Saturday, December 14, 2024
Homeರಾಜ್ಯಬೆಂಗಳೂರು ವಿಭಾಗಬೆಂಗಳೂರಿನಲ್ಲಿ ಮಳೆಯ ಅಬ್ಬರ

ಬೆಂಗಳೂರಿನಲ್ಲಿ ಮಳೆಯ ಅಬ್ಬರ

ಬೆಂಗಳೂರು: ನಗರದಲ್ಲಿ ಗುರುವಾರ ರಾತ್ರಿ ಜೋರು ಮಳೆ ಸುರಿದಿದ್ದು, ಬಹುತೇಕ ಕಡೆ ರಸ್ತೆಗಳಲ್ಲಿ ನೀರು ಕಾಲುವೆಯಂತೆ ಹರಿಯಿತು.

ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ, ಮೋಡ ಕವಿದ ವಾತಾವರಣದಿಂದಾಗಿ ಆಗಾಗ ಮುನ್ಸೂಚನೆ ನೀಡುತ್ತಿತ್ತು. ಗುರುವಾರವೂ ಬೆಳಿಗ್ಗೆಯಿಂದ ನಗರದ ಹಲವೆಡೆ ಬಿಸಿಲು ಇತ್ತು. ನಂತರ, ಮೋಡ ಕವಿದ ವಾತಾವರಣವೂ ಕಾಣಿಸಿಕೊಂಡಿತ್ತು.

ನಗರದ ಹಲವೆಡೆ ಸಂಜೆಯಿಂದಲೇ ಜಿಟಿ ಜಿಟಿ ಮಳೆ ಸುರಿಯಲಾರಂಭಿಸಿತ್ತು. ಬಹುತೇಕ ಕಡೆ ರಾತ್ರಿ ಮಳೆ ಅಬ್ಬರಿಸಿ ಸುರಿಯಿತು, ಎರಡು ಗಂಟೆ ನಿರಂತರವಾಗಿ ಸುರಿದ ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ನೀರು ಧಾರಾಕಾರವಾಗಿ ಹರಿಯಿತು.
ರಾಜಾಜಿನಗರ, ವಿಜಯನಗರ, ದೀಪಾಂಜಲಿನಗರ, ರಾಜರಾಜೇಶ್ವರಿ ನಗರ, ಕೆಂಗೇರಿ, ಗಿರಿನಗರ, ಹೊಸಕೆರೆಹಳ್ಳಿ, ಹನುಮಂತನಗರ, ಚಾಮರಾಜಪೇಟೆ, ಮೆಜೆಸ್ಟಿಕ್, ಗಾಂಧಿನಗರ, ಚಿಕ್ಕಪೇಟೆ, ಶೇಷಾದ್ರಿಪುರ, ಮಲ್ಲೇಶ್ವರ, ಯಶವಂತಪುರ, ಪೀಣ್ಯ, ದಾಸರಹಳ್ಳಿ, ಗೊರಗುಂಟೆಪಾಳ್ಯ ಹಾಗೂ ಸುತ್ತಮುತ್ತ ಮಳೆ ಅಬ್ಬರ ಹೆಚ್ಚಿತ್ತು.

ಎಂ.ಜಿ. ರಸ್ತೆ, ಅಶೋಕನಗರ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ, ವಿವೇಕನಗರ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಉತ್ತಮ ಮಳೆ ಆಯಿತು.

ದೀಪಾವಳಿ ಹಬ್ಬದ ಆಚರಣೆಯಲ್ಲಿದ್ದ ಜನ, ಅಗತ್ಯ ವಸ್ತುಗಳ ಖರೀದಿಗಾಗಿ ಮಾರುಕಟ್ಟೆಗಳಿಗೆ ಬಂದಿದ್ದರು. ಇದೇ ಸಂದರ್ಭದಲ್ಲೇ ಮಳೆ ಸುರಿಯಲಾರಂಭಿಸಿತ್ತು. ಪ್ರತಿಯೊಂದು ಅಂಗಡಿ ಹಾಗೂ ಮಳಿಗೆಗಳಲ್ಲಿ ಜನರು ಆಶ್ರಯ ಪಡೆದಿತ್ತು ಕಂಡುಬಂತು.

ರಸ್ತೆಯ ಅಕ್ಕ–ಪಕ್ಕದಲ್ಲಿ ವಾಹನ ನಿಲ್ಲಿಸಿದ್ದ ಸವಾರರು ಸಹ ಮಳಿಗೆಗಳಲ್ಲಿ ಆಶ್ರಯ ಪಡೆದಿದ್ದರು. ಸುರಿವ ಮಳೆಯಲ್ಲೇ ಕಾರು, ಬಸ್‌ ಹಾಗೂ ಇತರೆ ವಾಹನಗಳು ಸಂಚರಿಸಿದವು. ಕೆಲ ವಾಹನಗಳು ಕೆಟ್ಟು ನಿಂತಿದ್ದವು.

ಶಿವಾನಂದ ವೃತ್ತದ ಕೆಳ ಸೇತುವೆ ಹಾಗೂ ಮೆಜೆಸ್ಟಿಕ್ ಕೆಳ ಸೇತುವೆಯಲ್ಲಿ ನೀರು ಹರಿಯುವಿಕೆ ಹೆಚ್ಚಿತ್ತು. ಅದರಲ್ಲೇ ವಾಹನಗಳು ಸಂಚರಿಸಿದವು. ಕೆಲ ವಾಹನಗಳು ಕೆಟ್ಟು ನಿಂತಿದ್ದ ದೃಶ್ಯಗಳೂ ಕಾಣಿಸಿದವು.

‘ಗುರುವಾರ ಸಂಜೆಯಿಂದ ರಾತ್ರಿಯವರೆಗೂ ನಗರದಲ್ಲಿ ಉತ್ತಮ ಮಳೆ ಆಗಿದೆ. ರಸ್ತೆಯಲ್ಲಿ ನೀರು ಹರಿಯುತ್ತಿದ್ದ ಹಾಗೂ ಮರದ ಕೊಂಬೆಗಳು ಬಿದ್ದಿದ್ದ ದೂರುಗಳು ಬಂದಿದ್ದವು. ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಸರಿಪಡಿಸಲಾಗಿದೆ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.