ಮೊನ್ನೆ ನನ್ನ ತಂಗಿ (ಚಿಕ್ಕಮ್ಮನ ಮಗಳು) ಮದುವೆ. ಊಟ ಮಾಡೋಣ ಅಂತ ಪಂಕ್ತಿಯಲ್ಲಿ ಪರಿಚಿತ ಹಿರಿಯರೊಬ್ಬರ ಪಕ್ಕ ಕುಳಿತೆ. ಊಟ ಬಡಿಸುವವರು ಬಾಳೆ ಎಲೆ ಹಾಸಿ ಅದನ್ನ ಒರೆಸಿಕೊಳ್ಳಲು ಟಿಶ್ಯೂ ಪೇಪರ್ ಕೊಟ್ಟರು. ಬಾಳೆ ಎಲೆ ಒರೆಸುತ್ತಾ ಹಿರಿಯರು ಹೇಳಿದರು- ಶ್ರೀಲಂಕಾದಲ್ಲಿ ಪೇಪರ್ ಇಲ್ಲವಂತೆ. ಅದರಿಂದ ಪರೀಕ್ಷೆಗಳೇ ಕ್ಯಾನ್ಸಲ್ ಆಗಿದೆಯಂತೆ. ಇಲ್ಲಿ ನಾವು ಇಷ್ಟೊಂದು ಬಗೆಯ ತಿಂಡಿ ತಿನಿಸು ತಿನ್ನುತ್ತಿದ್ದೇವೆ ಅಲ್ಲಿ ಜನರಿಗೆ ತಿನ್ನಲು ಆಹಾರ ಸಿಗುತ್ತಿಲ್ಲವಂತೆ. ಎಲ್ಲಕಿಂತ ಹೆಚ್ಚಾಗಿ ಕೊಳ್ಳಲು ಯಾರ ಬಳಿಯೂ ಹಣವಿಲ್ಲವಂತೆ ಅಂತ ಅಂದರು. ಅಲ್ಲಿನ ಆರ್ಥಿಕ ಬಿಕ್ಕಟ್ಟು, ಅದಕ್ಕೆ ಕಾರಣವಾದ ದೂರದೃಷ್ಟಿ ಇಲ್ಲದ ಆಡಳಿತ, ಕೋವಿಡ್ ಮಹಾಮಾರಿ ದ್ವೀಪ ರಾಷ್ಟ್ರದ ಪ್ರವಾಸೋದ್ಯಮಕ್ಕೆ ಕೊಟ್ಟ ಕೊಡಲಿ ಪೆಟ್ಟು, ಈಸ್ಟರ್ ಬಾಂಬ್ ದಾಳಿ, ಸಾವಯವ ಕೃಷಿಗೆ ಥಟ್ ಅಂತ ಬದಲಾಗಿದ್ದು, ಅತಿಯಾದ ಆಮದು, ರಶಿಯಾ ಉಕ್ರೇನ್ ಯುದ್ಧ ಗಳ ಬಗ್ಗೆ ಮಾತನಾಡಬೇಕೆಂದುಕೊಂಡರು ಅದೇಕೋ ಸುಮ್ಮನಾದೆ. ಮಧ್ಯರಾತ್ರಿ ಕಾರ್ ಡ್ರೈವ್ ಮಾಡುತ್ತಾ ಮನೆಗೆ ಬರುವಾಗ ಶ್ರೀಲಂಕಾ ಇತಿಹಾಸವೆಲ್ಲಾ ತಲೆಯಲ್ಲಿ ಸುಳಿದಾಡಲು ಶುರುವಾಯಿತು. ನನಗೆ ಶ್ರೀಲಂಕಾದ ಬಗ್ಗೆ ಕೊಂಚ ತಿಳಿದದ್ದು ತಮಿಳ್ ಟೈಗರ್ಸ್ ಈಲಮ್ ಭಯೋತ್ಪಾದಕರು ನಮ್ಮ ದೇಶದ ಮಾಜಿ ಪ್ರಧಾನಿಯೊಬ್ಬರನ್ನ ಕೊಂದ ಮೇಲೆಯೆ. ಭಾರತದ ಪೀಸ್ ಕೀಪಿಂಗ್ ಫೋರ್ಸ್ ಶ್ರೀಲಂಕಾದಲ್ಲಿ ಏನು ಮಾಡುತಿತ್ತು ಅಂತ ಅಂದು ತಿಳಿಯಲು ಪ್ರಯತ್ನಿಸಿ ಸುಮ್ಮನಾಗಿದ್ದೆ. ಶ್ರೀಲಂಕಾವನ್ನ ನಾನು ತುಂಬ ಗಂಭೀರವಾಗಿ ಪರಿಗಣಿಸಿದ್ದು ಅರ್ಜುನ್ ರಣತುಂಗಾ ನಾಯಕತ್ವದ ಕ್ರಿಕೆಟ್ ತಂಡ ವಿಶ್ವ ಕಪ್ ಗೆದ್ದಾಗಲೇ. ಜಯಸೂರ್ಯ-ಕಲುವಿತರಣಾ ಬೌಂಡರಿ ಸಿಡಿಸುತ್ತಿದ್ದರೆ ದ್ವೀಪ ರಾಷ್ಟ್ರ ಶ್ರೀಲಂಕಾ ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದು ಅಂತ ಅನ್ನಿಸತೊಡಗಿತ್ತು. ಅದೆಲ್ಲಾ ಹದಿಹರೆಯದ ದಿನಗಳು.
ಕಳೆದ ಹದಿನೈದು ವರ್ಷಗಳಲ್ಲಿ ನಾನು ತುಂಬ ಕುತೂಹಲದಿಂದ ಫಾಲೋ ಮಾಡಿದ ನಾಯಕರಲ್ಲಿ ಶ್ರೀಲಂಕಾದ ಮಹಿಂದಾ ರಾಜಪಕ್ಷ ಪ್ರಮುಖ ಅಂತ ಹೇಳಿದರೆ ತಪ್ಪಾಗಲಾರದು. ಮಹಿಂದಾ ರಾಜಪಕ್ಷನ ಬಗ್ಗೆ ಮಾತನಾಡುವ ಮುನ್ನ ಸ್ವತಂತ್ರ ಶ್ರೀಲಂಕಾದ ಇತಿಹಾಸವನೊಮ್ಮೆ ಕಣ್ಣಾಡಿಸಿಬಿಡಿ. ಶ್ರೀಲಂಕಾದಲ್ಲಿ ಸಿಂಹಳಿಯಾರದೆ ಸದಾ ಮೇಲುಗೈ. ಬ್ರಿಟಿಷರು ತಲೆಗೆ ತುಂಬಿ ಹೋದ ಬಹುಸಂಖ್ಯಾತರು ಎಂಬ ವಿಚಾರವನ್ನ ತಬ್ಬಿ, ಬಹುವಾಗಿ ಪ್ರೀತಿಸಿದವರು ಸಿಂಹಳೀಯರು. ಐತಿಹಾಸಿಕವಾಗಿ, ದೈಹಿಕವಾಗಿ ತಾವೇ ಬಲಿಷ್ಠರು, ತಾವೇ ಮೇಲು ಎಂಬ ಮೇಲಿರಿಮೆಯನ್ನ ಮೈಗೂಡಿಸಿಕೊಂಡವರು. ಬೌದ್ಧ ಧರ್ಮಕ್ಕೆ ಸೇರದವರನ್ನ ಕೀಳಾಗಿ, ಎರಡನೇ ದರ್ಜೆಯ ನಾಗರಿಕರಂತೆ ಕಂಡವರು. 1956ರಲ್ಲಿ ಸಿಂಹಳವನ್ನ ಏಕೈಕ ಅಫೀಷಿಯಲ್ ಭಾಷೆಯೆಂದು ಘೋಷಿಸಿದವರು. ಅನ್ಯ ಧರ್ಮಿಯರಾದ ತಮಿಳರನ್ನ ಅತಿಯಾಗಿ ಕಾಡಿದವರು. 1958ರಲ್ಲಿ ನೆಡೆದ ಗಲಭೆಗಳಲ್ಲಿ ಸುಮಾರು 300 ತಮಿಳರನ್ನ ಕೊಂದವರು. 1970-80ರ ದಶಕದಲ್ಲಿ ಉದ್ದೇಶಪೂರ್ವಕವಾಗಿ ಆರ್ಥಿಕ ಹಾಗು ಶಿಕ್ಷಣ ಸುಧಾರಣೆಗಳಿಂದ ತಮಿಳರನ್ನ ಹೊರಗಿಟ್ಟವರು. ಯಾವುದೇ ಪ್ರತಿರೋಧ, ಚಳುವಳಿ ನೆಡೆದರು ರಾಜಿ ಮಾತುಕತೆ ಸಂಧಾನಗಳಿಗೆ ಒಪ್ಪದೆ ವಿವೇಚನಾರಹಿತ ಶಕ್ತಿಯಲ್ಲಿ ನಂಬಿಕೆಯಿಟ್ಟವರು. ಹೀಗೆ ಸಿಂಹಳೀಯರಿಂದ ಸದಾ ದಬ್ಬಾಳಿಕೆಗೆ, ತಾರತಮ್ಯಕ್ಕೆ ಒಳಗಾದ ತಮಿಳರು ಕೊನೆಗೆ ಕಲಿತದ್ದು- ಹಿಂಸೆಗೆ ಪ್ರತಿ ಹಿಂಸೆಯೇ ಉತ್ತರವೆಂಬುದು. ಅಲ್ಲಿಂದಾಚೆಗೆ ನೆಡೆದದ್ದು ಮಾರಣ ಹೋಮ.
ಜುಲೈ 13, 1983 ರಂದು ತಮಿಳ್ ಟೈಗರ್ಸ್ ಸರ್ಕಾರಿ ಸೈನಿಕರನ್ನ ಸುತ್ತುವರೆದು ಹದಿಮೂರು ಮಂದಿ ಸೈನಿಕರನ್ನ ಕೊಲ್ಲುತ್ತದೆ. ಪ್ರತಿಕಾರವಾಗಿ ನೆಡೆದ ಬ್ಲಾಕ್ ಜೂಲೈ ಕೋಮುವಾದಿ ಹಿಂಸೆಗಳಲ್ಲಿ ಮೂರೂ ಸಾವಿರಕ್ಕೂ ಹೆಚ್ಚು ತಮಿಳರು ಹತರಾದರು. ಈ ನರಮೇಧದಿಂದ ತಮಿಳ್ ಟೈಗರ್ಸ್ ಗುಂಪು ಮತ್ತಷ್ಟು ಬಲಿಷ್ಠಗೊಂಡಿತು. ದೇಶದ ಜನಸಂಖ್ಯೆಯಲ್ಲಿ 15% ಮಾತ್ರವಷ್ಟೇ ಇದ್ದ ತಮಿಳಿಗರ ಪರವಾಗಿ ಅನುಕಂಪದ ಅಲೆಯೆದ್ದಿತು. ದೇಶ ವಿದೇಶಗಳಲ್ಲಿ ನೆಲೆಸಿದ್ದ ತಮಿಳಿಗರಿಂದ ಹಣ ಹರಿದು ಬರಲು ಶುರುವಾಯಿತು. ಶ್ರೀಲಂಕಾದ ಈಶಾನ್ಯ ಭಾಗದಲ್ಲಿ ತಮಿಳ್ ಟೈಗರ್ಸ್ ತನ್ನ ಸರ್ಕಾರವನ್ನೇ ಸ್ಥಾಪಿಸಿತು. ತನ್ನದೆ ಸೈನ್ಯ, ವಿಮಾನ, ಕರೆನ್ಸಿ, ಬ್ಯಾಂಕುಗಳನ್ನೂ ಆರಂಭಿಸಿತು. ಜನರ ಮೇಲೆ ತೆರಿಗೆ ಹಾಕಿತು. ಪುಟ್ಟ ಮಕ್ಕಳನ್ನ ರಣರಂಗದಲ್ಲಿ ಬಳಸಿಕೊಂಡಿತು. ಮಿಲಿಟರಿ ಸೇವೆ ಖಡ್ಡಾಯಗೊಳಿಸಿತು. ಕಿಲೋನೋಚಿ ಪಟ್ಟಣದಿಂದ ವೆಲ್ಲುಪೇಳೈ ಪ್ರಭಾಕರನ್ ಪ್ರಾಂತ್ಯವನ್ನ ಆಳತೊಡಗಿದ. ಶ್ರೀಲಂಕಾ ಸೇನೆ ಮತ್ತು ತಮಿಳ್ ಟೈಗರ್ಸ್ ನಡುವೆ ಘರ್ಷಣೆ ಸರ್ವೇ ಸಾಮಾನ್ಯವಾಗಿಬಿಟ್ಟವು. ರಾಷ್ಟ್ರಪತಿಗಳು, ಮಂತ್ರಿಗಳು, ಸಂಸದರು, ಹಿರಿಯ ಸೇನಾ ನಾಯಕರು LTTE ದಿಡೀರ್ ಆತ್ಮಾಹುತಿ ದಾಳಿಗಳಿಗೆ ಬಲಿಯಾದರು. ಹೀಗೆ ಬಹುಸಂಖ್ಯಾತ ಸಿಂಹಳೀಯರ ಮೇಲಿರಿಮೆಯಿಂದ ಆರಂಭವಾದ ಆಂತರಿಕ ಯುದ್ಧ ಇಡೀ ದೇಶವನ್ನ ಅವಸಾನದ ಕಡೆ ಕರೆದುಕೊಂಡು ಹೋಯಿತು. ಜನ ಭಯದ ವಾತಾವರಣದಲ್ಲಿ ಬದುಕಬೇಕಾಯಿತು. LTTE ಉಪಟಳ ಸಹಿಸಲಾಸಾಧ್ಯವಾಗತೊಡಗಿತ್ತು. ಶಾಂತಿ ಒಪ್ಪಂದಗಳೆಲ್ಲಾ ಮುರಿದು ಬಿದ್ದಿದ್ದವು. ಅಷ್ಟರಲ್ಲಿ ಬೋದು ಬಲ ಸೇನಾದಂತಹ ಅಲ್ಟ್ರಾ ರಾಷ್ಟ್ರವಾದಿ ಸಿಂಹಳೀ ಬುದ್ಧಿಸ್ಟರ ಗುಂಪುಗಳು ಹುಟ್ಟಿಕೊಂಡಿದ್ದವು. ಶ್ರೀಲಂಕಾ ಬೌದ್ಧ ಧರ್ಮದವರಿಗೆ ಮಾತ್ರವೆಂಬ ಸ್ಲೋಗನ್ ಎಲ್ಲೆಡೆ ಹರಡ ತೊಡಗಿದರು. ದೇಶದ ಮುಸ್ಲಿಂ, ತಮಿಳು ಹಾಗು ಕ್ರಿಶ್ಚಿಯನ್ ಸಮುದಾಯಗಳ ಮೇಲೆ ವ್ಯವಸ್ಥಿತವಾಗಿ ಹಲ್ಲೆ ಮಾಡಿದರು.
ಬಹುತ್ವವನ್ನು ಸಹಿಸದ ಜನ ಧರ್ಮಾಂಧರಾಗಿ ಅನ್ಯರ ರಕ್ತಕ್ಕಾಗಿ ಹಾತೊರೆಯುತ್ತಿದ್ದ ವಿಷಮ ಕಾಲವದು. ಹೈಪರ್ ರಾಷ್ಟ್ರವಾದಿ ಮತ್ತು ಕೋಮುವಾದಿಯಾದ ಮಹಿಂದಾ ರಾಜಪಕ್ಷ ಮತ್ತು ಆತನ ಸಹೋದರರಿಗೆ ಹೇಳಿ ಮಾಡಿಸಿದ ಹಾಗಿತ್ತು. ಆಗ ಚಾಲ್ತಿಯಲ್ಲಿದ್ದ ಪಾಶ್ಚಾತ್ಯ war on terror ಪರಿಭಾಷೆಯನ್ನೇ ಬಳಸಿದ ರಾಜಪಕ್ಷೆಗೆ ಅಪಾರ ಜನ ಬೆಂಬಲ ಸಿಕ್ಕಿತು. ಬೌದ್ಧ ಭಿಕ್ಕುಗಳು, ಸಿಂಹಳೀಯರು, ಕೋಮುವಾದಿಗಳು ರಾಜಪಕ್ಷ ಪರವಾಗಿ ನಿಂತರು.
ಬಹುಮತಗಳಿಸಿದ ರಾಜಪಕ್ಷರ ಮೊದಲ ಅವಧಿಯಲ್ಲಿ ಆತನ ನೀತಿಗಳನ್ನ, ಕೋಮುವಾದವನ್ನ ಪ್ರಶ್ನಿಸಿ, ಪ್ರತಿರೋಧ ತೋರಿದವರ ಕೊಲೆಯಾದರು. ರಾಜಪಕ್ಷನನ್ನು ವಿರೋಧಿಸಿ ನ್ಯಾಯಾಂಗ ಬಂಧನದಲ್ಲಿದವರು ಹೆಣವಾದರೂ. ಸತ್ಯ ಹೇಳಲು ಪ್ರಯತ್ನಿಸಿ ನಿರಂತರ ಧಮಕಿಗಳಿಗೆ ಗುರಿಯಾದ ನೂರಾರು ಪತ್ರಕರ್ತರು, ವರದಿಗಾರರು ದೇಶ ತೊರೆದರು. 2008ರಲ್ಲಿ ರಾಜಪಕ್ಷ ತಮಿಳ್ ಟೈಗರ್ಸ್ ಮೇಲೆ ಸಮರ ಸಾರಿಯೇ ಬಿಟ್ಟ. ಈ ಯುದ್ಧದಲ್ಲಿ ಮಾನವ ಹಕ್ಕುಗಳ ಸಂಪೂರ್ಣ ಉಲಂಘನೆಯಾಗಿದೆ ಎಂದು ವಿಕಿಲೀಕ್ಸ್, ಚಾನೆಲ್ ಫೋರ್ ಸ್ಪಷ್ಟ ಪುರಾವೆಗಳನ್ನ ನೀಡಿದೆ. ಕ್ಯಾಮೆರಾಗಳಲ್ಲಿ, ಮೊಬೈಲ್ ಫೋನ್ಗಳಲ್ಲಿ ಸೆರೆಹಿಡಿಯಲಾದ ದೃಶ್ಯಗಳು ರಾಜಪಕ್ಷನ ಸಮ್ಮತಿಯಿಂದ ತುಂಬಾ ವ್ಯವಸ್ಥಿತವಾಗಿ ನೆಡೆಸಲಾದ ಜನಾಂಗೀಯ ಹತ್ಯೆಗೆ ಸಾಕ್ಷಿಯಾಗಿದೆ. ವಿಶುಮಾಡು, ಉದಯಾರ್ ಕಡ್ದು, ಪ್ರಾಂತ್ಯಗಳ ಮೇಲೆ ಶೆಲ್ಲಿಂಗ್ ಮಾಡಲಾಯಿತು. ಬೀದಿಗಳಲ್ಲಿ ಸಾಮಾನ್ಯ ಮುಗ್ಧ ತಮಿಳು ಜನರ ರುಂಡ ಮುಂಡ ಚೆಲ್ಲಾಡಿಹೋದವು. ಹರಿಯುತ್ತಿದ್ದ ಮಳೆಯ ನೀರು ಕೆಂಪಾಗಿತ್ತು. ಲಕ್ಷಾಂತರ ತಮಿಳರು ತಮ್ಮ ಸೈಕಲ್ಗಳಲ್ಲಿ, ಟ್ರ್ಯಾಕ್ಟರ್ಗಳಲ್ಲಿ ಊರುಗಳನ್ನ ಬಿಟ್ಟು ಹೋಗತೊಡಗಿದರು. ಆದರೆ ಹೋಗುವುದಾದರೂ ಎಲ್ಲಿಗೆ? ಯುದ್ಧ ಭೂಮಿಯನ್ನು ತೊರೆದು ಓಡುತ್ತಿದ್ದೀರೆಂದು ತಮಿಳ್ ಟೈಗರ್ಸ್ ಸೈನಿಕರು ಕೆಲವರನ್ನ ಕೊಂದರೆ, ಅವರು ತಮಿಳಿಗರೆಂಬ ಕಾರಣಕ್ಕೆ ಶ್ರೀಲಂಕಾ ಸೇನೆ ಸಾವಿರಾರು ಮುಗ್ದ ಜನರನ್ನ ಕೊಂದಿತು.
ಬಹುಶಹ ರಾಜಪಕ್ಷ ಎಸೆಗಿದ ಘನ ಘೋರ ಅಪರಾಧಗಳಲ್ಲಿ ಒಂದು, No Fire Zone ಸೃಷ್ಟಿಸಿ (ಈ ವಲಯದಲ್ಲಿ ಬಾಂಬ್, ಶೆಲ್ಲಿಂಗ್ ಅಥವಾ ಫೈರಿಂಗ್ ಮಾಡುವ ಹಾಗಿಲ್ಲ) ಸುರಕ್ಷತೆ ಅರಸಿ ಬಂದ ಮಕ್ಕಳು, ಮಹಿಳೆಯರು, ವೃದ್ಧರು ಮತ್ತು ಮುಗ್ಧ ನಾಗರೀಕರ ಮೇಲೆ ಬಾಂಬ್ ಸುರಿಸಿದ್ದು.
ಪುಟ್ಟುಮತ್ತಲಮ್ ಎಂಬ ಪಟ್ಟಣದ ಸ್ಕೂಲ್ ಒಂದರಲ್ಲಿ ಸಾವಿರಾರು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿರುತ್ತದೆ. ಅದೊಂದು makeshift ಆಸ್ಪತ್ರೆ. ಇದ್ದ ಆರು ವೈದ್ಯರು ಅಲ್ಲಿ ನರಕವನ್ನೇ ನೋಡುತ್ತಿದ್ದಾರೆ. ವೆಂಟಿಲೇಟರ್ಗಳಿಲ್ಲ, ಅಂಟಿಬಿಯೋಟಿಕ್ಗಳಿಲ್ಲ, ತೀವ್ರ ನಿಗಾ ಘಟಕಗಳಿಲ್ಲ, ಕಾರ್ಡಿಯಾಕ್ ಮಾನಿಟರ್ಗಳಿಲ್ಲ, ಲ್ಯಾಬ್ಗಳಿಲ್ಲ, ಬ್ಲಾಡ್ ಚೆಕ್ ಮಾಡುವ ಸೌಕರ್ಯಗಳಿಲ್ಲ, ಅರಿವಳಿಕೆಯಿಲ್ಲ ಆದರೂ ವೈದ್ಯರು ಎದೆಗುಂದದೆ ಇರುವೆಯ ಸಾಲಿನಂತೆ ಬರುತ್ತಿರುವ ಗಾಯಾಳುಗಳನ್ನ ಬದುಕಿಸಲು ಹರಸಾಹಸ ಪಡುತ್ತಿದ್ದಾರೆ. ಗಾಯಾಳುಗಳ ಬಾಯನ್ನ ಒತ್ತಿ ಹಿಡಿದು ಛಿದ್ರವಾದ ಕೈ ಕಾಲುಗಳನ್ನ ಕತ್ತರಿಸುತ್ತಿದ್ದಾರೆ. ರಾಜಪಕ್ಷ ಗಾಯಾಳುಗಳಿಗೆ ಯಾವುದೇ ಸೌಲಭ್ಯ ಸಿಗದ ಹಾಗೆ ನೋಡಿಕೊಂಡಿದ್ದಾನೆ ಅನ್ನುವುದು ಅವರಿಗೆ ಗೊತ್ತಿದ್ದ ವಿಚಾರ. ಸ್ಕೂಲ್ ಮೇಲೆ ಬಾಂಬ್ ಹಾಕಬಾರದೆಂದು ಸ್ಕೂಲಿನ ಛಾವಣಿ ಮೇಲೆ ರೆಡ್ ಕ್ರಾಸ್ ಚಿನ್ಹೆ ಹರಡಿದ್ದರು ಸ್ಕೂಲಿನ ಮೇಲೆ ಬಾಂಬ್ ದಾಳಿಗಳಾಗುತ್ತವೆ. ಮಹಿಂದಾ ರಾಜಪಕ್ಷ ಅಂದು ಜಿನೀವಾ ಕನ್ವೆನ್ಷನ್ ಅನ್ನೂ ಕೂಡ ಲೆಕ್ಕಿಸಿರಲಿಲ್ಲ. ಉದ್ದೇಶ ಸ್ಪಷ್ಟವಾಗಿತ್ತು. ಶ್ರೀಲಂಕಾ ತಮಿಳರನ್ನ ಸಂಪೂರ್ಣವಾಗಿ ನಿರ್ನಾಮ ಮಾಡುವುದು. ಬ್ರಿಗೇಡಿಯರ್ ಶವೇಂದ್ರ ಸಿಲ್ವಾ ಈ ಕಾರ್ಯವನ್ನ ಚಾಚು ತಪ್ಪದೆ ನಿರ್ವಹಿಸುತ್ತಿದ್ದ. ಮತ್ತೊಂದೆಡೆ ವಿದೇಶಾಂಗ ಸಚಿವ ಬೊಗೊಲ್ಲಾಗಾಮಾ ಯುದ್ಧದಲ್ಲಿ ಸಾಮಾನ್ಯ ನಾಗರೀಕ ಪ್ರಾಣ ಹಾನಿಯಾಗಿಲ್ಲವೆಂದು ಜಗತ್ತಿಗೆ ಆಶ್ವಾಸನೆ ನೀಡುತ್ತಿದ್ದ. Promises were made to the world community but never kept.
ರಾಜಪಕ್ಷ ನೀಡಿದ ಅಭಯದಿಂದ ಸಿಂಹಳಿ ಸೈನಿಕರು ಅಟ್ಟಹಾಸ ಮೆರೆದರು. ನೂರಾರು ತಮಿಳು ಮಹಿಳೆಯರ ಮೇಲೆ ಅತ್ಯಾಚಾರವೆಸೆಗಿ, ನಗ್ನರನ್ನಾಗಿಸಿ ಗುಂಡಿಕ್ಕಿ ಕೊಂದರು. ಸೆರೆಸಿಕ್ಕ ಪ್ರಭಾಕರನ್ ಪುತ್ರನಾದ ಬಾಲಕ ಬಾಲಚಂದ್ರನನ್ನು ಎದೆಗೆ ಗುಂಡಿಕ್ಕಿ ಕೊಂದರು. ಮಾಸ್ executionಗಳು ನಿರಂತರವಾಗಿ ನೆಡೆದವು. ಈ ಎಲ್ಲಾ ವಿಕೃತಿಗಳನ್ನು ತಮ್ಮ ಮೊಬೈಲ್ ಫೋನ್ ಗಳಲ್ಲಿ ಸೆರೆಯಿಡಿದರು
ಹೀಗೆ 26 ವರ್ಷಗಳ ಆಂತರಿಕ ಯುದ್ಧಕ್ಕೆ ಕೊನೆಯಾಡಿದೆ ಎಂದು ಬೀಗಿದ ರಾಜಪಕ್ಷ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಹಿಂದೂ ದೇವಾಲಯಗಳನ್ನ ಉರುಳಿಸಿ ಬೌದ್ಧ ಸ್ತೂಪಗಳನ್ನ ಕಟ್ಟಿಸಿದ. ಎಥ್ನಿಕ್ re-engineering ಮೂಲಕ ದೇಶದ ಡೆಮೊಗ್ರಾಫಿ ಬದಲಾಯಿಸಿದ. ವಯಲೆಂಟ್ ಬುದ್ಧಿಸ್ಟ್ ಗಳಿಗೆ ಬೆಂಬಲ ಸೂಚಿಸಿ ಮುಸ್ಲಿಂರ ಮೇಲೆ ಅಟ್ಯಾಕ್ ಮಾಡಿಸಿದ. ಸಿಂಹಳೀಯರು ಹೆಚ್ಚು ಹೆಚ್ಚು ಮಕ್ಕಳ್ಳನ್ನ ಮಾಡಿಕೊಳ್ಳಬೇಕೆಂದು ಕರೆ ನೀಡಿದ, ಮೂರನೇ ಮಗು ಮಾಡಿಕೊಂಡವರಿಗೆ ಬೋನಸ್ ನೀಡಿದ. ತಮಿಳರ ರೆಫ್ಯೂಜಿ ಕ್ಯಾಂಪ್ ಗಳಲ್ಲಿ ಅತ್ಯಾಚಾರ, ಕೊಲೆ ನಿರಂತರವಾಗಿ ನೆಡೆಯುವಂತೆ ನೋಡಿಕೊಂಡ. ತನಗೆ ಅನುಕೂಲವಾಗುವಂತೆ ಸಂವಿಧಾನ ಬದಲಾಯಿಸಿದ. ಪತ್ರಕರ್ತರನ್ನ ಬೆದರಿಸಿದ, ಬೆದರಿಕೆಗೆ ಬಗ್ಗದಿದ್ದಾಗ ಕೊಲ್ಲಿಸಿದ. ಭಾಷಣ ಅಬೆಯ್ ವರ್ಧನೇ ಯಂತಹ ಪತ್ರಕರ್ತರು ದೇಶ ಬಿಟ್ಟು ಹೋಗಬೇಕಾಯಿತು. ರಾಜಪಕ್ಷ ಇಷ್ಟೆಲ್ಲಾ ಮಾಡಿದರು ಧರ್ಮಾಂಧ ಪ್ರಜೆಗಳು ಮತ್ತೆ ಮತ್ತೆ ಅವನ್ನನ್ನೇ ಆಯ್ಕೆ ಮಾಡಿದರು. ಬೌದ್ಧ ಭಿಕ್ಕುಗಳು ಅವನ ಹೆಗಲಿಗೆ ಹೆಗಲು ಕೊಟ್ಟು ನಿಂತರು.
ಕಾಲ ಉರುಳಿದೆ. ಶ್ರೀಲಂಕಾದ ಜನರಿಗಿಂದು ಉದ್ಯೋಗ ಬೇಕಿದೆ, ತಿನ್ನಲು ಕೂಳು ಬೇಕಿದೆ, ಅಡುಗೆ ಸಿಲಿಂಡರ್ ಬೇಕಿದೆ, ಪೆಟ್ರೋಲ್ ಬೇಕಿದೆ, ನೆಮ್ಮದಿ ಬೇಕಿದೆ. ಆದರೆ ಸೋಜಿಗವೆಂಬಂತೆ ಒಂದು ಕಾಲದಲ್ಲಿ ಮಾನವ ಹಕ್ಕುಗಳ ವಕೀಲನಾಗಿದ್ದ ರಾಜಪಕ್ಷನ ಬಳಿ ಧರ್ಮ ಮತ್ತು ಹಗೆತನ ಬಿಟ್ಟು ಕೊಡಲು ಬೇರೇನೂ ಇಲ್ಲ. ಬೌದ್ಧ ಭಿಕ್ಕುಗಳು ಇಂದಿಗೂ ರಾಜಪಕ್ಷ ಸಹೋದರರ ಪರವಾಗಿಯೇ ಇದ್ದಾರೆ. ದಾಂಧಲೆ ನೆಡೆಸಿ ಕೆಲ ಪ್ರತಿಭಟನಾಕಾರರನ್ನ ಕೊಲ್ಲಿಸಿದ್ದು ಆಗಿದೆ. ಆದರೆ ಪ್ರಜೆಗಳ ಕೋಪ ಕೆಡಿಮೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಪದತ್ಯಾಗ ಮಾಡಿದ ಕಂಬಳಿಹುಳುವಿನಂತಹ ಮೀಸೆ ಹೊತ್ತ ರಾಜಪಕ್ಷ ಎಲ್ಲಿದ್ದಾರೆಂಬುದು ಯಾರಿಗೂ ತಿಳಿದಿಲ್ಲ. ಪ್ರಧಾನಿ ಪಟ್ಟವೇರಲು ಯಾರು ಮುಂದೆ ಬರುತ್ತಿಲ್ಲ. ಪ್ರಧಾನಿ ಗದ್ದುಗೆಯಿಂದ ರಕ್ತದ ವಾಸನೆ ಬರುತ್ತಿರಬಹುದು. ಸತ್ತ ಮುಗ್ಧರ ಆತ್ಮಗಳು ಅಲ್ಲಿ ಸುಳಿದಾಡುತ್ತಿರಬಹುದು. ಅವರ ಚೀರಾಟ ಆಕ್ರಂದನ ಇನ್ನೂ ಕೇಳುತ್ತಿರಬಹುದು.
ಇಲ್ಲಿಂದ ಶ್ರೀಲಂಕಾ ಎತ್ತ ಸಾಗುತ್ತದೆ ಎಂಬುದು ಕುತೂಹಲದ ವಿಚಾರ. ಭಾರತ, ದ್ವೀಪ ರಾಷ್ಟ್ರ ಶ್ರೀಲಂಕಾದಿಂದ ಕಲಿಯಬಹುದಾದ ಪಾಠಗಳೇನು ಎಂಬುದರ ಬಗ್ಗೆ ನನಗೆ ಇನ್ನು ಹೆಚ್ಚು ಕುತೂಹಲವಿದೆ. ದೇಶದ ಅರ್ಥಕತೆ ಕುಸಿದಾಗ muscular nationalism, majoritarian mobilisation ಕೆಲಸ ಮಾಡುವುದಿಲ್ಲ ಎಂಬುದಂತೂ ಸಾಬೀತಾಗಿದೆ.
(ಅರಗಿಸಿಕೊಳ್ಳುವ ಶಕ್ತಿಯಿದ್ದರೆ ಚಾನೆಲ್ 4 ರವರು ತೆಗೆದ ಸಾಕ್ಷ್ಯ ಚಿತ್ರ No Fire Zone ನೋಡಿ)
- Harish Gangadhar