Monday, May 19, 2025
Homeಉತ್ತರ ಕರ್ನಾಟಕಬೆಳಗಾವಿಭೂಗತಪಾತಕಿ ಬನ್ನಂಜೆ ರಾಜಾ ಸೇರಿ 9 ಮಂದಿ ದೋಷಿಗಳು: ಬೆಳಗಾವಿ ಕೋಕಾ ನ್ಯಾಯಾಲಯ ಮಹತ್ವದ ತೀರ್ಪು

ಭೂಗತಪಾತಕಿ ಬನ್ನಂಜೆ ರಾಜಾ ಸೇರಿ 9 ಮಂದಿ ದೋಷಿಗಳು: ಬೆಳಗಾವಿ ಕೋಕಾ ನ್ಯಾಯಾಲಯ ಮಹತ್ವದ ತೀರ್ಪು

ಬೆಳಗಾವಿ: ಅಂಕೋಲಾದ ಉದ್ಯಮಿ ಆರ್.ಎನ್. ನಾಯಕ ಕೊಲೆ ಪ್ರಕರಣ ಸಂಬಂಧ ಇಲ್ಲಿನ ಕೋಕಾ ನ್ಯಾಯಾಲಯವು, ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಮಂದಿಯನ್ನು ದೋಷಿಗಳು ಎಂದು ಮಹತ್ವದ ತೀರ್ಪು ಪ್ರಕಟಿಸಿದೆ.

ಶಿಕ್ಷೆಯ ಪ್ರಮಾಣ ಕಾಯ್ದಿರಿಸಿ ನ್ಯಾಯಾಧೀಶ ಸಿ.ಎಂ‌. ಜೋಶಿ ತೀರ್ಪು ನೀಡಿದ್ದಾರೆ. ಏಪ್ರಿಲ್ 4ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಜೋಶಿ ತಿಳಿಸಿದ್ದಾರೆ.

ಪ್ರಕರಣದ 6, 11 ಹಾಗೂ 16ನೇ ಆರೋಪಿಗಳನ್ನು ನಿರ್ದೋಷಿಗಳು ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಆರನೇ ಆರೋಪಿ ಕೇರಳದ ರಬ್ದಿನ್ ಫಿಚೈ, 11 ನೇ ಆರೋಪಿ ಬೆಂಗಳೂರಿನ ಮಹ್ಮದ್ ಶಾಬಂದರಿ ಹಾಗೂ 16 ನೇ ಆರೋಪಿ ಉತ್ತರ ಕನ್ನಡದ ಆನಂದ ರಮೇಶ್ ‌ನಾಯಕ ಈ ಪ್ರಕರಣದಲ್ಲಿ ದೋಷಮುಕ್ತರಾಗಿದ್ದಾರೆ.
ಉಳಿದಂತೆ ಎರಡನೇ ಆರೋಪಿ ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ಮೂರನೇ ಆರೋಪಿ ಬೆಂಗಳೂರಿನ ಅಭಿ ಭಂಡಗಾರ, ನಾಲ್ಕನೇ ಆರೋಪಿ ಉಡುಪಿಯ ಗಣೇಶ ಭಜಂತ್ರಿ, ಐದನೇ ಆರೋಪಿ ಕೇರಳದ ಕೆ.ಎಂ ಇಸ್ಮಾಯಿಲ್, ಏಳನೇ ಆರೋಪಿ ಹಾಸನದ ಮಹೇಶ ಅಚ್ಚಂಗಿ, ಎಂಟನೇ ಆರೋಪಿ ಕೇರಳದ ಸಂತೋಷ ಎಂ.ಬಿ, ಒಂಬತ್ತನೇ ಆರೋಪಿ ಉಡುಪಿ ಮೂಲದ ಬನ್ನಂಜೆ ರಾಜಾ, ಹತ್ತನೇ ಆರೋಪಿ ಬೆಂಗಳೂರಿನ ಜಗದೀಶ್ ಚಂದ್ರರಾಜ್, 12 ಆರೋಪಿ ಉತ್ತರ ಪ್ರದೇಶದ ಅಂಕಿತಕುಮಾರ್ ಕಶ್ಯಪ್ ದೋಷಿಗಳೆಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
2013ರ ಡಿಸೆಂಬರ್ 21ರಂದು ಅಂಕೋಲಾದಲ್ಲಿ ನಡೆದ ಆರ್.ಎನ್. ನಾಯಕ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕೋಕಾ ಕೇಸ್ ದಾಖಲಿಸಲಾಗಿತ್ತು. ಇದು ರಾಜ್ಯದ ಮೊದಲ ಕೋಕಾ ಪ್ರಕರಣವಾಗಿದೆ.
ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಕೆ.ಜಿ‌. ಪುರಾಣಿಕಮಠ ಹಾಗೂ ವಿಶೇಷ ಅಭಿಯೋಜಕ ಶಿವಪ್ರಸಾದ್ ಆಳ್ವಾ ವಕಾಲತ್ತು ವಹಿಸಿದ್ದರು.