Saturday, December 14, 2024
Homeಸುದ್ದಿರಾಷ್ಟ್ರೀಯಬ್ಯಾಂಕ್‌ ಆಫ್‌ ಬರೋಡಾದಲ್ಲಿ 6000 ಕೋಟಿ ರೂಪಾಯಿ ಹಗರಣ: ಆರು ಬಂಧನ

ಬ್ಯಾಂಕ್‌ ಆಫ್‌ ಬರೋಡಾದಲ್ಲಿ 6000 ಕೋಟಿ ರೂಪಾಯಿ ಹಗರಣ: ಆರು ಬಂಧನ

ನವದೆಹಲಿ : ಬ್ಯಾಂಕ್‌ ಆಫ್‌ ಬರೋಡಾದಲ್ಲಿ ನಡೆದಿದೆ ಎನ್ನಲಾದ 6,000 ಕೋಟಿ ರೂ‍ಪಾಯಿ ಮೊತ್ತದ ವಿದೇಶಿ ವಿನಿಮಯ ಪಾವತಿ ಹಗರಣಕ್ಕೆ ಸಂಬಂಧಿಸಿ ಆರು ಜನರನ್ನು ಸಿಬಿಐ ಬುಧವಾರ ಬಂಧಿಸಿದೆ. ಹಗರಣವು 2015ರಲ್ಲಿ ಬಯಲಿಗೆ ಬಂದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ 14 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿದೆ. ಸಿಬಿಐ ವಿಶೇಷ ನ್ಯಾಯಾಲಯದಲ್ಲಿ 2015ರ ಡಿಸೆಂಬರ್‌ನಲ್ಲಿ ಆರೋಪಪಟ್ಟಿಯನ್ನು ಸಿಬಿಐ ದಾಖಲಿಸಿತ್ತು. ಬ್ಯಾಂಕ್‌ ಆಫ್‌ ಬರೋಡಾದ ಆಗಿನ ಎಜಿಎಂ, ವಿದೇಶ ವಿನಿಮಯ ಅಧಿಕಾರಿಯ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿತ್ತು ಎಂದು ಸಿಬಿಐ ವಕ್ತಾರ ಆರ್‌.ಸಿ.ಜೋಶಿ ತಿಳಿಸಿದ್ಧಾರೆ.

ತನುಜ್‌ ಗುಲಾಟಿ, ಐಶ್‌ ಭೂತಾನಿ, ಉಜ್ವಲ್‌ ಸೂರಿ, ಹನಿ ಗೋಯಲ್‌, ಸಾಹಿಲ್‌ ವಾಧ್ವಾ ಮತ್ತು ರಾಕೇಶ್‌ ಕುಮಾರ್ ಬಂಧಿತರು.

ಬ್ಯಾಂಕ್‌ ಅಫ್‌ ಬರೋಡಾದ ದೆಹಲಿಯ ಅಶೋಕವಿಹಾರ್‌ ಶಾಖೆಯಲ್ಲಿರುವ 59 ಕರೆಂಟ್‌ ಅಕೌಂಟ್‌ಗಳಿಂದ ವಿವಿಧ ದೇಶಗಳಲ್ಲಿರುವ ಖಾತೆಗಳಿಗೆ ಸುಮಾರು ₹6,000 ಕೋಟಿಯನ್ನು ಪಾವತಿಸಲಾಗಿತ್ತು. ಬ್ಯಾಂಕ್‌ನ ಹಲವು ಅಧಿಕಾರಿಗಳು ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.

2014ರ ಜುಲೈಯಿಂದ 2015ರ ಜುಲೈ ಅವಧಿಯಲ್ಲಿ ಸುಮಾರು ಎಂಟು ಸಾವಿರ ವಹಿವಾಟುಗಳ ಮೂಲಕ ಈ ಮೊತ್ತವನ್ನು ವರ್ಗಾಯಿಸಲಾಗಿತ್ತು.

ಪ್ರತಿ ವಹಿವಾಟಿನ ಮೊತ್ತವನ್ನು ಒಂದು ಲಕ್ಷ ಡಾಲರ್‌ಗಿಂತ ಅಂದರೆ 75 ಲಕ್ಷ ರೂಪಾಯಿಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಲಾಗಿತ್ತು. ಮುಂಗಡವಾಗಿ ಈ ಹಣವನ್ನು ರವಾನಿಸಲಾಗಿತ್ತು. ಎಲ್ಲ ಹಣವೂ ಒಬ್ಬರದೇ ಖಾತೆಗೆ ಜಮಾ ಆಗಿತ್ತು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.