Saturday, December 14, 2024
Homeಕ್ರೀಡೆಕ್ರಿಕೆಟ್ಸೌತ್‌ ಆಫ್ರೀಕಾದಲ್ಲಿ ಭಾರತಕ್ಕೆ ಭರ್ಜರಿ ಜಯ

ಸೌತ್‌ ಆಫ್ರೀಕಾದಲ್ಲಿ ಭಾರತಕ್ಕೆ ಭರ್ಜರಿ ಜಯ

Pic: BCCI

ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 113 ರನ್ ಗಳ ಭರ್ಜರಿ ಜಯ ಸಾಧಿಸಿದ್ದು, ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಸೆಂಚುರಿಯನ್ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿದ್ದ 305ರನ್ ಗಳ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 191ರನ್ ಗಳಿಗೆ ಆಲೌಟ್ ಆಗಿ ಭಾರತದ ಎದುರು 113ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಅಂತೆಯೇ ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿದೆ.

ಭಾರತ ನೀಡಿದ್ದ 305 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತೀಯ ಬೌಲರ್ ಗಳ ಅಕ್ಷರಶಃ ಕಾಡಿದರು. ಡೀನ್ ಎಲ್ಗಾರ್ (77ರನ್) ಅವರ ಅರ್ಧಶತಕ ಮತ್ತು ಟೆಂಬಾ ಬವುಮಾ (36 ರನ್) ಸಮಯೋಚಿತ ಪ್ರದರ್ಶನದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡ ಪಂದ್ಯವನ್ನು ಕೈ ಚೆಲ್ಲಿತು. ಪ್ರಮುಖವಾಗಿ ಭಾರತ ಮಹಮದ್ ಶಮಿ ಮತ್ತು ಜಸ್ ಪ್ರೀತ್ ಬುಮ್ರಾ ಆಫ್ರಿಕನ್ನರನ್ನು ಇನ್ನಿಲ್ಲದಂತೆ ಕಾಡಿದರು. ಇಬ್ಬರೂ ಬೌಲರ್ ಗಳು ತಲಾ 3 ವಿಕೆಟ್ ಪಡೆದರೆ, ಅಂತಿಮ ದಿನದ ಹೀರೋ ಆರ್ ಅಶ್ವಿನ್ ಅಂತಿಮ ಓವರ್ ನಲ್ಲಿ ಬ್ಯಾಕ್  ಟು ಬ್ಯಾಕ್ 2 ವಿಕೆಟ್ ಪಡೆದು ಆಫ್ರಿಕಾ ಇನ್ನಿಂಗ್ಸ್ ಗೆ ತೆರೆ ಎಳೆದು, ಭಾರತಕ್ಕೆ ಗೆಲುವು ತಂದುಕೊಟ್ಟರು.

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಜಯ ಗಳಿಸಿರುವ ಭಾರತ ತಂಡ ಆ ಮೂಲಕ ಸೆಂಚುರಿಯನ್ ಕ್ರೀಡಾಂಗಣದಲ್ಲಿ ತನ್ನ ಗೆಲುವಿನ ಬರ ನೀಗಿಸಿಕೊಂಡಿದೆ.

ಸೆಂಚೂರಿಯನ್‌ನಲ್ಲಿ ಗೆಲುವಿನ ಬರ ನೀಗಿತು: ದಕ್ಷಿಣ ಆಫ್ರಿಕಾ ವಿರುದ್ಧ 113 ರನ್ ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ ಇದರೊಂದಿಗೆ ಸೆಂಚುರಿಯನ್ ಕ್ರೀಡಾಂಗಣದಲ್ಲಿ ತಾನು ಎದುರಿಸುತ್ತಿದ್ದ ಗೆಲುವಿನ ಬರವನ್ನು ನೀಗಿಸಿಕೊಂಡಂತಾಗಿದೆ. ಆಫ್ರಿಕಾ ನೆಲದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈ ವರೆಗೂ 20 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ದಕ್ಷಿಣ ಆಫ್ರಿಕಾ ತಂಡ 10 ಪಂದ್ಯಗಳಲ್ಲಿ ಗೆದ್ದಿದ್ದು, ಭಾರತ 3 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಪ್ರಮುಖವಾಗಿ ಸೆಂಚುರಿಯನ್ ನಲ್ಲಿ ಒಮ್ಮೆಯೂ ಭಾರತ ಟೆಸ್ಟ್ ಪಂದ್ಯ ಗೆದ್ದಿರಲಿಲ್ಲ. 

ಹೀಗಾಗಿ ಈ ಪಂದ್ಯದ ಗೆಲುವು ಭಾರತಕ್ಕೆ ಐತಿಹಾಸಿಕ ಗೆಲುವಾಗಿದ್ದು, ಆಫ್ರಿಕಾ ನೆಲದಲ್ಲಿ ಭಾರತಕ್ಕೆ ಇದು ನಾಲ್ಕನೇ ಜಯವಾಗಿದೆ. ಈ ಹಿಂದೆ ಭಾರತ ತಂಡ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯದಲ್ಲಿ ಮೊದಲ ಗೆಲುವು ಸಾಧಿಸಿದ್ದು, 2006/07ರಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ. ಆ ಪಂದ್ಯದಲ್ಲಿ ಭಾರತ 123 ರನ್ ಗಳ ಅಂತರದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿತ್ತು. ಬಳಿಕ 2010/11ರಲ್ಲಿ ಡರ್ಬನ್ ನಲ್ಲಿ ನಡೆದ ಪಂದ್ಯದಲ್ಲಿ ಆಫ್ರಿಕಾ ತಂಡವನ್ನು 87ರನ್ ಗಳಿಂದ ಮಣಿಸಿತ್ತು. ಇದು ಆಫ್ರಿಕಾ ನೆಲದಲ್ಲಿ ಭಾರತಕ್ಕೆ ಸಂದ 2ನೇ ಜಯವಾಗಿದೆ. 

ಬಳಿಕ 2017/18ರಲ್ಲಿ ಜೋಹಾನ್ಸ್ ಬರ್ಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 63 ರನ್ ಗಳ ಅಂತರದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿತ್ತು. ಇದು ಭಾರತಕ್ಕೆ ಸಂದ 3ನೇ ಗೆಲುವಾಗಿತ್ತು. ಬಳಿಕ ಇಂದು ಸೆಂಚುರಿಯನ್ ಕ್ರೀಡಾಂಗಣದಲ್ಲಿ 113 ರನ್ ಗಳಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದೆ. ಇದು ಭಾರತಕ್ಕೆ ಸಿಕ್ಕ 4ನೇ ಮತ್ತು ಸೆಂಚುರಿಯನ್ ಕ್ರೀಡಾಂಗಣದಲ್ಲಿ ದೊರೆತ ಮೊದಲ ಗೆಲುವಾಗಿದೆ.