯಘೋಷ ಕೂಗಿದರು.

ಕೆಎಸ್‌ಡಿಎಲ್ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ‘ಉಗ್ರರನ್ನು ಸದೆ ಬಡಿಯುವಲ್ಲಿ ಸೈನಿಕರ ಪಾತ್ರ ಶ್ಲಾಘನೀಯ. ನಿವೃತ್ತ ಯೋಧ ಕುಮಾರ್ ಗ್ರಾಮದಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳಲಿ. ಸಂಪೂರ್ಣ ಸಹಕಾರ ನೀಡುವೆ’ ಎಂದು ಭರವಸೆ
ನೀಡಿದರು.

ನಿವೃತ್ತ ಯೋಧ ಎಂ.ಪಿ. ಕುಮಾರ್, ‘ಐಟಿಐ ಓದುತ್ತಿರುವಾಗ ಭಾರತೀಯ ಸೇನೆಗೆ ಆಯ್ಕೆಯಾದೆ. ತಂದೆ ಪರಸಪ್ಪ ದೇಶ ಸೇವೆಗೆ ಕಳುಹಿಸಿಕೊಟ್ಟರು. ಮೊದಲ ತಾಣ ಲೇಹ್, ಲಡಾಖ್ ಆಗಿತ್ತು. ಸಿನಿಮಾದಲ್ಲಿ ತೋರಿಸುವುದಕ್ಕಿಂತ ಭಿನ್ನ ವಾತಾವರಣ ಅಲ್ಲಿ. ಮೈನಸ್ ಡಿಗ್ರಿ ಸೆಲ್ಸಿಯಸ್‌ನಲ್ಲಿ ಕೆಲಸ ನಿರ್ವಹಿಸಬೇಕು. 2 ವರ್ಷಗಳಲ್ಲಿ ಹಲವು ಬಾರಿ ಪಾಕಿಸ್ತಾನ ಸೈನಿಕರೊಂದಿಗೆ ಗುಂಡಿನ ಚಕಮಕಿ ನಡೆದಿತ್ತು. ಆನಂತರ ಕಾರ್ಗಿಲ್‌ನಲ್ಲಿ ನಮ್ಮ ಸೈನ್ಯ ಬಲ ಕಡಿಮೆ ಇದ್ದಾಗ ಉಗ್ರಗಾಮಿಗಳು ದಾಳಿ ನಡೆಸಿದರು. ನನ್ನ ಪಕ್ಕದಲ್ಲಿದ್ದ ಸೈನಿಕ ಗುಂಡೇಟಿನಿಂದ ಮೃತಪಟ್ಟಿತು. ಅದೃಷ್ಟವಶಾತ್ ಒಂದು ಕಲ್ಲು ನನ್ನ ಪ್ರಾಣ ಉಳಿಸಿತು’ ಎಂದು ನೆನೆದು ಭಾವುಕರಾದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರುದ್ರಪ್ಪ, ಕಾಟಿ ಹನುಮಂತಪ್ಪ, ಬಸವರಾಜ್ ಭೀಮನೆರೆ ಇದ್ದರು. ಮಲ್ಲೇಶ್ ಸ್ವಾಗತಿಸಿದರು. ಸುರೇಶ್ ಕಾರ್ಯಕ್ರಮ ನಿರೂಪಿಸಿದರು.