Monday, January 6, 2025
Homeಉತ್ತರ ಕರ್ನಾಟಕಬೆಳಗಾವಿಬೈಪಾಸ್‌ ಕಾಮಗಾರಿಗೆ ವಿರೋಧ: ಬೆಂಕಿ ಹಚ್ಚಿಕೊಂಡು ಅತ್ಮಹತ್ಯೆಗೆ ಯತ್ನ

ಬೈಪಾಸ್‌ ಕಾಮಗಾರಿಗೆ ವಿರೋಧ: ಬೆಂಕಿ ಹಚ್ಚಿಕೊಂಡು ಅತ್ಮಹತ್ಯೆಗೆ ಯತ್ನ

ಬೆಳಗಾವಿ: ತಾಲ್ಲೂಕಿನಲ್ಲಿ ಹಲಗಾ – ಮಚ್ಛೆ ಬೈಪಾಸ್ ಕಾಮಗಾರಿಗೆ ಭಾರಿ ವಿರೋಧ ವ್ಯಕ್ತವಾಗಿದೆ. ಕಾಮಗಾರಿ ವಿರೋಧಿಸಿ ಗುರುವಾರ ನಡೆದ ಪ್ರತಿಭಟನೆಯ ವೇಳೆ ರೈತನ ಪುತ್ರನೊಬ್ಬ ಮರವೇರಿ ಆತ್ಮಹತ್ಯೆ ಬೆದರಿಕೆ ಹಾಕಿದರೆ, ಇನ್ನೊಬ್ಬ ರೈತ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಹಾಲಗಾ- ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದರು. ಈ ವೇಳೆ ರೈತರು ಕಾಮಗಾರಿ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದರು. ರಸ್ತೆ ನಿರ್ಮಾಣಕ್ಕೆ ಈ ಮೊದಲು ಸರ್ವೇ ಮಾಡಿದ ಜಮೀನು ಜೊತೆಗೆ ಫಲವತ್ತಾದ ಕೃಷಿ ಭೂಮಿಯನ್ನೂ ವಶಕ್ಕೆ ಪಡೆಯಲಾಗಿದೆ ಎಂದು ರೈತರು ಆರೋಪಿಸಿದರು.

ಈ ವೇಳೆ, ಆಕಾಶ್​ ಅನಗೋಳಕರ್​ ಎನ್ನುವವರು ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ತಕ್ಷಣವೇ ಪೊಲೀಸರು ಅವರನ್ನು ರಕ್ಷಿಸಿದ್ದಾರೆ.

ಕಾಮಗಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿ ರೈತರು ಸೇರಿದಂತೆ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ವೇಳೆ ಮಹಿಳೆಯರು ಪೊಲೀಸರ ವಾಗ್ವಾದ ನಡೆಯಿತು. ಕಣ್ಣೀರಿಡುತ್ತಲೇ ರೈತ ಮಹಿಳೆಯರು ಪೊಲೀಸರಿಗೆ ಹಿಡಿಶಾಪ ಹಾಕಿದರು.‌ ಮಹಿಳಾ ಪೊಲೀಸರು ನನ್ನ ಸೀರೆ ಹರಿದರು ಎಂದು ರೈತ ಮಹಿಳೆಯೊಬ್ಬರು ಆರೋಪಿಸಿದರು. ಸೆರಗು ಹರಿದಿದ್ದನ್ನು ಪ್ರದರ್ಶಿಸಿದರು.