ಹೋಮ್ ಸ್ಟೇಯಲ್ಲಿ ಗ್ಯಾಸ್‌ ಲೀಕ್‌: ಯುವತಿ ಸಾವು

ಮಡಿಕೇರಿ: ಇಲ್ಲಿನ ಡೇರಿ ಫಾರಂ ಬಳಿಯ ಕೂರ್ಗ್ ವ್ಯಾಲಿ ವ್ಯೂ ಹೋಮ್ ಸ್ಟೇಯಲ್ಲಿದ್ದ ಯುವತಿ ಭಾನುವಾರ ರಾತ್ರಿ ಸ್ನಾನಕ್ಕೆ ತೆರಳಿದ್ದಾಗ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ಮೃತಪಟ್ಟರು.

ಬಳ್ಳಾರಿಯ ತೋರಣಗಲ್ಲು ನಿವಾಸಿ ವಿಘ್ನೇಶ್ವರಿ (24) ಮೃತಪಟ್ಟವರು. ಮುಂಬೈನಲ್ಲಿ ಉದ್ಯೋಗದಲ್ಲಿದ್ದ ಅವರು ನಾಲ್ವರು ಸ್ನೇಹಿತೆಯರೊಂದಿಗೆ ಎರಡು ದಿನಗಳ ಹಿಂದೆ ಮಡಿಕೇರಿಗೆ ಬಂದಿದ್ದರು. ಸ್ನಾನದ ಕೊಠಡಿಯಲ್ಲಿ ಕುಸಿದು ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮೃತಪಟ್ಟಿದ್ದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗದ ಹೋಮ್ ಸ್ಟೇಯಲ್ಲಿ ಯುವತಿಯರು ವಾಸ್ತವ್ಯ ಹೂಡಿದ್ದರು. ಹೋಮ್‌ ಸ್ಟೇ ಮಾಲೀಕ ವಿದೇಶದಲ್ಲಿದ್ದು, ಸ್ಥಳೀಯರೊಬ್ಬರು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇಂತಹ ಹೋಮ್ ಸ್ಟೇ ಮುಚ್ಚಿಸಲು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ಕೂರ್ಗ್ ಹೋಮ್ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಅನಂತ ಶಯನ ದೂರಿದ್ದಾರೆ.