ಉಳ್ಳಾಲ: ಆಳ ಸಮುದ್ರ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಡಿಕ್ಕಿಯಾಗಿ ಒಬ್ಬ ಮೀನುಗಾರ ನಾಪತ್ತೆಯಾಗಿದ್ದು, 10 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಉಳ್ಳಾಲ ಸಮೀಪದ ಸಮುದ್ರ ಮಧ್ಯೆ ಕೆಲ ವರ್ಷಗಳ ಹಿಂದೆ ಮುಳುಗಿದ್ದ ಹಡಗಿಗೆ, ಈ ಮೀನುಗಾರಿಕೆ ಬೋಟ್ ಡಿಕ್ಕಿ ಹೊಡೆದು, ನೀರಿನಲ್ಲಿ ಮಗುಚಿ ಬಿದ್ದಿದೆ. ಬೋಟ್ನಲ್ಲಿ 11 ಕಾರ್ಮಿಕರಿದ್ದು, ಕೂಡಲೇ ಅವರನ್ನು ಹಿಂದಿನಿಂದ ಬರುತ್ತಿದ್ದ ಬೋಟ್ನವರು ರಕ್ಷಣೆ ಮಾಡಲು ಯತ್ನಿಸಿದ್ದಾರೆ. 10 ಮಂದಿ ಈಜಿ, ಇನ್ನೊಂದು ಬೋಟ್ನ ಮೂಲಕ ಜೀವ ಉಳಿಸಿಕೊಂಡಿದ್ದಾರೆ. ತಮಿಳುನಾಡಿನ ಕಾರ್ಮಿಕ ನೀರಿನಲ್ಲಿ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
‘ಆದ್ಯ’ ಹೆಸರಿನ ಬೋಟ್ ಇದಾಗಿದ್ದು, ಅದರ ಮಾಲೀಕ ಉಳ್ಳಾಲ ಮೊಗವೀರಪಟ್ಣದವರು ಎಂದು ತಿಳಿದುಬಂದಿದೆ.
ಹಲವು ವರ್ಷಗಳ ಹಿಂದೆ ಮುಳುಗಿದ್ದ ಹಡಗನ್ನು ಇದುವರೆಗೆ ತೆರವುಗೊಳಿಸಿಲ್ಲ. ಹಡಗು ಇರುವ ಬಗ್ಗೆ ಯಾವುದೇ ಎಚ್ಚರಿಕೆಯನ್ನು ನೀಡಿಲ್ಲ. ಇದರಿಂದಾಗಿ ಮೀನುಗಾರಿಕಾ ಬೋಟ್ಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಮೀನುಗಾರರು ದೂರಿದ್ದಾರೆ.
ನಾಪತ್ತೆಯಾಗಿರುವ ಮೀನುಗಾರನಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ. ಸುಮಾರು 10 ಬೋಟ್ಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್ ತಿಳಿಸಿದ್ದಾರೆ.