Saturday, December 14, 2024
Homeಸುದ್ದಿರಾಜ್ಯಸಿರಿಗೆರೆ ಪೀಠದಲ್ಲಿ ಭುಗಿಲೆದ್ದ ವಿವಾದ: ಪೀಠ ತ್ಯಾಗ ಮಾಡಲು ಸ್ವಾಮೀಜಿಗೆ ಒತ್ತಾಯ

ಸಿರಿಗೆರೆ ಪೀಠದಲ್ಲಿ ಭುಗಿಲೆದ್ದ ವಿವಾದ: ಪೀಠ ತ್ಯಾಗ ಮಾಡಲು ಸ್ವಾಮೀಜಿಗೆ ಒತ್ತಾಯ

ಸಿರಿಗೆರೆ ಬೃಹನ್ಮಠದ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಯೋಮಾನದ ಆಧಾರದಡಿ ಪೀಠ ತ್ಯಜಿಸಬೇಕು. ಉತ್ತರಾಧಿ‌ಕಾರಿ ಆಯ್ಕೆ ಹೊಣೆಯನ್ನು ಸಮಾಜಕ್ಕೆ ನೀಡಬೇಕು ಎಂದು ತರಳಬಾಳು ಪೀಠ ಉಳಿಸಿ ಜಾಗೃತಿ ಸಮಿತಿ ಆಗ್ರಹಿಸಿತು.

ಸಮಾಜದ ಹಿರಿಯರಾದ ಮುದೇಗೌಡ್ರು ವೀರಭದ್ರಪ್ಪ, ಆನಗೋಡು ನಂಜುಂಡಪ್ಪ, ಎಂ. ಸಿದ್ದಯ್ಯ ಇತರರು ಇತ್ತೀಚೆಗೆ ಸುದ್ಧಿಗೋಷ್ಠಿಯಲ್ಲಿ ಈ ಒತ್ತಾಯ ಮಾಡಿದ್ದಾರೆ.

‘ಉತ್ತರಾಧಿಕಾರಿ ನೇಮಕ ಸಂಬಂಧ ಶ್ರೀಗಳಿಗೆ ನಾಲ್ಕು ಬಾರಿ ಪತ್ರ ಬರೆದರೂ ಉತ್ತರ ಬಂದಿಲ್ಲ. ಹೀಗಾಗಿ ನಾವು ಮಾಧ್ಯಮದ ಎದುರು ಬಂದಿದ್ದೇವೆ. ಸ್ವಾಮೀಜಿಯವರ ಕೆಲವು ನಿಲುವಿಗೆ ನಮ್ಮ ವಿರೋಧವಿದೆಯೇ ಹೊರತು ನಾವು ಮಠದ ವಿರುದ್ಧವಿಲ್ಲ’ ಎಂದು ಹೇಳಿದರು.

ಹಿಂದಿನ ಜಗದ್ಗುರು ಶಿವಕುಮಾರ ಶಿವಚಾರ್ಯರು ಪ್ರಜಾಪ್ರಭುತ್ವದ ರೀತಿಯಲ್ಲಿ 50ನೇ ವಯಸ್ಸಿನಲ್ಲಿಯೇ ಶಿವಮೂರ್ತಿ ಶಿವಾಚಾರ್ಯರಿಗೆ ಉತ್ತರಾಧಿಕಾರಿಯಾಗಿ ಪರಿಚಯಿಸಿ, 60ನೇ ವಯಸ್ಸಿನಲ್ಲಿ ಪಟ್ಟ ಕಟ್ಟಿದರು. 2012ರಲ್ಲಿ ಪೀಠ ತ್ಯಜಿಸುವುದಾಗಿ ಹೇಳಿದ್ದ ಇಂದಿನ ಶ್ರೀಗಳು ಉತ್ತರಾಧಿಕಾರಿ ನೇಮಿಸಿಲ್ಲ. ಅಧಿಕಾರ ದಾಹವೇ ಇದಕ್ಕೆ ಕಾರಣ ಎಂದು ಆರೋಪಿಸಿದರು.

‘ಬೆಂಗಳೂರಿನಲ್ಲಿರುವ ತರಳಬಾಳು ಕೇಂದ್ರ ಮೂರು ವರ್ಷಗಳ ಕಾಲ ರಿಯಲ ಎಸ್ಟೇಟ್ ವ್ಯವಹಾರಕ್ಕೆ ಮೀಸಲಾಗಿತ್ತು. ಬಸವತತ್ವ ಪ್ರಚಾರದ ಬದಲಾಗಿ ಮಠವು ರಿಯಲ್ ಎಸ್ಟೇಟ್‌ನತ್ತ ತೊಡಗಿ ಹಣ ಮಾಡಲು ಮುಂದಾಗಿದ್ದು ನೋವಿನ ವಿಚಾರ’ ಎಂದರು.

‘ಈಗಿನ ಸ್ವಾಮೀಜಿಯವರು ಮುಗ್ಧ ಜನರನ್ನು ಇಟ್ಟುಕೊಂಡು ಸಮಾಜದ ವಿದ್ವತ್ತು ಉಳ್ಳವರ ಪಡೆ ಮೇಲೆಯೇ ಶಿಕ್ಷಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಸ್ವಾಮೀಜಿ ಸುಲಭವಾಗಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರನ್ನು ಕಾಣಲು ಭಕ್ತರು ದಿನವಿಡೀ ಕಾಯುವ ಸ್ಥಿತಿ ಇದೆ. ಸಾಣೇಹಳ್ಳಿ ಶ್ರೀಗಳನ್ನೂ ಸಹ ಕಾಯಿಸಿದ್ದ ಉದಾಹರಣೆ ಇವೆ’ ಎಂದು ಆರೋಪಿಸಿದರು.

‘ಮಠದ ಕಾರ್ಯಕ್ಷೇತ್ರ, ಪಟ್ಟಾಧ್ಯಕ್ಷರ ಆಯ್ಕೆ, ಆಸ್ತಿ ನಿರ್ವಹಣೆ ಕುರಿತಂತೆ ನಿಯಮಗಳನ್ನು ಕ್ರೂಢೀಕರಿಸಿದ್ದ ಹಿಂದಿನ ಜಗದ್ಗುರುಗಳು ಭಕ್ತರ ಒಪ್ಪಿಗೆ ಮೇರೆಗೆ ಸಾದು ಸದ್ದರ್ಮ ವೀರಶೈವ ಸಂಘದ ಬೈಲಾಗಳನ್ನು 1977ರಲ್ಲಿ ನೋಂದಣಿ ಮಾಡಿಸಿದ್ದರು. ಅದರನ್ವಯ ಮಠದ ಕಾರ್ಯ ನಿರ್ವಹಿಸಲಾಗುತ್ತಿತ್ತು. ಆದರೆ ಈಗಿನ ಶ್ರೀಗಳು ತಮ್ಮ ಹೆಸರಿನಲ್ಲೇ ಟ್ರಸ್ಟ್ ಅನ್ನು ಬರೆದುಕೊಂಡು 1990ರ ಜುಲೈನಲ್ಲಿ ನೋಂದಣಿ ಮಾಡಿಸಿಕೊಂಡರು. ಇದನ್ನು ಬರೆದುಕೊಳ್ಳುವ ಪೂರ್ವದಲ್ಲಿ ಸರ್ವಸದಸ್ಯರ ಸಭೆಯಲ್ಲಿ ನಿರ್ಣಯಿಸಲಿಲ್ಲ. ಇದನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾದನಬಾವಿ ರುದ್ರಪ್ಪ ಗೌಡ, ಶಿವನಕೆರೆ ಬಸವಲಿಂಗಪ್ಪ, ಎಸ್.ಟಿ. ಶಾಂತಗಂಗಾಧರ ಇದ್ದರು.