ಉಡುಪಿ: ಮಲ್ಪೆ ಸಮುದ್ರದಲ್ಲಿ ಈಚೆಗೆ ಮೀನುಗಾರರ ಬಲೆಗೆ ಅಳಿವಿನಂಚಿನಲ್ಲಿರುವ ಪ್ರಬೇಧವಾಗಿರುವ ಗರಗಸ (ಸಾ ಫಿಶ್) ಮೀನು ಬಿದ್ದಿದೆ.
10 ಅಡಿ ಉದ್ದ ಹಾಗೂ 100 ಕೆ.ಜಿಗೂ ಹೆಚ್ಚು ತೂಕವಿರುವು ಮೀನಿನ ಹಲ್ಲುಗಳು ಗರಗಸ ಮಾದರಿಯಲ್ಲಿವೆ. ’ಪ್ರಿಸ್ಟಿಸ್ ಪ್ರಿಸ್ಟಿಸ್‘ ಮೀನಿನ ವೈಜ್ಞಾನಿಕ ಹೆಸರಾಗಿದ್ದು, ಮೂರು ಪ್ರಬೇಧಗಳನ್ನು ಕಾಣಬಹುದು. ಒಂದು ಪ್ರಬೇಧ ಸಿಹಿನೀರು, ಅಳಿವೆ ಹಾಗೂ ಸಮುದ್ರದಲ್ಲಿ ಹಾಗೂ ಉಳಿದ ಎರಡು ಪ್ರಬೇಧಗಳು ಸಮುದ್ರ ಹಾಗೂ ಅಳಿವೆಯಲ್ಲಿ ಮಾತ್ರ ಕಾಣಸಿಗುತ್ತವೆ ಎಂದು ಕರ್ನಾಟಕ ವಿವಿ ಕಡಲ ಜೀವಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಮಾಹಿತಿ ನೀಡಿದರು.
ಸಮಶೀತೋಷ್ಣ ಹಾಗೂ ಉಷ್ಣವಲಯದ ಸಮುದ್ರಗಳಲ್ಲಿ ಕಾಣಿಸಿಕೊಳ್ಳುವ ಮೀನು ಅಳಿವಿನಂಚಿನಲ್ಲಿರುವ ಕಾರಣ ಶೆಡ್ಯೂಲ್ ಒಂದಕ್ಕೆ ಸೇರಿಸಲಾಗಿದೆ. ಮೀನಿನ ಬೇಟೆ ನಿಷಿದ್ಧವಾಗಿದ್ದು, ಶಿ್ಕ್ಷಾರ್ಹ ಅಪರಾಧವಾಗಿದೆ.
ಗರಗಸ ಮೀನು ಪ್ರೌಢಾವಸ್ಥೆ ತಲುಪಲು 7 ರಿಂದ 12 ವರ್ಷ ತೆಗೆದುಕೊಳ್ಳುತ್ತದೆ. ಮೊಟ್ಟೆಯ ಬದಲಾಗಿ ಗರಿಷ್ಠ 20 ಮರಿಗಳನ್ನು ಮಾತ್ರ ಹಾಕುತ್ತದೆ. ಈ ಎರಡೂ ಕಾರಣಗಳಿಂದ ಮೀನಿನ ಸಂತತಿ ಕ್ಷೀಣವಾಗಿದೆ ಎಂದು ಡಾ.ಹರಗಿ ತಿಳಿಸಿದರು.
ಶಾರ್ಕ್ (ಬಾಯಿ ಕೆಳಗಿರುವ ಮೀನು) ಪ್ರಬೇಧಕ್ಕೆ ಸೇರಿರುವ ಈ ಮೀನು ಚೂಪಾದ ಗರಗಸದಿಂದ ದಾಳಿ ಮಾಡಿ ಇತರೆ ಜಾತಿಯ ಮೀನುಗಳು, ಶಂಕು, ಸೀಗಡಿಯನ್ನು ತಿನ್ನುತ್ತದೆ. ಸಾಮಾನ್ಯವಾಗಿ 20 ಮೀಟರ್ ಆಳದ ಸಮುದ್ರದಲ್ಲಿ ಜೀವಿಸುತ್ತದೆ.
ಸಂತಾನೋತ್ಪತ್ತಿಗೆ ಹೆಚ್ಚು ಅವಧಿ ತೆಗೆದುಕೊಳ್ಳುವ ಹಾಗೂ ಆಕಸ್ಮಿಕವಾಗಿ ಬಲೆಗೆ ಬಿದ್ದು ಮೃತಪಡುತ್ತಿರುವ ಕಾರಣ ಗರಗಸ ಮೀನು ಅಳಿವಿನಂಚಿನಲ್ಲಿದೆ. ಬಲೆಗೆ ಗರಗಸ ಮೀನು ಸಿಕ್ಕರೆ ಮರಳಿ ಸಮುದ್ರಕ್ಕೆ ಬಿಡುವ ಮೂಲಕ ಅವಸಾನದ ಅಂಚಿನಲ್ಲಿರುವ ಮೀನಿನ ಸಂತತಿಯನ್ನು ಉಳಿಸಲು ಮೀನುಗಾರರು ಸಹಕಾರ ನೀಡಬೇಕು ಎಂದು ಡಾ.ಶಿವಕುಮಾರ್ ಹರಗಿ ಮನವಿ ಮಾಡಿದ್ದಾರೆ.