ಕಾರವಾರ: ‘ರಾಜ್ಯೋತ್ಸವ’ ಪ್ರಶಸ್ತಿ ಪುರಸ್ಕೃತ ಪರಿಸರ ತಜ್ಞ, ಜಾನಪದ ಕಲಾವಿದ ಜೊಯಿಡಾ ತಾಲ್ಲೂಕಿನ ತಾಲ್ಲೂಕಿನ ಕಾರ್ಟೋಳಿ ಗ್ರಾಮದ ಮಹಾದೇವ ಬುದೋ ವೇಳಿಪ (92) ಗುರುವಾರ ಬೆಳಿಗ್ಗೆ ನಿಧನರಾದರು. ಅಂತ್ಯಕ್ರಿಯೆಯು ಕಾರ್ಟೋಳಿಯಲ್ಲಿ ನಡೆಯಲಿದೆ.
ನಾಗೋಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಟೋಳಿಯವರಾದ ಅವರು, ಪರಿಸರದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಅವರ ಸಾಧನೆಯನ್ನು ಪರಿಗಣಿಸಿ 2021ರ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ ರಾಜ್ಯ ಸರ್ಕಾರ ಗೌರವಿಸಿತ್ತು. ಈ ಪುರಸ್ಕಾರಕ್ಕೆ ಜೊಯಿಡಾ ತಾಲ್ಲೂಕಿನಿಂದ ಪಾತ್ರರಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಗೂ ಅವರು ಭಾಜನರಾಗಿದ್ದರು.
ಕೃಷಿ ಕುಟುಂಬದವರಾದ ಅವರು, ಹಲವು ವರ್ಷಗಳಿಂದ ಬುಡಕಟ್ಟು ಸಂಸ್ಕೃತಿ ಹಾಗೂ ಕಲೆಯನ್ನು ಬೆಳೆಸಿ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಬುಡಕಟ್ಟು ಕುಣಬಿ ಸಂಸ್ಕೃತಿಯ ಬಗ್ಗೆ ಹಾಡುಗಳ ಮೂಲಕ ಅರಿವು ಮೂಡಿಸುತ್ತಿದ್ದರು.
ಹಕ್ಕಿಗಳ ಕೂಗನ್ನು ಆಧರಿಸಿ ನಿಖರವಾದ ಸಮಯ ಹೇಳುವುದು ಅವರಿಗೆ ಕರತಗವಾಗಿತ್ತು. ಕಾಡಿನಿಂದ ಒಣ ಎಲೆಗಳನ್ನು ತರುವುದನ್ನು ಅವರು ವಿರೋಧಿಸುತ್ತಿದ್ದರು. ಪರಿಸರ ಸಮತೋಲನದಲ್ಲಿ ಉಣುಗು (ಉಣ್ಣಿ), ಉಂಬಳಗಳೂ ಮಹತ್ವದ ಪಾತ್ರ ಹೊಂದಿವೆ, ಅವುಗಳನ್ನು ನಾಶ ಮಾಡಬಾರದು ಎಂದು ತಿಳಿವಳಿಕೆ ಮೂಡಿಸುತ್ತಿದ್ದರು. ಜೇನುನೊಣಗಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. 38 ಜಾತಿಯ ಗೆಡ್ಡೆ, ಗೆಣಸುಗಳನ್ನು ಗುರುತಿಸುವುದನ್ನು ಅವರು ಅರಿತಿದ್ದರು.
ಅವರಿಗೆ ಮೂವರು ಗಂಡು ಮಕ್ಕಳು ಹಾಗೂ ನಾಲ್ವರು ಹೆಣ್ಣು ಮಕ್ಕಳು. ಪತ್ನಿ ಮತ್ತು ಹಿರಿಯ ಮಗ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ.