Saturday, December 14, 2024
HomeUncategorizedಶೂದ್ರಾಣಿ, ಪವಿತ್ರ ನದಿ ಮತ್ತು ಪರಮಹಂಸ( ನಾವು ಮರೆತು ಹೋದ ಇತಿಹಾಸದ ಪುಟಗಳಿಂದ)

ಶೂದ್ರಾಣಿ, ಪವಿತ್ರ ನದಿ ಮತ್ತು ಪರಮಹಂಸ( ನಾವು ಮರೆತು ಹೋದ ಇತಿಹಾಸದ ಪುಟಗಳಿಂದ)

Kip

1840ರ ದಶಕದಲ್ಲಿ ಬಂಗಾಳ ಪ್ರಾಂತ್ಯದ ಮೀನುಗಾರರಿಗೆ ಬಾರಿ ಸಂಕಷ್ಟ ಎದುರಾಗಿತ್ತು. ಆ ಬಿಕ್ಕಟ್ಟು ಅವರ ಅಳಿವು-ಉಳಿವಿನ ಪ್ರಶ್ನೆಯಾಗಿತ್ತು. ವ್ಯಾಪಾರಿ ಕಾರ್ಪೋರೇಟ್ ಆದ ಈಸ್ಟ್ ಇಂಡಿಯಾ ಕಂಪನಿಯ ಕಣ್ಣುಗಳು ನಿರ್ಮಲವಾಗಿ ಹರಿಯುತ್ತಿದ್ದ ಗಂಗಾ ನದಿಯ ಕಡೆಗೆ ತಿರುಗಿದ್ದವು. ಅವರಿಗೆ ಗಂಗೆಯಲ್ಲಿ ಹರಿಯುವ ಪ್ರತಿ ಹನಿಯಲ್ಲೂ, ಈಜುವ ಪ್ರತಿ ಮೀನಿನಲ್ಲೂ ಫಾಯಿದೆ ಕಾಣುತಿತ್ತು. ಫೆಬ್ರವರಿ ಮತ್ತು ಅಕ್ಟೋಬರ್ ನಡುವೆ ಗಂಗೆಯ ಹೊಳೆಯುವ ಮೇಲ್ಮಯ್ಯ ಮೇಲೆ ತೇಲುವು ನೂರಾರು ದೋಣಿಗಳಿಂದ ಹಾರಿ ಹರವುಕೊಳ್ಳುತ್ತಿದ್ದ ಬಲೆಗಳಲ್ಲಿ ಬೆಳ್ಳಿ ಬಣ್ಣದ ಹಿಲ್ಸ ಮೀನುಗಳ ಭಾಗ್ಯ ತುಂಬಿ ತುಳುಕುತ್ತಿತ್ತು. ಈ ಹಿಲ್ಸ ಮೀನು ಬಂಗಾಳಿಗಳಿಗೆ ಪರಮಾನ್ನವಾಗಿತ್ತು. ಕಂಪನಿಯ ದೋಣಿಗಳ ಸರಾಗ ಯಾನಕ್ಕೆ ಅಡ್ಡಿಯಾಗುತ್ತಿವೆ ಎಂಬ ನೆಪದಲ್ಲಿ ಕಂಪನಿ ಮೀನುಗಾರರ ಹಾಯಿದೋಣಿಗಳ ಮೇಲೆ ಬಾರಿ ತೆರಿಗೆಯನ್ನೇ ವಿಧಿಸಿತು. ಈ ಚತುರ ಕುತಂತ್ರ ನದಿಯ ಟ್ರಾಫಿಕ್ ಕುಗ್ಗಿಸಿ ಕಂಪನಿಯ ಆದಾಯವನ್ನ ಹಿಗ್ಗಿಸಿತು.
ಆತಂಕಗೊಂಡ ನೂರಾರು ಮೀನುಗಾರರು ಕಲ್ಕತ್ತೆಗೆ ಬಂದು ತಮ್ಮ ಮೇಲ್ಜಾತಿ ಜಮೀನ್ದಾರರ ಮುಂದೆ ಅಳಲು ತೋಡಿಕೊಂಡರು. ಜಮೀನ್ದಾರರು ತಮಗೆ ಸಹಾಯ ಮಾಡುವರು ಎಂಬ ಅಚಲ ನಂಬಿಕೆ ಅವರಲ್ಲಿತ್ತು. ಕಂಪನಿಯಲ್ಲಿದ್ದ ಅಧಿಕಾರಿಗಳ ಜೊತೆಗಿನ ಲಾಭದಾಯಕ ಸಂಬಂಧ, ರಾಜಾಶ್ರಯವನ್ನ ಹಾಳುಮಾಡಿಕೊಳ್ಳಲು ಇಚ್ಚಿಸದ ಮೇಲ್ಜಾತಿಯ ಎಲಿಟ್ಗಳು ಮೀನುಗಾರರತ್ತ ಬೆನ್ನು ಮಾಡಿದರು. ಜೇಲೆ ಕೈಬರ್ಯತ ಮತ್ತು ಮಾಲೋ ಸಮುದಾಯಕ್ಕೆ ಸೇರಿದ ಮೀನುಗಾರರು ದುಖಿತರಾಗಿ, ತಮ್ಮ ಕಾಲುಗಳನ್ನ ಎಳೆಯುತ್ತ ಸೆಂಟ್ರಲ್ ಕಲ್ಕತ್ತಾದ ಜನಬಜಾರಿನ ಒಂದು ಮನೆಯ ಕಡೆಗೆ ನಡೆದರು. ಅಲ್ಲಿ ನೆಲೆಸಿದ್ದ ಧನಿಕ ವ್ಯಾಪಾರೀ,ಶೂದ್ರ, ರಾಜ ಚಂದ್ರ ದಾಸನ ಹೆಂಡತಿ, ವಿಧವೆ ರಾಷಮೋನಿ ಅವರ ಕೊನೆಯ ಆಶಾಕಿರಣವಾಗಿದ್ದಳು.
ಮುಂದೆ ನಡೆದದ್ದು ಭಾರತೀಯ ವಸಾಹಾತು ಇತಿಹಾಸದಲ್ಲೇ ಮರೆಯಲಾಗದ ಅಪೂರ್ವ ಘಟನೆ. ವಸಾಹತು ಭಾರತದ ರಾಜಧಾನಿಯಾಗಿದ್ದ ಕಲ್ಕತ್ತೆಯಲ್ಲಿ ಗಂಗೆ ಕವಲೊಡೆದು ಪ್ರಸಿದ್ದ ಹೂಗ್ಲಿಯಾಗುತ್ತದೆ. ಹೂಗ್ಲಿ ದಂಡೆಯ ಮೇಲಿರುವ ಗದ್ದಲದ ನಗರವೆ ಕಲ್ಕತ್ತಾ. ರಾಷಮೋನಿ ಕಂಪನಿಯಿಂದ ಸುಮಾರು 10ಕಿಲೋ ಮೀಟರ್ ಉದ್ದದಷ್ಟು ಹೂಗ್ಲಿ ನದಿಯ ಗುತ್ತಿಗೆ ಪಡೆದಳು. ಆಗಿನ ಕಾಲಕ್ಕೆ ಆಕೆ ಗುತ್ತಿಗೆಗೆ ಕೊಟ್ಟ ಬೆಲೆ ಹತ್ತು ಸಾವಿರ ರೂಗಳು. ಗುತ್ತಿಗೆಯ ಎಲ್ಲ ದಾಖಲೆಗಳು ಕೈ ಸೇರಿದ ಮೇಲೆ ರಾಷಮೋನಿ ಎರಡು ಬೃಹತ್ ಸರಪಳಿಗಳನ್ನ ಮೇತಿಯಬ್ರಜ್ ಮತ್ತು ಘುಸುರಿ (ನದಿಯಿಲ್ಲಿ ಧನಸ್ಸಿನ ಆಕಾರದಲ್ಲಿ ಬಾಗುತ್ತದೆ) ಎಂಬಲ್ಲಿ ಹೂಗ್ಲಿ ನದಿಗೆ ಅಡ್ಡಲಾಗಿ ಇಳೆಬಿಟ್ಟು ಎಲ್ಲ ಮೀನುಗಾರರು ಈ ಹತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬೆಲೆಬೀಸಿ ಮುಕ್ತವಾಗಿ ಮೀನಿಡಿಯಿರಿ ಎಂದು ಕರೆ ನೀಡಿದಳು. ಮಿನುಗಾರರ ಸಂತಸಕ್ಕೆ ಪಾರವೇ ಇರಲಿಲ್ಲ. ಅವರು ಸಂತಸದಿಂದ ಬ್ಯಾರಿಕೇಡ್ ಮಾಡಿದ ನದಿಗೆ ಮುತ್ತಿಗೆ ಹಾಕಿದರು.
ನದಿಯ ಹತ್ತು ಕಿಲೋ ಮೀಟರನಲ್ಲಿ ಎಲ್ಲೆಲ್ಲೂ ಸಣ್ಣ ಸಣ್ಣ ದೋಣಿಗಳು ಕಿಕ್ಕಿರಿದು ತುಂಬಿ ಹೋದವು. ಹೂಗ್ಲಿ ನದಿಯಲ್ಲಿ ಮೀನುಗಾರರ ದಟ್ಟಣೆ ಹೆಚ್ಚಾಗಿ ವಾಣಿಜ್ಯ ಹಾಗು ಜನ ಸಂಚರಿಸುವ ದೋಣಿಗಳು ಸಾಗಲು ಪರದಾಡಿ ಕೊನೆಗೊಂದು ದಿನ ಅವುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಬದಲಾದ ಸನ್ನಿವೇಶದಿಂದ ದಿಗ್ಬ್ರಮೆಗೊಂಡ ಕಂಪನಿ ರಾಷಮೋನಿಯಿಂದ ಸ್ಪಷ್ಟೀಕರಣ ಕೇಳಲು ಅಧಿಕಾರಿಗಳನ್ನ ಕಳುಹಿಸಿತು. ನದಿಯಲ್ಲಿ ವಾಣಿಜ್ಯ ಹಾಗು ಪ್ರಯಾಣಿಕರನ್ನು ಹೊತ್ತು ಸಾಗುವ ದೋಣಿಗಳಿಂದ ಮೀನುಗಾರರಿಗೆ ಬಲೆ ಬಿಸಲು ಆಗುತ್ತಿಲ್ಲ, ತನಗೆ ಸೇರಿದ ವ್ಯಾಪ್ತಿಯಲ್ಲಿ ಮೀನು ಹಿಡಿಯಲು ಅಡ್ಡಿಯಾಗಿದೆ, ಇದರಿಂದ ತಾನು ಲಾಭಗಳಿಸಲು ಆಗುತ್ತಿಲ್ಲವೆಂದು ದಿಟವಾಗಿ ಉತ್ತರಿಸಿದಳು ರಾಷಮೋನಿ. ನದಿಯನ್ನ ಗುತ್ತಿಗೆ ಪಡೆದ ಅವಳಿಗೆ ಅದರಿಂದ ಬರುತ್ತಿದ ವರಮಾನವನ್ನ ರಕ್ಷಿಸಿಕೊಳ್ಳುವ ಎಲ್ಲಾ ಹಕ್ಕು ಬ್ರಿಟಿಶ್ ಕಾನೂನಿನಡಿಯಲ್ಲಿತ್ತು ಎಂದು ಆಕೆ ವಾದಿಸಿದಳು. ಕಂಪನಿಗೆ ಯಾವುದೇ ತಕರಾರಿದ್ದರೆ, ಅವಳೇ ಮುಕದ್ದಮೆ ಹೂಡುವುದಾಗಿ ಹೇಳಿದಳು. ತೀರ್ಪು ಬರುವವರೆಗೆ ನದಿಗೆ ಅಡ್ಡಲಾಗಿ ಬಿಟ್ಟಿದ್ದ ಸರಪಳಿಯನ್ನ ಯಾವುದೇ ಕಾರಣಕ್ಕೂ ತೆರೆಯುವುದಿಲ್ಲವೆಂದು ಘೋಷಿಸಿಬಿಟ್ಟಳು.


ಸಣ್ಣ ದೋಣಿಗಳು, ದೈತ್ಯ ನೌಕೆಗಳು ನದಿಯಲ್ಲಿ ಸಾಲುಗಟ್ಟಿ ನಿಂತಾಗ ಬೇರೆ ದಾರಿ ಕಾಣದೆ ರಾಷಮೋನಿ ಜೊತೆಗೆ ಕಂಪನಿ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಕಂಪನಿ ಮೀನುಗಾರರ ಮೇಲೆ ಹೇರಿದ್ದ ತರಿಗೆಯನ್ನ ಹಿಂಪಡೆದು, ಯಾವುದೇ ಷರತ್ತಿಲ್ಲದೆ ಗಂಗೆಯಲ್ಲಿ ಮೀನಿಡಿಯುದಕ್ಕೆ ಅನುಮತಿ ನೀಡಿತು. ಬಂಗಾಳದ ಶೂದ್ರ ವಿಧವೆಯೊಬ್ಬಳು ಇತಿಹಾಸದಲ್ಲೇ ಅತಿ ಕುಟಿಲ ಕಲೊನಿಯಲ್ ಕಾರ್ಪೊರೇಟ್ ಒಂದಕ್ಕೆ ಚಳ್ಳೆಹಣ್ಣು ತಿನ್ನಿಸಿ ಜನಸಾಮಾನ್ಯನಿಗಾಗಿ ಗಂಗೆಯನ್ನು ಕೊಡುಗೆಯಿತ್ತಳು. ಇದ್ದಕ್ಕಾಗಿ ಆಕೆ ಬಳಸಿಕೊಂಡದ್ದು ಆಂಗ್ಲೋ ಸ್ಯಾಕ್ಸನ್ ಕ್ಯಾಪಿಟಲಿಸಂನ ಅತ್ಯಂತ ಸಮರ್ಥ ಅಸ್ತ್ರ- ಖಾಸಗಿ ಸ್ವತ್ತು ಎಂಬುದು ಸೋಜಿಗದ ವಿಷಯ.


ರಾಷಮೋನಿಯ ಗಂಡ ದಾಸ್ ಶೂದ್ರನಾದರು ನದಿಯಲ್ಲಿ ಬಿದಿರು ಸಾಗಿಸುವ ವ್ಯಾಪಾರ ಮಾಡುತ್ತಾ ಹಣ ಕಮಾಯಿಸಿ ಬೇಲಿಯಘಾಟ್ ನಾಲೆಯ ಅಕ್ಕಪಕ್ಕದ ಜಮೀನನ್ನು ಖರೀದಿಸಿದ. ನಂತರದ ದಿನಗಳಲ್ಲಿ ಕಸ್ತೂರಿ, ಮಸ್ಲಿನ್ ಬಟ್ಟೆಗಳನ್ನ 19ನೆ ಶತಮಾನದ ಪ್ರಮುಖ ವ್ಯಾಪಾರೀ ಮಾರ್ಗವಾದ ನಾಲೆಗಳ ಮೂಲಕ ಬಂದರುಗಳಿಗೆ ರಪ್ತು ಮಾಡಿ ಧನಿಕನಾದ. ಹೀಗೆ ಒಬ್ಬ ಸಾಧಾರಣ ವ್ಯಾಪಾರಿ ಆಸ್ತಿ,ಭೂಮಿಯನ್ನ ಕೊಂಡು ದೊಡ್ಡ ಜಮೀನುದಾರನಾದ.


ಕಂಪನಿಯ ಜೊತೆ ಸೇರಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವರ ಹೊಸ ಧನಿಕ ವರ್ಗ 19 ಶತಮಾನದ ಕಲ್ಕತ್ತಾದಲ್ಲಿ ಜನ್ಮತಾಳಿತ್ತು. 18ನೆ ಶತಮಾನದಲ್ಲಿ ಮುಂಚುಣಿಯಲ್ಲಿದ್ದ ಹಳ್ಳಿಗಳ ಜಮೀನುದಾರರು 19 ಶತಮಾನದಲ್ಲಿ ತಮ್ಮ ಆಸ್ತಿಗಳನ್ನ ಈ ಹೊಸ ಧನಿಕರಿಗೆ ಮಾರತೊಡಗಿದರು. ಈ ಹೊಸ ಧನಿಕರಲ್ಲೂ ಬ್ರಾಹ್ಮಣ, ಕಯಸ್ತ ಹಾಗು ಬೈದ್ಯ ಜಾತಿಯವರೇ ಹೆಚ್ಚಾಗಿದ್ದರು. ಕಲ್ಕತ್ತಾದ ಈ ಧನಿಕರ ಮೇಲ್ಸಮಾಜ- ಅಭಿಜಾತ ಭದ್ರಲೋಕವೆಂದೆ ಪ್ರಖ್ಯಾತವಾಯಿತು. ಈ ಅಭಿಜಾತ ಭದ್ರಲೋಕದೊಳಕ್ಕೆ ಧನಿಕನಾದರು ಶೂದ್ರನಾದ ರಾಜ ಚಂದ್ರ ದಾಸನಿಗೆ ಪ್ರವೇಶವಿರಲಿಲ್ಲ. ( ಎಸ್. ಎನ್. ಮುಖರ್ಜಿಯವರ Calcutta: Essays in Urban Historyಪುಸ್ತಕದಲ್ಲಿ ಇದೆಲ್ಲವು ದಾಖಲಾಗಿದೆ)


ರಾಷಮೋನಿ ರಾಜ ಚಂದ್ರ ದಾಸನಿಗೆ ಹೂಗ್ಲಿ ನದಿಯ ಕಡೆ ಗಮನ ಹರಿಸುವಂತೆ ಸಲಹೆ ನೀಡಿದಳಂತೆ. ಹೂಗ್ಲಿ ದಂಡೆಗಳು ಜನರಿಗೆ ಪರಮ ಪವಿತ್ರವಾಗಿದ್ದವು, ಕಲ್ಕತ್ತಾ ನಗರವಾಸಿಗಳ ಕೇಂದ್ರವಾಗಿತ್ತು, ಮೇಲ್ಜಾತಿ ಹಿಂದೂಗಳು ದಾನ, ಧರ್ಮ, ವಿಧಿವಿಧಾನಗಳಿಗೆ ಹೂಗ್ಲಿಯನ್ನೇ ಅವಲಂಬಿಸಿದ್ದರು. ದಂಡೆಯಲ್ಲಿ ನಿರ್ಮಿಸಲಾದ ಘಾಟ್ಗಳು ಸ್ನಾನ, ಅಂತ್ಯಕ್ರಿಯೆ, ವ್ಯಾಪಾರಗಳಾಗಿ ಬೆಳೆದು ಶಕ್ತಿಕೇಂದ್ರಗಳಾಗುತ್ತಿದ್ದವು. ರಾಜ ಚಂದ್ರ ದಾಸನಿಗೆ ಜನರ ಮೇಲೆ ಪ್ರಭಾವ ಬೀರಲು ಇದಕ್ಕಿಂತ ಒಳ್ಳೆಯ ಅವಕಾಶ ಮತ್ತು ಸ್ಥಳ ಸಿಕ್ಕುತ್ತಿರಲಿಲ್ಲ. ಆತ ಅದ್ದೂರಿಯಾಗಿ ಬಾಬುಘಾಟ್ ಮತ್ತು ಅಹಿರಿತೋಲ ಘಾಟ್ ಕಟ್ಟಿಸಿದ. ಕಲ್ಕತ್ತಾದಲ್ಲಿರುವ 42ಘಾಟ್ಗಳಲ್ಲಿ ಇಂದಿಗೂ ದಾಸ ಕಟ್ಟಿದ ಘಾಟ್ಗಳು ಅತ್ಯಂತ ಜನಪ್ರಿಯ, ಪ್ರಾಚೀನ ಹಾಗು ಜನರ ಗದ್ದಲದಿಂದ ಬಿಡುವಿಲ್ಲದವು.


ಬಾಬುಘಾಟ್ ನಿರ್ಮಿಸಿದ ಆರು ವರ್ಷಗಳ ಬಳಿಕ ರಾಜ ಚಂದ್ರ ದಾಸ್ ಅಕಾಲಿಕ ಮರಣ ಹೊಂದಿದ. ಸಣ್ಣ ವಯಸ್ಸಿನ ವಿಧವೆ ರಾಷಮೋನಿಗೆ ಬಂಗಾಳದ ಅತ್ಯಂತ ಸಂಪತ್ಭರಿತ ಕೌಟುಂಬಿಕ ಆಸ್ತಿಪಾಸ್ತಿ ನಿಭಾಯಿಸುವ ಜವಾಬ್ದಾರಿ ಹೆಗಲಿಗೇರಿತು. ಸುಮಾರು 30ವರ್ಷಗಳು ತನ್ನ ದಕ್ಷತೆ, ತೀಕ್ಷ್ಣ ವ್ಯಾಪಾರಿ ಬುದ್ದಿಯಿಂದ ಆಸ್ತಿ ಬೆಳೆಸುತ್ತಾ ಹಿಂದುಳಿದವರ ಪರವಾಗಿ ನಿಂತಳು. ನಿರ್ಭಯವಾಗಿ ದಾವೆ ಹೂಡುತ್ತಾ, ಪುರುಷ ಪ್ರಧಾನ ಸಮಾಜವನ್ನ ತರಾಟೆಗೆ ತೆಗೆದುಕೊಳ್ಳುವ ಧೈರ್ಯ ರೋಷಮೋನಿ ಮಾಡಿದಳು.
ಯುವರಾಜ ದ್ವಾರಕನಾಥ್ ಟಾಗೋರ್ ( ರಬೀಂದ್ರನಾಥ್ ಟಾಗೋರ್ ಅವರ ತಾತ) ತನ್ನ ಲಾಭದಾಯಕ ಎಸ್ಟೇಟ್ಗಳನ್ನ ಮಾರಿ ರಾಜ ಚಂದ್ರ ದಾಸನಿಂದ ಪಡೆದಿದ್ದ ಸಾಲವನ್ನ ತೀರಿಸುವವರೆಗೆ ಬಿಡಲಿಲ್ಲ. ಅಂತಹ ದಿಟ್ಟ ಹೆಂಗಸು ರಾಷಮೋನಿ. ಟಾಗೋರರ ಅಂತಸ್ತು, ಅವರಿಗಿದ್ದ ಪ್ರಾಬಲ್ಯ, ಅಧಿಕಾರವನ್ನ ಗಣನೆಗೆ ತೆಗೆದುಕೊಂಡರೆ ರಾಷಮೋನಿ ಅವರಿಂದ ಸಾಲ ವಸೂಲಿ ಮಾಡಿದ್ದು ಆಗಿನ ಕಾಲಕ್ಕೆ ಅದ್ವಿತೀಯ ಕೆಚ್ಚೆದೆಯ ಸಾಧನೆಯೇ ಆಗಿತ್ತು. ಶಸ್ತ್ರ ಸಜ್ಜಿತ ಪೀಡಕ ಜಮೀನ್ದಾರರನ್ನಾಗಲಿ ಅಥವಾ ಬ್ರಿಟಿಷರನ್ನಾಗಲಿ ಎದುರು ಹಾಕಿಕೊಳ್ಳಲಿಕ್ಕೆ ಆಕೆ ಎಂದು ಹಿಂಜರಿಯುತ್ತಿರಲಿಲ್ಲ. ರಾಷಮೋನಿಯ ಖಾಸಗಿ ಸೈನ್ಯ ಈ ಇಬ್ಬರಿಗೂ ಮಾರಕವಾಗಿತ್ತು.


ಸಾಕಾಷ್ಟು ಬಾರಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ದಾವೆ ಹೂಡಿ ಅವರನ್ನ ಎದುರಿಸಿದರು ಕೂಡ ಲಾಭ ಮಾಡಿಕೊಳ್ಳುವ ಅವಕಾಶ ಸಿಕ್ಕಾಗ ಕೈ ತಪ್ಪಿ ಹೋಗಲು ಬಿಡುತ್ತಿರಲಿಲ್ಲ. ಭಾರತದಲ್ಲಿ 1857 ದಂಗೆ ನೆಡೆಯುವಾಗ ಸಾವಿರಾರು ಭಾರತೀಯ ಮತ್ತು ಯುರೋಪಿಯನ್ ಹೂಡಿಕೆದಾರರು ಈಸ್ಟ್ ಇಂಡಿಯಾ ಕಂಪನಿಯ ತಮ್ಮ ಶೇರುಗಳನ್ನ ಅತಿ ಕಡಿಮೆ ದರದಲ್ಲಿ ಮಾರತೊಡಗಿದರು. ರಾಷಮೋನಿ ಇನ್ನು ಅಗ್ಗದ ಬೆಲೆಗೆ ಈ ಶೇರುಗಳನ್ನ ಕೊಂಡು ದಂಗೆಯ ನಂತರ ಅಪಾರ ಲಾಭ ಮಾಡಿಕೊಂಡಳು.


ತನ್ನ ಜೀವನವಿಡಿ ಹೂಗ್ಲಿ ನದಿಯ ತಟದಲ್ಲಿ ಘಾಟ್ ಗಳನ್ನ ಕಟ್ಟಲಿಕ್ಕೆ ಉದಾರವಾಗಿ ದಾನ ಮಾಡಿ ಜನಪ್ರಿಯಳಾದಳು. ಕೈಬರ್ತ್ಯ ಜಾತಿಗೆ ಸೇರಿದ ವಿಧವೆಯೊಬ್ಬಳ ಬಳಿ ಇಷ್ಟೊಂದು ಅಧಿಕಾರ, ಹಣವಿರುವುದು ಸಾಂಪ್ರದಾಯಿಕವಾಗಿ ಪುರುಷ ಪ್ರಧಾನವಾಗಿರುವ ಹಿಂದೂ ಸಮಾಜದಲ್ಲಿ ಅಪರೂಪವಾಗಿತ್ತು. ಹೀಗಿದ್ದ ರಾಷಮೋನಿ ಬ್ರಾಹ್ಮಣ ಕಡುಸಂಪ್ರದಾಯವಾದಿಗಳಿಗೆ ಮುಖಮೂಖಿಯಾಗುವುದು ಅವಳ ವಿಧಿಯಾಗಿತ್ತು. ಈ ಮುಖಾಮುಖಿಯಾಗಿದ್ದು ಅವಳು ಕೈಗೆತ್ತಿಕೊಂಡ ಆಕೆಯ ಕೊನೆಯ ಹಾಗು ಶ್ರೇಷ್ಠ ನಿರ್ಮಾಣದ ಕೆಲಸ- ಪವಿತ್ರ ನದಿಯ ದಂಡೆಯ ಮೇಲೆ ಅವಳು ಕಟ್ಟಲು ಉದ್ದೇಶಿಸಿದ ದಕ್ಷಿಣೆಶ್ವರ ಕಾಳಿ ದೇವಾಲಯ.


ಒಮ್ಮೆ ಕಾಶಿಯಾತ್ರೆಗೆ ಹೋರಾಟ ರಾಷಮೋನಿ ಕನಸಲ್ಲಿ ಕಾಳಿ ಪ್ರತ್ಯಕ್ಷಳಾಗಿ ಹೂಗ್ಲಿ ನದಿಯ ದಂಡೆಯ ಮೇಲೆ ತನಗಾಗಿ ದೇವಾಳವೊಂದನ್ನು ಕಟ್ಟು ಎಂದು ಆಜ್ಞೆ ಮಾಡಿದಳು. ಕನಸಿಗೆ ಮೂರ್ತರೂಪಕೊಡಲು ರಾಷಮೋನಿ ಅಣಿಯಾದಳು. ಪವಿತ್ರ ಪಶ್ಚಿಮ ದಂಡೆಯ ಮೇಲೆ ಭೂಮಿಗಾಗಿ ಹುಡುಕಾಟ ನಡೆಸತೊಡಗಿದಳು. ಶೂದ್ರಳೊಬ್ಬ ಭೂಮಿ ಖರೀದಿಸಿ, ಪವಿತ್ರ ನದಿಯ ದಂಡೆಯ ಮೇಲೆ ದೇವಾಲಯ ನಿರ್ಮಿಸಲಿದ್ದಾಳೆ ಎನ್ನುವ ಸುದ್ದಿ ಎಲ್ಲೆಡೆ ಹರಡಿತು. ಮೇಲ್ಜಾತಿಯ ಜಮೀನ್ದಾರರು ಅವಳಿಗೆ ಭೂಮಿ ಕೊಡಲು ಒಪ್ಪಲಿಲ್ಲ, ಕೆಲ ಜನ ತಮ್ಮ ಜಮೀನು ಕೊಡಲು ಮುಂದಾದರು ಅವರಿಗೂ ಬೆದರಿಸಿ ಸುಮ್ಮಾನಾಗಿಸಿದರು. ಅವರ ಉದ್ದೇಶ ರಾಷಮೋನಿ ಒಬ್ಬ ಶೂದ್ರಳೆಂದು ನೆನಪಿಸಿಕೊಡುವುದಾಗಿತ್ತು.


ಧೃತಿಗೆಡದೆ ರಾಷಮೋನಿ ಪೂರ್ವದ ದಂಡೆಗಳ ಮೇಲೆ ಭೂಮಿಗಾಗಿ ಹುಡುಕಾಟ ನಡೆಸತೊಡಗಿದಳು. ಅಲ್ಲಿ ಅವಳಿಗೆ ಆಶ್ಚರ್ಯ ಕಾದಿತ್ತು. ಕಾಲವಾಗಿದ್ದ ಇಂಗ್ಲಿಷ್ ವ್ಯಾಪಾರೀ ಜಾನ್ ಹೇಸ್ಟಿಯ ಪಾಳು ಬಿದ್ದ ಕಾರ್ಖಾನೆ, ಗಾಜಿ ಬಾಬಾನ ಗುಡಿ, ಮುಸ್ಲಿಮರ ದೊಡ್ಡ ಕೆರೆ ಮತ್ತು ಸ್ಮಶಾನ ಮತ್ತು ಕೆಲ ಹಿಂದೂಗಳ ಮಾವಿನ ತೋಪು ಅವಳ ಖರೀದಿಗೆ ಸಿಕ್ಕಿತು. ರಾಷಮೋನಿ ಅಲ್ಲಿನ ಯಾವ ಇತಿಹಾಸವನ್ನೂ ಅಳಿಸಿ ಹಾಕದೆ ಕೆರೆ ಮತ್ತು ಕಾರ್ಖಾನೆಗೆ ಮರುಜೀವ ನೀಡಿದಳು. ಇಂದು ಪ್ರಸಿದ್ದ ದಕ್ಷಿಣೆಶ್ವರ ದೇವಾಲಯ ಗಾಜಿಪುಕುರ್ ಕೆರೆಯಲ್ಲಿ ಗಂಗೆಯಲ್ಲಿ ಪ್ರತಿಪಲಿಸುತ್ತದೆ.


ದಕ್ಷಿಣೆಶ್ವರ ದೇವಾಲಯವೇನೋ ಪೂರ್ಣಗೊಂಡಿತು ಆದರೆ ಸಂಪ್ರದಾಯಸ್ತ ಹಿಂದೂ ಸಮುದಾಯ ಈ ದೇವಾಲಯವನ್ನೇ ತಿರಸ್ಕರಿಸಿದರು. ಕಾಳಿಗೆ ಶೂದ್ರ ವಿಧವೆಯೊಬ್ಬಳು ಪ್ರಸಾದ ಅರ್ಪಿಸುವುದನ್ನ ಶಾಸ್ತ್ರವೆಂದೂ ಒಪ್ಪದೆಂದರು. ಈ ತಿರಸ್ಕಾರ ರಾಷಮೋನಿಯನ್ನ ಆಳವಾಗಿ ಘಾಸಿಗೊಳಿಸಿತು. ಈ ತಿರಸ್ಕಾರಕ್ಕೆ ಪರಿಹಾರವೆಂಬಂತೆ ಬಡ ಬ್ರಾಹ್ಮಣ ಪಂಡಿತ ರಾಮ್ ಕುಮಾರ ಚಟ್ತೋಪಾದ್ಯಾಯ ಕಾಣಿಸಿಕೊಂಡ. ಬ್ರಾಹ್ಮಣನಿಗೆ ದೇವಾಲಯ ದಾನ ನೀಡಿ, ಆತ ಮೂರ್ತಿಗಳನ್ನ ಪ್ರತಿಷ್ಠಾಪಿಸಿದರೆ ಅಂತಹ ದೇವಾಲಯಗಳು ಪೂಜೆಗೆ ಅರ್ಹವೆಂದು ಶಾಸ್ತ್ರಗಳಲ್ಲಿತ್ತು. ಅದರಂತೆ ದೇವಾಲಯ ಮತ್ತು ಅಲ್ಲಿನ ಎಲ್ಲಾ ಭೂಮಿಯನ್ನು ರಾಮ್ ಕುಮಾರನಿಗೆ ಬರೆದುಕೊಟ್ಟಳು ರಾಷಮೋನಿ. 1855 ರಲ್ಲಿ ದಕ್ಷಿಣೆಶ್ವರ ದೇವಾಲಯದ ಮೊದಲ ಪೂಜೆ ನಡೆಯಿತು.
ಪಂಡಿತ ರಾಮ್ ಕುಮಾರ ದೇವಸ್ಥಾನದಲ್ಲೇ ನೆಲೆಯುರಿದ. ಆತ ತನ್ನ ತಮ್ಮನಾದ ಗದಾಧರನನ್ನು ಅಲ್ಲಿಗೆ ಕರೆತಂದ. ಗದಾಧರನಿಗೆ ಮೊದಮೊದಲು ಶೂದ್ರ ವಿಧವೆಯೊಬ್ಬಳು ಕಟ್ಟಿದ ದೇವಾಳದಲ್ಲಿ ಕೆಲಸ ಮಾಡುವುದರ ಕುರಿತು ತೀವ್ರ ಆಕ್ಷೇಪಣೆಗಳಿದ್ದವು. ಗದಾಧರ ದೇವಾಲಯದ ಪ್ರಸಾದ ಸ್ವೀಕರಿಸುತ್ತಿರಲಿಲ್ಲ. ನಂತರದ ದಿನಗಳಲ್ಲಿ ಈ ಹಠಮಾರಿ, ಸಾಂಪ್ರದಾಯಿಕ ಬ್ರಾಹ್ಮಣ ಬಾಲಕ ರಾಷಮೋನಿಗೆ ಆಧ್ಯಾತ್ಮಿಕವಾಗಿ ಆತ್ಮೀಯನಾದ. ಮುಂದೆ ಇದೇ ಬಾಲಕ ಭಾರತದ ಶ್ರೇಷ್ಟ ತತ್ವಜ್ಞಾನಿ ಹಾಗು ಮಹಾಯೋಗಿ ರಾಮಕೃಷ್ಣ ಪರಮಹಂಸನಾಗಿ ಬದಲಾದ!!!!
ರಾಜ ರಾಮ್ ಮೋಹನ್ ರಾಯ್, ಈಶ್ವರ ಚಂದ್ರ ವಿದ್ಯಾಸಾಗರ್, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರಂತಹ ಮೇಲ್ಜಾತಿ ನಾಯಕರು ಮುಂಚೂಣಿಗೆ ಬಂದ ಮೇಲೆ ರಾಷಮೋನಿಯಂತಹ 19ನೆ ಶತಮಾನದ ಅತ್ಯಂತ ಪ್ರಭಾವಿ ಐಕಾನ್ ತೆರೆಮರೆಯಾದಳು. ಇತಿಹಾಸದ ಕೊನೆಯ ಪುಟಗಳ ಅಂಚಿಗೆ ತಳಲ್ಪಟ್ಟಳು.


ಇತಿಹಾಸದ ಪುಟಗಳಿಂದ ಕಣ್ಮರೆಯಾದರು ರಾಷಮೋನಿ ಜನರ ಮನದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದ್ದಾಳೆ. 2017 ರಲ್ಲಿ ರಾಷಮೋನಿ ಜೀವನ ಕುರಿತಾದ ಧಾರಾವಾಹಿಯ 1300 ಕಂತುಗಳು ಪ್ರಸಾರವಾದವು. ಬಂಗಾಳದಲ್ಲಿ ರಾಷಮೋನಿಯ ಮಾಸ್ ಅಪೀಲ್ ಸ್ವಲ್ಪವು ಕುಂದಿಲ್ಲ. ಜನರೆಲ್ಲಾ ಅವಳನ್ನ ರಾಣಿಯೆಂದೇ ನೆನೆಪಿಸಿಕೊಳ್ಳೋದು. ಬೆಂಗಾಲಿಗಳಿಗೆ ತಾಯಿ ಗಂಗವ್ವ ಎಷ್ಟು ಮುಖ್ಯಳೋ ಅಷ್ಟೇ ಮುಖ್ಯ ರಾಣಿ ರಾಷಮೋನಿ. ಗಂಗೆಯ ಪವಿತ್ರ ಜಲ ಇಲ್ಲಿ ರಾಣಿ ರಾಷಮೋನಿರ್ ಜಲವಾಗಿ ಎಲ್ಲಾ ಜಾತಿ ಧರ್ಮಗಳ ಅಂತರ ಅಳಿಸಿಹೋಗಿ ಪವಿತ್ರ ಗಂಗೆ ಶೂದ್ರ ರಾಷಮೋನಿ ಇಲ್ಲಿ ಒಂದಾಗುತ್ತಾರೆ.


ಇಂದು ದಕ್ಷಿಣೆಶ್ವರ ದೇವಾಲಯಕ್ಕೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ನೂರಾರು ಜನ ತಾವು ತಂದ ಪ್ಲಾಸ್ಟಿಕ್ ಬಾಟಲಿನಲ್ಲಿ ಪವಿತ್ರ ರಾಷಮೋನಿರ ಜಲವನ್ನ ತುಂಬಿಕೊಂಡು ಮನೆಗೊಯ್ಯುತ್ತಾರೆ. ದೇವಾಲಯ ಪ್ರಸಾದ ಸ್ವೀಕರಿಸುತ್ತಾರೆ. ರಾಷಮೋನಿ ಕಟ್ಟಿಸಿದ ಘಾಟುಗಳಲಿ ಎಂದಿನಂತೆ ವ್ಯಾಪಾರ ನಡೆಯುತ್ತಿದೆ. ಮೀನುಗಾರರು ನಿರ್ಭೀಡೆಯಿಂದ ಮೀನು ಹಿಡಿಯುತ್ತಿದ್ದಾರೆ. ಅಂದು ಹೂಗ್ಲಿಗೆ ಅಡ್ಡಲಾಗಿ ಹಾಕಿದ ಸರಪಳಿ ಮಾಯವಾದರು ನದಿಯ ಎರಡು ಬದಿಯಲ್ಲಿ ಆನೆ ಕಾಲಿನ ಗಾತ್ರದ ಗೂಟಗಳು ಹಾಗೆ ಉಳಿದುಕೊಂಡಿವೆ. ಕಾಫಿ ಟೀ ಕಾಯಿಸುವ ಮುನ್ನ ಚಾಯ್ ವಾಲಗಳು ಇದ್ದಿಲು ಪುಡಿ ಮಾಡಿಕೊಳ್ಳಲು ಗೂಟದ ಸಹಾಯ ಪಡೆಯುತ್ತಾರೆ.


( ಅಮಿತಂಗ್ಶೂ ಆಚಾರ್ಯ ಬರೆದ ಲೇಖನ ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿತ್ತು)
ಅನುವಾದ- Harish Gangadhar