ಮೈಸೂರು: ಹಿಜಾಬ್, ಕೇಸರಿ ಶಾಲು ವಿಚಾರ ರಾಜಕೀಯ ಸ್ವರೂಪ ಪಡೆಯುವುದಕ್ಕೆ ಕಾರಣರು ಯಾರು ಎಂಬ ಕುರಿತು ತನಿಖೆ ನಡೆಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದರು.
ರಾಜ್ಯದಲ್ಲಿ ಇಷ್ಟೊಂದು ಕೇಸರಿ ಶಾಲುಗಳು ಎಲ್ಲಿಂದ ಬಂದವು? ಲೋಡ್ ಗಟ್ಟಲೆ ಕೇಸರಿ ಶಾಲು ಹೇಗೆ ಬಂತು..? ಇದರ ಹಿಂದೆ ಯಾರು ಯಾರು ಇದ್ದಾರೆ ಎನ್ನುವ ಕುರಿತು ತನಿಖೆ ಆಗಬೇಕು ಎಂದು ಇಲ್ಲಿ ಗುರುವಾರ ಆಗ್ರಹಿಸಿದರು.
ಹಿಜಾಬ್ ಇವತ್ತಿಂದ ಬಂದಿರುವುದಲ್ಲ. ಬಹಳಷ್ಟು ವರ್ಷಗಳಿಂದ ಇದೆ. ಈಗ ಹಿಜಾಬ್ ಹಿಂದೆ ಹೋಗಲಿಕ್ಕೆ ಕಾರಣ ಏನು? ಎಂದು ಪ್ರಶ್ನಿಸಿದರು.
ನ್ಯಾಯಾಲಯ ಎಲ್ಲಾ ವಿಚಾರಗಳನ್ನ ಗಮನಿಸಿ ದೇಶಕ್ಕೆ ಮಾದರಿಯಾದ ತೀರ್ಪು ನೀಡುತ್ತೆ ಅನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ರೇಣುಕಾಚಾರ್ಯ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನ್ನಾಡಿ ನಂತರ ಕ್ಷಮೆ ಕೇಳುತ್ತಾರೆ. ಮಹಿಳೆಯರ ಬಗ್ಗೆ ಅವಹೇಳನವಾಗಿ ಮಾತನಾಡುವ ಇಂತವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹುಚ್ಚುಹುಚ್ಚಾಗಿ ಮಾತನಾಡುತ್ತಾರೆ
ಹೀಗೆ ಮಾತನಾಡುವುದು ಗೌರವವಲ್ಲ ಎಂದರು.
ಕಾವೇರಿ ನದಿ ಜೋಡಣೆ ವಿರೋಧಿಸಿ ವಾಟಾಳ್ ಪ್ರತಿಭಟನೆ
ಇದಕ್ಕೂ ಮುನ್ನ ಅವರು ಕಾವೇರಿ–ಪೆನ್ನಾರ್ ನದಿ ಜೋಡಣೆ ವಿರೋಧಿಸಿ ಇಲ್ಲಿನ ಜಯಚಾಮರಾಜ ಒಡೆಯರ್ (ಹಾರ್ಡಿಂಜ್) ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
‘ಬಜೆಟ್ನಲ್ಲಿ ಯಾರನ್ನೂ ಕೇಳಿ ಈ ಅಂಶ ಸೇರಿಸಿದ್ದೀರಿ?’ ಎಂದು ಪ್ರಶ್ನಿಸಿದ ಅವರು, ‘ಕೇಂದ್ರ ಸರ್ಕಾರ ಇಷ್ಟ ಬಂದ ಹಾಗೆ ನದಿಗಳನ್ನು ಜೋಡಿಸಲು ಹೊರಡುವುದು ಸರಿಯಲ್ಲ’ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ರಾಜ್ಯಗಳನ್ನು ಕಡೆಗಣಿಸುತ್ತಿದೆ. ರಾಜ್ಯಗಳನ್ನು ಗುಲಾಮರನ್ನಾಗಿ ನೋಡುತ್ತಿದೆ. ಅದರಲ್ಲೂ ಕರ್ನಾಟಕದ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು, ಮುಖ್ಯ ಕಾರ್ಯದರ್ಶಿ ಜತೆ ಮಾತನಾಡದೇ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕರ್ನಾಟಕ ಅಂತ ಒಂದು ರಾಜ್ಯ ಇದೆ ಎಂದು ತಿಳಿವಳಿಕೆಯೂ ಇಲ್ಲ. ಕೇಂದ್ರ ಸರ್ಕಾರ ನಿಜಕ್ಕೂ ಬೇಜವಾಬ್ದಾರಿ ಸರ್ಕಾರ ಎಂದು ಹರಿಹಾಯ್ದರು.