ದಾವಣಗೆರೆ: ಮೆಕ್ಕೆಜೋಳ ಖರೀದಿಸಿ ಹಣ ನೀಡದೆ ವಂಚಿಸಿದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯಿಂದ ಹಣ ವಸೂಲಿ ಮಾಡಿ ರೈತರಿಗೆ ನೀಡಿದ್ದಾರೆ. ಇದರಿಂದ ರೈತರು ಸಂಕ್ರಾತಿಗೆ ಸಂಭ್ರಮ ಪಡುವಂತಾಗಿಯಿತು. ಈ ಕಾರಣಕ್ಕಾಗಿ ಹಣ ವಸೂಲಿಗೆ ಕಾರಣರಾದ ಪೊಲೀಸರು ಮತ್ತು ವಕೀಲರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ಗುರುವಾರ ಜಿಲ್ಲಾಡಳಿತ ಭವನದಲ್ಲಿ ರೈತರು ಹಮ್ಮಿಕೊಂಡರು.
2021ರ ಮಾರ್ಚ್ನಲ್ಲಿ ಮೆಕ್ಕೆಜೋಳವನ್ನು ರೈತರು ಮಾರಾಟ ಮಾಡಿದ್ದರು. ರೈತರಿಂದ ಖರೀದಿ ಮಾಡಿದ ಸಣ್ಣ ವ್ಯಾಪಾರಸ್ಥರು ಪ್ರಮುಖ ಆರೋಪಿ ಶಿವಲಿಂಗಯ್ಯ ಮತ್ತು ತಂಡವು ಮಾಡಿಕೊಂಡಿದ್ದ ಜೆಎಂಸಿ ಎಂಬ ಕಂಪನಿಗೆ ನೀಡುತ್ತಿದ್ದರು. ಕೆಲವು ರೈತರು ನೇರವಾಗಿ ಈ ಕಂಪನಿಗೆ ಮಾರಾಟ ಮಾಡಿದ್ದರು. ಇಲ್ಲಿಂದ ತಮಿಳುನಾಡಿನ ಕಂಪನಿಗೆ ಮಾರಾಟ ಮಾಡಲಾಗಿತ್ತು. ತಮಿಳುನಾಡಿನ ಕಂಪನಿಯು ಹಣವನ್ನು ಪಾವತಿ ಮಾಡಿತ್ತು. ಆದರೆ ಆ ವ್ಯಕ್ತಿಯ ಬ್ಯಾಂಕ್ ಖಾತೆಗೆ ಜಮಾ ಮಾಡಿತ್ತು. ಆದರೆ ಸಣ್ಣ ಖರೀದಿದಾರರಿಗೆ ಮತ್ತು ರೈತರಿಗೆ ಮಾತ್ರ ಹಣ ಪಾವತಿ ಆಗಿರಲಿಲ್ಲ.
ಒಟ್ಟು ₹ 2.68 ಕೋಟಿ ಬರಲು ಬಾಕಿ ಇತ್ತು. ಪ್ರಮುಖ ಆರೋಪಿ ಶಿವಲಿಂಗಯ್ಯನ ಜತೆಗೆ ಚೇತನ್, ವಾಗೀಶ್, ಚಂದ್ರ, ಮಹೇಶ್ವರಯ್ಯ ಮತ್ತು ಕೆನರಾ ಬ್ಯಾಂಕ್ ಉದ್ಯೋಗಿ ಶಿವಕುಮಾರ್ ಕೈ ಜೋಡಿಸಿದ ಇತರ ಆರೋಪಿಗಳು. ಹಣ ಪಾವತಿ ಆಗದೇ ಇದ್ದಾಗ ದಾವಣಗೆರೆಯಲ್ಲಿರುವ ಶಿವಲಿಂಗಯ್ಯನ ಮನೆ ಎದುರು ರೈತರು ಪ್ರತಿಭಟನೆ ನಡೆಸಿದ್ದರು. ಅದಕ್ಕೂ ಜಗ್ಗದೇ ಇದ್ದಾಗ ದೂರು ದಾಖಲಿಸಿದ್ದರು. ದಾವಣಗೆರೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ (ಜಗಳೂರಿನವರು ಅಧಿಕ) ಮತ್ತು ಹರಪನಹಳ್ಳಿಯ ಒಟ್ಟು 96 ರೈತರು ಮತ್ತು 29 ವರ್ತಕರು ಸೇರಿ 125 ಮಂದಿ ವಂಚನೆಗೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಸವರಾಜ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿತ್ತು. ಹಣ ವಸೂಲಿ ಮಾಡಿ ಸಂತ್ರಸ್ತರಿಗೆ ನೀಡುವಂತೆ ನ್ಯಾಯಾಲಯವರು ಸೂಚಿಸಿತ್ತು.
ವಂಚನೆಗೆ ಒಳಗಾದ ರೈತರಾದ ಸಂತೋಷ್ ಮೆಳ್ಳಿಕಟ್ಟೆ (₹ 19 ಲಕ್ಷ), ಗುಡದಪ್ಪ (₹ 6.35 ಲಕ್ಷ), ಲೋಕೇಶಪ್ಪ ಬೂದಿಹಾಳ (₹ 1.80 ಲಕ್ಷ), ಮಂಜನಗೌಡ ಗಡಿಗುಡಾಳ್ (₹ 6.75 ಲಕ್ಷ), ವರ್ತಕ ಪರಮೇಶ್ (₹ 10 ಲಕ್ಷ ) ಅವರಿಗೆ ಸಾಂಕೇತಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ವಿತರಿಸಿದರು. ಕಾರ್ಯಕ್ರಮ ಮುಗಿದ ಬಳಿಕ ಉಳಿದವರಿಗೆ ವಿತರಿಸುವ ಕಾರ್ಯ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ವಕೀಲರ ಸಂಘದ ಅಧ್ಯಕ್ಷ ಬಸವರಾಜ್, ಪ್ರದೀಪ್, ಡಿವೈಎಸ್ಪಿ ಬಸವರಾಜ್ ಸೇರಿದಂತೆ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ರೈತರು ಸನ್ಮಾನಿಸಿ ಗೌರವಿಸಿದರು.