ಚಿತ್ರದುರ್ಗ: ಸರ್ಕಾರ ರಾಜ್ಯವನ್ನು ವ್ಯಸನಮುಕ್ತ ಮಾಡದೇ ಇದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ವಿದ್ಯಾರ್ಥಿನಿ ಎಚ್.ಸಿ. ಲಾವಣ್ಯ ಎಚ್ಚರಿಕೆ ನೀಡಿದರು.
ವ್ಯಸನಮುಕ್ತ ರಾಜ್ಯಕ್ಕೆ ಆಗ್ರಹಿಸಿ ಹಿರಿಯೂರಿನಿಂದ ಪಾದಯಾತ್ರೆ ಆರಂಭಿಸಿದ್ದ ಹೇಮದಳ ಗ್ರಾಮದ ವಿದ್ಯಾರ್ಥಿನಿ ಶುಕ್ರವಾರ ಚಿತ್ರದುರ್ಗ ತಲುಪಿದರು. ಮದ್ಯ, ಮಾದಕವಸ್ತು ನಿಷೇಧಕ್ಕೆ ಸಂಬಂಧಿಸಿ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
‘ಹಿರಿಯೂರು ಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿ ಮನೆ ಇದೆ. ಮದ್ಯ ವ್ಯಸನಿಗಳು ಮನೆಯ ಸುತ್ತ ಗಲಾಟೆ ಮಾಡುತ್ತಿದ್ದರು. ಎಲ್ಲೆಂದರಲ್ಲಿ ಕುಡಿದು ಕಿರಿಕಿರಿ ಉಂಟು ಮಾಡುತ್ತಿದ್ದರು. ಇದರಿಂದ ವ್ಯಾಸಂಗದ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಮಾದಕ ವಸ್ತು, ಮದ್ಯವನ್ನು ನಿಷೇಧಿಸಿದರೆ ಮಾತ್ರ ಇದಕ್ಕೆ ಪರಿಹಾರ ಸಿಗಲು ಸಾಧ್ಯ’ ಎಂದು ಹೇಳಿದರು.
‘ಕರ್ನಾಟಕದ ಹಲವು ಹಳ್ಳಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಚಿಕ್ಕ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ವ್ಯಸನದ ಕಾರಣಕ್ಕೆ ವ್ಯವಸಾಯಕ್ಕೆ ತೊಂದರೆ ಉಂಟಾಗುತ್ತಿದೆ. ವ್ಯಸನಗಳಿಗೆ ಅಂಟಿಕೊಂಡವರು ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಇದರಿಂದ ಅತ್ಯಾಚಾರ, ಕೊಲೆಯಂತಹ ಕೃತ್ಯಗಳು ಹೆಚ್ಚಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಮಹಿಳೆಯರು ಒಂಟಿಯಾಗಿ ಸಂಚರಿಸಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಕೌಟುಂಬಿಕ ಕಲಹ ಹೆಚ್ಚಾಗಲು ಮದ್ಯವೇ ಕಾರಣವಾಗಿದೆ. ಇದರ ಬಗ್ಗೆ ಸರ್ಕಾರಕ್ಕೆ ಅರಿವು ಇದ್ದರೂ ಮೌನವಾಗಿದೆ. ಮದ್ಯ ಮತ್ತು ಮಾದಕ ವಸ್ತುಗಳ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ’ ಎಂದು ದೂರಿದರು.
ವಿದ್ಯಾರ್ಥಿನಿ ತಂದೆ ಚನ್ನಕೇಶವಪ್ಪ ಪಾದಯಾತ್ರೆಯಲ್ಲಿ ಇದ್ದರು.