ಬೆಳಗಾವಿ: ಹಿಜಾಬ್ ಧರಿಸಿ ಪದವಿ ಆಂತರಿಕ ಪರೀಕ್ಷೆಗೆ ಹಾಜರಾಗಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿ ಇಲ್ಲಿನ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ 39 ಬಿ.ಕಾಂ. 1ನೇ ಹಾಗೂ 3ನೇ ಸೆಮಿಸ್ಟರ್ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸುತ್ತಿದ್ದಾರೆ.
‘ನಮಗೆ ಧರ್ಮ ಪಾಲನೆಯೊಂದಿಗೆ ಶಿಕ್ಷಣವೂ ಮುಖ್ಯ. ಹಿಂದಿನಿಂದಲೂ ಹಿಜಾಬ್ ಧರಿಸಿ ತರಗತಿಗೆ ಹಾಜರಾಗುತ್ತಿದ್ದೇವೆ. ಆದರೆ, ಈಗ ಕಾಲೇಜಿನ ಆಡಳಿತ ಮಂಡಳಿಯವರು ಅವಕಾಶ ಇಲ್ಲ ಎನ್ನುತ್ತಿದ್ದಾರೆ. ಹಿಜಾಬ್ ನಮ್ಮ ಹಕ್ಕು’ ಎಂದು ಹೇಳಿದರು.
‘ಹಿಜಾಬ್ ನೆಪವೊಡ್ಡಿ ಕಾಲೇಜು ಆಡಳಿತ ಮಂಡಳಿಯವರು ನಮಗೆ ತೊಂದರೆ ಕೊಡುತ್ತಿರುವುದು ಸರಿಯಲ್ಲ. ಜಿಲ್ಲಾಧಿಕಾರಿ ತಕ್ಷಣ ಮಧ್ಯ ಪ್ರವೇಶಿಸಿ ನಮಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿಯಿಂದ ಕಾಲೇಜು ಬಳಿಗೆ ಹೋಗಿದ್ದ ಅವರು, ಅಲ್ಲಿ ಬೇಡಿಕೆ ಈಡೇರಿಕೆಗೆ ಸ್ಪಂದನೆ ಸಿಗದಿದ್ದರಿಂದ ಅಲ್ಲಿಂದ ನಡೆದುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾರೆ. ಹಿಜಾಬ್‌ಗಾಗಿ ಪಟ್ಟು ಹಿಡಿದಿದ್ದಾರೆ.
ಕಾಲೇಜಿನ ಗೇಟ್ ಬಳಿ, ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ವಿದ್ಯಾರ್ಥಿನಿಯರನ್ನು ಬೆಂಬಲಿಸಿ ಎಸ್‌ಡಿಪಿಐ ಮುಖಂಡರು, ವಿವಿಧ ಜಮಾತ್‌ಗಳ ಹಿರಿಯರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.