Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆಮೀಸಲಾತಿ ನೀಡಿ ಅಂದರೆ ಅತ್ತಿಂದಿತ್ತ ಒದೆಯುತ್ತಿರುವ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಪಾಠ: ವಾಲ್ಮೀಕಿ ಸ್ವಾಮೀಜಿ ಎಚ್ಚರಿಕೆ

ಮೀಸಲಾತಿ ನೀಡಿ ಅಂದರೆ ಅತ್ತಿಂದಿತ್ತ ಒದೆಯುತ್ತಿರುವ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಪಾಠ: ವಾಲ್ಮೀಕಿ ಸ್ವಾಮೀಜಿ ಎಚ್ಚರಿಕೆ

ದಾವಣಗೆರೆ: ಸರ್ಕಾರ ಪ್ರತಿ ಬಾರಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಊರಿಗೆ ಬಂದವರು ಅಂಗಡಿಗೆ ಬರಲೇಬೇಕು. ಹಾಗೇ ಇವರು ಚುನಾವಣೆಗೆ ಬರಲೇಬೇಕಲ್ಲ. ಆಗ ತಕ್ಕ ಪಾಠ ಕಲಿಸಲಾಗುವುದು. ಈಗಾಗಲೇ ಹಾನಗಲ್‌ನಲ್ಲಿ ಪಾಠ ಕಲಿಸಲಾಗಿದೆ ಎಂದು ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಮುಂದಿನ ಫೆಬ್ರುವರಿ 8, 9ಕ್ಕೆ ವಾಲ್ಮೀಕಿ ಜಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಹರಿಹರ ತಾಲ್ಲೂಕು ರಾಜನಹಳ್ಳಿಯಲ್ಲಿರುವ ವಾಲ್ಮೀಕಿ ಗುರುಪೀಠದಲ್ಲಿ ಮಂಗಳವಾರ ನಡೆದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪನವರು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. 2020ರ ಜಾತ್ರೆಯಲ್ಲಿ ನಾಗಮೋಹನ್ ದಾಸ್ ವರದಿ ಬಂದ ತಕ್ಷಣ ಮೀಸಲಾತಿ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದರು. ಕಳೆದ ಬಾರಿಯ ಅಂದರೆ 2021ರ ವಾಲ್ಮೀಕಿ ಜಾತ್ರೆಯಲ್ಲಿ ಕಠಿಣ ನಿರ್ಧಾರ ಕೈಗೊಂಡಿದ್ದೆ. ಆದರೂ ಮೀಸಲಾತಿ ಹೆಚ್ಚಿಸಿಲ್ಲ ಎಂದು ತಿಳಿಸಿದರು.

ಅಧಿಕಾರದಲ್ಲಿ ಇದ್ದವರು ಮ್ಯಾಚ್ ಫಿಕ್ಸಿಂಗ್ ಮಾಡ್ಕೊಂಡಿದ್ದಾರೆ.‌ ಮೀಸಲಾತಿ ಕೊಡಿ ಎಂದರೆ ನಮ್ಮನ್ನು ಪುಟ್ ಬಾಲ್‌ ತರಹ ಮಾಡ್ಕೊಂಡಿದ್ದಾರೆ. ವರದಿಯಿಂದ ಸಬ್ ಕಮಿಟಿ, ಸಬ್ ಕಮಿಟಿಯಿಂದ ವರದಿಗೆ ಹೊಡೆಯುತ್ತಿದೆ. ನಮ್ಮ ಸಮುದಾಯ ಕಿಕ್‌ಔಟ್ ಮಾಡಿದ್ರೆ ನೀವು ಎಲ್ಲಿ ಇರ್ತಿರೋ ಗೊತ್ತಿಲ್ಲ. ಅದಷ್ಟು ಬೇಗ ಮೀಸಲಾತಿ ಕೊಡುವುದರ ಜೊತೆಗೆ ನಕಲಿ ಜಾತಿ ಪ್ರಮಾಣ ಪತ್ರ ಹಾವಳಿ ತಪ್ಪಿಸಬೇಕು ಎಂದು ಆಗ್ರಹಿಸಿದರು.

ಚಿತ್ರದುರ್ಗವನ್ನು ಕಾಪಾಡಲು ಪ್ರಾಣವನ್ನೇ ಒತ್ತೆಇಟ್ಟ ವೀರವನಿತೆ ಒನಕೆ ಓಬವ್ವ ಅವರ ಜಯಂತಿ ಆಚರಿಸಲು ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ ಎಂದು ಸ್ವಾಮೀಜಿ ಶ್ಲಾಘಿಸಿದರು.

ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ಹೆಚ್ಚಿಸುವ ಬಗ್ಗೆ ಈ ಬಾರಿಯ ವಾಲ್ಮೀಕಿ ಜಾತ್ರೆಯಲ್ಲಿಯೇ ಘೋಷಣೆ ಮಾಡಬೇಕು ಎಂದು ಚಳ್ಳಕೆರೆಯ ಶಾಸಕ ರಘುಮೂರ್ತಿ ಒತ್ತಾಯಿಸಿದರು. ಹಲವು ಸಮಾಜದವರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಎಲ್ಲವನ್ನು ತಳುಕು ಹಾಕಿ ಮೂರು ಜನರನ್ನು ಸದಸ್ಯರನ್ನಾಗಿ ಮಾಡಿ, ಆಯೋಗದ ಅಧ್ಯಕ್ಷರನ್ನು ಬೇರೆಯವರನ್ನು ಮಾಡಿ ಮುಂದೆ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪೂರ್ವಭಾವಿ ಸಭೆಯಲ್ಲಿ ಪ್ರಸನ್ನಾನಂದ ಸ್ವಾಮೀಜಿ ಕಣ್ಣೀರಿಟ್ಟ ಘಟನೆ ನಡೆಯಿತು. ವಾಲ್ಮೀಕಿ ಜಾತ್ರೆಯಲ್ಲಿ ಮೀಸಲಾತಿ ಘೋಷಣೆ ಮಾಡಬಹುದು ಎಂದು ಜನರು ದೂರ ದೂರದ ಊರುಗಳಿಂದ ಬೈಕ್‌, ಟ್ರ್ಯಾಕ್ಟರ್‌ ಸಹಿತ ವಿವಿಧ ವಾಹನಗಳಲ್ಲಿ ಬಂದಿರುತ್ತಾರೆ. ಅವರು ಸುರಕ್ಷಿತವಾಗಿ ತಲುಪಿದ್ರಾ ಇಲ್ವ ಎಂದು ಆತಂಕ ಕಾಡುತ್ತಿರುತ್ತದೆ. 8,9ಕ್ಕೆ ಜಾತ್ರೆಯಾದರೆ ಎಲ್ಲರೂ ಸುರಕ್ಷಿತರಾಗಿ ಮನೆಗೆ ತಲುಪಿದ್ದಾರೆ ಎಂದು 11ರ ಹೊತ್ತಿಗೆ ತಿಳಿಯುವುದರಿಂದ ಅವತ್ತು ಆತಂಕ ಕಡಿಮೆಯಾಗುತ್ತದೆ. ಎಲ್ಲರೂ ನೆಮ್ಮದಿಯಾಗಿ ಇದ್ದರೆ ನಾನೂ ನೆಮ್ಮದಿಯಾಗಿ ಇರುತ್ತೇನೆ’ಎಂದು ಸ್ವಾಮೀಜಿ ಕಣ್ಣೀರಿಟ್ಟರು.

ಸಚಿವ ಶ್ರೀರಾಮುಲು ಸೇರಿ ಹಲವು ನಾಯಕರು ಸಭೆಗೆ ಗೈರಾಗಿದ್ದರು. ಕಾಂಗ್ರೆಸ್ ಶಾಸಕ ರಘುಮೂರ್ತಿ ಮಾತ್ರ ಭಾಗಿಯಾಗಿದ್ದರು. ಸಮುದಾಯದ ಮುಖಂಡರು ಭಾಗವಹಿಸಿದ್ದರು.