ಬೆಂಗಳೂರು: ಭಾರತದ ಮೂಲೆ ಮೂಲೆಗಳಲ್ಲಿ ಸಂಭ್ರಮದಿಂದ ಆಚರಿಸುವ ಹಬ್ಬ ದೀಪಾವಳಿ ಹಬ್ಬ. ಒಂದೊಂದು ಊರಿನಲ್ಲಿ ಒಂದೊಂದು ರಾಜ್ಯದಲ್ಲಿ ದೀಪಾವಳಿಯ ಕಥೆಗಳು ಭಿನ್ನ. ಆದರೆ ಪಟಾಕಿಯ ಸದ್ದು ಒಂದೇ. ಹಾಗಾಗಿ ಪಟಾಕಿ ಸಿಡಿಸುವಾಗ ಎಚ್ಚರ ವಹಿಸಬೇಕಾದುದು ಅಗತ್ಯ.
ಆಪತ್ತು ಇದೆ ಎಂದು ಕಣ್ಣಿಗೆ ತಿಳಿದ ತಕ್ಷಣದಲ್ಲಿ ರೆಪ್ಪೆ ಮುಚ್ಚಿಕೊಳ್ಳುವ ಸಹಜವಾದ ವ್ಯವಸ್ಥೆ ನಮ್ಮ ದೇಹದಲ್ಲಿ ಇದೆ. ಆದರೆ, ಕೆಲವೊಮ್ಮೆ ಈ ವ್ಯವಸ್ಥೆ ಕೈಕೊಡುವುದೂ ಉಂಟು. ಕಣ್ಣಿನ ಹೊರಪದರ ಕಾರ್ನಿಯಾವು ಪಾರದರ್ಶಕವಾಗಿ ಇರುತ್ತದೆ ಮತ್ತು ಬೆಳಕನ್ನು ಕಣ್ಣಿನೊಳಗೆ ಬಿಟ್ಟುಕೊಂಡು ದೃಷ್ಟಿಯನ್ನು ನೀಡುತ್ತದೆ. ಕಣ್ಣಿನ ಅಂತರ್ಗತ ಒತ್ತಡದಿಂದ ಅದು ವೃತ್ತಾಕಾರದಲ್ಲೇ ಇರುತ್ತದೆ. ಕಣ್ಣಿನ ಹತ್ತಿರದಲ್ಲೇ ಪಟಾಕಿ ಸಿಡಿಯುತ್ತಿದ್ದರೆ ಕಣ್ಣಿನ ಟಿಶ್ಯೂಗಳಿಗೆ ಹಾನಿ ಉಂಟಾಗುತ್ತದೆ ಮತ್ತು ಈ ಹಂತದಲ್ಲಿ ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ.
ಅಡುಗೆ ಮಾಡುವಾಗ ಬಿಸಿ ಎಣ್ಣೆ ಕಣ್ಣಿಗೆ ಬಿದ್ದರೆ ಕಣ್ಣಿನ ಹೊರ ಪದರ ಸುಟ್ಟುಹೋಗುತ್ತದೆ. ದೀಪಾವಳಿಗೆ ವಿದ್ಯುತ್ತಿನ ದೀಪಾಲಂಕಾರ ಮಾಡುವುದು ಸಹಜ. ವೈರಿಂಗ್ನಲ್ಲಿ ತೊಂದರೆ ಆಗಿ ಕಣ್ಣಿಗೆ ಹಾನಿಯಾಗಬಹುದು. ಈ ಎಲ್ಲದಕ್ಕಿಂತ ಪಟಾಕಿಯಿಂದ ಆಗುವ ಅಪಾಯವೇ ಹೆಚ್ಚು ಹಾನಿಕರವಾದದ್ದು.
ಕಣ್ಣಿಗೆ ಏನೋ ಬಿದ್ದ ಅನುಭವವಾದರೆ, ಬಿಸಿ ಎಣ್ಣೆ ಕಣ್ಣಿಗೆ ಬಿದ್ದರೆ, ತಕ್ಷಣದಲ್ಲಿ ಶುದ್ಧ ನೀರಿನಿಂದ ಕಣ್ಣನ್ನು ತೊಳೆದುಕೊಳ್ಳಬೇಕು ಅಥವಾ ಒಂದು ಬಟ್ಟಲಿನಲ್ಲಿ ನೀರನ್ನು ತುಂಬಿಕೊಂಡು ಕಣ್ಣನ್ನು ಅದ್ದಿ ಕಣ್ಣನ್ನು ಮಿಟುಕಿಸಬೇಕು. ನಂತರದಲ್ಲಿ ವೈದ್ಯರನ್ನು ಸಂಪರ್ಕಿಸಿ ಕಣ್ಣಿಗೆ ಬಿದ್ದ ವಸ್ತುವನ್ನು ತಕ್ಷಣದಲ್ಲಿ ತೆಗೆಸಿಕೊಳ್ಳಬೇಕು. ಅದಕ್ಕೆ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು.
ಪಟಾಕಿ ಸಿಡಿದು ಕಣ್ಣನಿಂದ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ, ಶುದ್ಧ ನೀರಿನಿಂದ ಕಣ್ಣನ್ನು ತೊಳೆದುಕೊಳ್ಳಬೇಕು. ಶುದ್ಧವಾದ ಹತ್ತಿ ಬಟ್ಟೆಯನ್ನು ಕಣ್ಣಿಗೆ ಸುತ್ತಿಕೊಳ್ಳಬೇಕು. ತಕ್ಷಣದಲ್ಲಿ ವೈದ್ಯರಲ್ಲಿಗೆ ಹೋಗಬೇಕು. ಶಸ್ತ್ರಚಿಕಿತ್ಸೆಯ ಅಗತ್ಯವೂ ಆಗಬಹುದು.
ಅಡುಗೆ ಮಾಡುವಾಗ ಬಿಸಿ ಎಣ್ಣೆ ಹಾರದಂತೆ ಕಣ್ಣಿಗೆ ಕನ್ನಡಕದ ರೀತಿಯಲ್ಲಿ ಏನಾದರೂ ಹಾಕಿಕೊಳ್ಳುವುದು ಉತ್ತಮ. ಬಾಣಲೆಯಿಂದ ದೂರದಲ್ಲಿ ಮುಖ ಇರುವುದು ಉತ್ತಮ. ಜೊತೆಗೆ ಸೊಂಟಕ್ಕಿಂತ ಮೇಲಿನ ಮಟ್ಟದಲ್ಲಿ ಪಾತ್ರೆಗಳನ್ನು ಬಳಸಿ ಅಡುಗೆ ಮಾಡುವುದು ಉತ್ತಮ. ಪಟಾಕಿ ಸಿಡಿಯುವಾಗ ದೂರ ನಿಲ್ಲಬೇಕು. ಮುಖಕ್ಕೆ ಫೇಸ್ಶೀಲ್ಡ್ ಹಾಕಿಕೊಳ್ಳುವುದು ಉತ್ತಮ. ಕೋವಿಡ್ ಕಾರಣದಿಂದ ಇಂಥ ಶೀಲ್ಡ್ಗಳು ಆರಾಮಾಗಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ.
ಪಟಾಕಿ ಹಚ್ಚಿ ಕೈಯಲ್ಲಿ ಹಿಡಿದುಕೊಳ್ಳುವುದು, ಗಾಳಿಯಲ್ಲಿ ಬಿಸಾಡುವುದು ಒಳ್ಳೆಯ ನಡೆಯಲ್ಲ. ಪಟಾಕಿ ಹಚ್ಚುವ ವೇಳೆ ಮಕ್ಕಳು ದೊಡ್ಡವರ ನಿಗಾದಲ್ಲಿ ಇರುವುದು ಉತ್ತಮ. ಇಂಥ ಸಮಯದಲ್ಲಿ ಹತ್ತಿರದಲ್ಲಿಯೇ ಬಕೆಟ್ನಲ್ಲಿ ನೀರನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಹೆಚ್ಚಿನವರು ರಸ್ತೆಯಲ್ಲಿಯೇ ಪಟಾಕಿ ಸಿಡಿಸುವುದರಿಂದ ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸುವುದು ಉತ್ತಮ.
ಕಣ್ಣಿಗೆ ತೊಂದರೆ ಆದಾಗ ತಾವಾಗಿಯೇ ಚಿಕಿತ್ಸೆ ಮಾಡಿಕೊಳ್ಳುವುದು, ಮನೆಯಲ್ಲೇ ಇರುವ ಕಣ್ಣಿನ ಡ್ರಾಪ್ಗಳನ್ನು ಬಳಸುವುದು ತಪ್ಪು. ವೈದ್ಯರ ಬಳಿ ಹೋಗುವುದೇ ಉತ್ತಮ. ಚಿಕಿತ್ಸೆಗಿಂತ ಎಚ್ಚರಿಕೆಯೇ ಉತ್ತಮವಾದುದು’ ಎನ್ನುವಂತೆ ಎಚ್ಚರಿಕೆ ವಹಿಸಿ ಹಬ್ಬಗಳನ್ನು ಆಚರಿಸುವುದು ಒಳಿತು.