Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿಪಂಚಮಸಾಲಿ ಮೀಸಲಾತಿ: ಮಾರ್ಚ್ ಗಡುವು

ಪಂಚಮಸಾಲಿ ಮೀಸಲಾತಿ: ಮಾರ್ಚ್ ಗಡುವು

ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಮಾರ್ಚ್‌ವರೆಗೆ ಗಡುವು ಕೊಡಲಾಗಿದೆ’ ಎಂದು ಕೂಡಲಸಂಗಮ‌ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಗುರುವಾರ ನಡೆದ ಸಮಾಜದ ಜನಪ್ರತಿನಿಧಿಗಳು ಹಾಗೂ ಮುಖಂಡರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಮ್ಮ ಹೋರಾಟದ ಪ್ರಾಮಾಣಿಕತೆ ಮನಗಂಡು ಮುಖ್ಯಮಂತ್ರಿಯೇ ನಮ್ಮ ಸಭೆಯಲ್ಲಿ ಭಾಗವಹಿಸಿದ್ದರು. ‌ಶೀಘ್ರದಲ್ಲೇ‌ ಮೀಸಲಾತಿ ನೀಡಲಾಗುವುದು ಎಂದು ಅವರು ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ನನ್ನ ಮೇಲೆ ನಂಬಿಕೆ ಇಡಿ. ಯಾವುದೇ ಸಮಾಜಕ್ಕೂ ಅನ್ಯಾಯ ಆಗದ ರೀತಿಯಲ್ಲಿ ನಿಮಗೆ ಮೀಸಲಾತಿ ‌ಕೊಡುತ್ತೇವೆ ಎಂದು ಹೇಳಿದ್ದಾರೆ. ಇದರೊಂದಿಗೆ ನಮ್ಮ ಹೋರಾಟಕ್ಕೆ ಶೇ 75ರಷ್ಟು ಯಶಸ್ಸು ಸಿಕ್ಕಿದೆ. ಅವರ ಮೇಲೆ‌ ನಮಗೆ ನಂಬಿಕೆ ಬಂದಿದೆ ಎಂದರು.

ಹಿಂದುಳಿದ ವರ್ಗದ ಆಯೋಗ ಸಮೀಕ್ಷೆಗೆ ಸಮಯ ಬೇಕಾಗಿರುವುದರಿಂದ, ಮಾರ್ಚ್ ತಿಂಗಳ ಒಳಗೆ ಮೀಸಲಾತಿ ಕೊಡಬೇಕು. ಶೀಘ್ರದಲ್ಲೇ ವರದಿ ಪಡೆದುಕೊಳ್ಳಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಗಿದೆ‌ ಎಂದು ಹೇಳಿದರು.

ಸರ್ಕಾರಕ್ಕೆ ನಮ್ಮ ಹೋರಾಟದ ಬಿಸಿ ಮುಟ್ಟಿದೆ. ಆದರೆ, ಹೋರಾಟ ಮುಂದುವರಿಸಲಾಗುವುದು ಎಂದರು.

ಸಭೆಯಲ್ಲಿ‌ ಸಮಾಜದ ಹಾಲಿ ಹಾಗೂ ಮಾಜಿ ಶಾಸಕರು, ಹಾಲಿ ಹಾಗೂ ಮಾಜಿ ಸಂಸದರು ಭಾಗವಹಿಸಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸ್ಪಂದನೆ ತೋರಿದ್ದಾರೆ ಎಂದರು.