Saturday, December 14, 2024
Homeವೈವಿಧ್ಯಆಹಾರಮತ್ತೆ ಹುಟ್ಟಿಕೊಂಡ ಆಹಾರ ಸಂಸ್ಕೃತಿ ಚರ್ಚೆ

ಮತ್ತೆ ಹುಟ್ಟಿಕೊಂಡ ಆಹಾರ ಸಂಸ್ಕೃತಿ ಚರ್ಚೆ

ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯಲ್ಲಿ ಕರಾವಳಿಯ ಬಹುಮುಖ್ಯ ಆಹಾರವಾದ ಮೀನಿನ ಬಗ್ಗೆ ಯಾಕೆ ಒಂದು ಲೈನ್‌ ಕೂಡಾ ಇಲ್ಲ ಎಂಬುದು ಸೋಜಿಗವಾಗುತ್ತದೆ ಎಂದು ಹಿಂದೊಮ್ಮೆ ಸಂದರ್ಶನವೊಂದರಲ್ಲಿ ವೈಚಾರಿಕ ಚಿಂತಕ ಜಿ.ರಾಜಶೇಖರ್‌ ಆಶ್ಚರ್ಯ ವ್ಯಕ್ತಪಡಿಸಿದ್ದರು. ನಾಲ್ಕು ವರ್ಷಗಳ ಹಿಂದೆ ‘ಚಾಕ್ಯಬಾಬಾ’ ಮಕ್ಕಳ ಕಥೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕರಾವಳಿಯ ಆಹಾರದ ಬಗ್ಗೆ ಚಿಂತಕ ದಿನೇಶ್‌ ಅಮಿನ್‌ ಮಟ್ಟು ಪ್ರಸ್ತಾಪಿಸಿದ್ದರು. ನಮ್ಮ ಬಹಳಷ್ಟು ಕಥೆಗಳಲ್ಲಿ ಕೂಡಾ ವೆಜಿಟೇರಿಯನ್, ನಾನ್ ವೆಜಿಟೇರಿಯನ್ ಇದೆ. ಕೆಲವು ಕಾದಂಬರಿಗಳಲ್ಲಿ ನಾನ್‌ವೆಜಿಟೇರಿಯನ್ ಫುಡ್‌ಗಳೇ ಬರುವುದಿಲ್ಲ. ಬಹುತೇಕ ಮಂದಿ ಮಾಂಸಾಹಾರಿಗಳಾಗಿದ್ದರೂ ಕತೆ ವೆಜಿಟೇರಿಯನ್ ಆಗಿರುತ್ತದೆ. ನಮ್ಮ ಟಿವಿ ಸೀರಿಯಲ್ ತರಹ. ನಾನು ಈವರೆಗೆ ಯಾವ ಸೀರಿಯಲ್‌ನಲ್ಲೂ ಚಿಕನ್ ಕಬಾಬ್ ತಿಂದಿದ್ದನ್ನು ನೋಡಿದ್ದು ಬಹಳ ಕಡಿಮೆ. ಅವರು ಮಾಡುತ್ತಿರುವ ವಿಚಾರ ಮಾತ್ರ ಮನೆಹಾಳು ಕೆಲಸ.ಕರಾವಳಿಯ ಬಹುತೇಕ ಪುಸ್ತಕ ಓದಿದರೆ ಬೂತಾಯಿ ಏನು, ಬಂಗುಡೆ, ಮಾಂಜಿ ಏನು ಎಂಬುದು ಗೊತ್ತಾಗುವುದಿಲ್ಲ. ಕರಾವಳಿಯಲ್ಲಿ ಶಿವರಾಮ ಕಾರಂತರ ಕಾದಂಬರಿ ಓದಿದರೆ ಯಾವ ಮೀನು ಗೊತ್ತಾಗುತ್ತದೆ. ವಿಶುಕುಮಾರ್ ರಂಥವರ ಕಾದಂಬರಿ ಓದಿದರೆ ಮಾತ್ರ ತಿಳಿಯುತ್ತದೆ ಎಂದು ಹೇಳಿದ್ದರು.

ಇದೀಗ ಆಹಾರ ಸಂಸ್ಕೃತಿಯ ಚರ್ಚೆ ಮುನ್ನೆಲೆಗೆ ಬಂದಿದೆ. ನಾಗೇಗೌಡ ಕೀಲಾರ ಶಿವಲಿಂಗಯ್ಯ ಮತ್ತು ಅವರ ಗೆಳೆಯರು ಈ ವಿಚಾರವನ್ನು ಎತ್ತಿಕೊಂಡು ಮುನ್ನೆಲೆಗೆ ತಂದಿದ್ದಾರೆ. ಕನ್ನಡದ ಧಾರಾವಾಹಿಗಳಲ್ಲಿ ನಾನ್‌ವೆಜ್‌ ಯಾಕಿಲ್ಲ ಎಂಬ ಬಗ್ಗೆ ಕ್ಲಬ್‌ಹೌಸ್‌ನಲ್ಲಿ ಚರ್ಚೆ ನಡೆಸಿದ್ದರು. ಶೇ 97ರಷ್ಟು ಮಂದಿ ಮಾಂಸಾಹಾರಿಗಳು. ಆದರೂ ಯಾಕೆ ಒಂದು ಸೀನೂ ಬರುವುದಿಲ್ಲ ಎಂಬುದು ಅವರ ಪ್ರಶ್ನೆಯಾಗಿತ್ತು. ಶೇ 3ರಷ್ಟು ಇರುವ ಜನರ ಆಹಾರ ಪದ್ಧತಿ ಮಾತ್ರ ಯಾಕೆ ತೋರಿಸುತ್ತಾರೆ ಎಂಬುದು ಅವರ ನೋವಾಗಿತ್ತು.

ಈ ಪ್ರಶ್ನೆ, ಈ ನೋವು ಶೇ 97ರಷ್ಟು ಇರುವ ಎಲ್ಲ ಮಾಂಸಾಹಾರಿಗಳ ಪ್ರಶ್ನೆ, ನೋವು ಆಗದೇ ಹೋದರೆ ಖಂಡಿತವಾಗಿ ಇದು ಒಂದು ದಿನದ ಚರ್ಚೆಗೆ ಸೀಮಿತಗೊಳ್ಳಲಿದೆ. ನಾನು ತಿನ್ನುವ ಆಹಾರ ನನ್ನ ಸಂಸ್ಕೃತಿ ಅಲ್ಲವೇ ಎಂದು ಎಲ್ಲರಿಗೂ ಅನ್ನಿಸಿದ ದಿನ ಆಹಾರದಲ್ಲಿ ವೆಜ್‌, ನಾನ್‌ವೆಜ್‌ ಎಂಬ ಕಾರಣಕ್ಕೆ ಶ್ರೇಷ್ಠ ಕನಿಷ್ಠ ಎಂದು ವಿಭಜಿಸುವುದು ನಿಲ್ಲಲಿದೆ. ನಾವು ಸೇವಿಸುವ ಆಹಾರವು ಅದರೊಳಗಿನ ಪೌಷ್ಟಿಕಾಂಶಗಳ ಮೂಲಕ ಅಲೆಯುವ ಮಾನದಂಡ ಬರಬಹುದು. ಅಂಥ ದಿನ ಬರಲಿ ಎಂದು ಕಾಯುತ್ತಿದ್ದೇನೆ.