ಪಣಜಿ: ಇಲ್ಲಿ ನಡೆದ 52ನೇ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ಚಿತ್ರ ಪ್ರಶಸ್ತಿಗೆ ಜಪಾನ್‌ನ ‘ರಿಂಗ್ ವಾಂಡರಿಂಗ್’ ಆಯ್ಕೆಯಾಗಿದ್ದು, ‘ಸ್ವರ್ಣ ಮಯೂರ’ ಮುಡಿಗೇರಿಸಿಕೊಂಡಿದೆ. ಟೋಕಿಯೊ ನಗರ ಯುದ್ಧಪೀಡಿತವಾಗಿದ್ದ ದಿನಗಳನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
ಭಾನುವಾರ ನಡೆದ ಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು.
ಅತ್ಯುತ್ತಮ ನಿರ್ದೇಶಕರಿಗೆ ನೀಡುವ ‘ರಜತ ಮಯೂರ’ ಪ್ರಶಸ್ತಿಗೆ ಜೆಕ್ ನಿರ್ದೇಶಕ ವಾಕ್ಲಾವ್ ಕರ್ದಂಕ್ ಆಯ್ಕೆಯಾಗಿದ್ದಾರೆ. ಅವರ ನಿರ್ದೇಶನದ ‘ಸೇವಿಂಗ್ ಒನ್ ಹೂ ಇಸ್ ಡೆಡ್’ ಚಿತ್ರಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.
ಮರಾಠಿ ನಟ ಜಿತೇಂದ್ರ ಭೀಕುಲಾಲ್ ಜೋಶಿ ಅವರಿಗೆ ಅತ್ಯುತ್ತಮ ನಟಗೆ ನೀಡುವ ‘ರಜತ ಮಯೂರ’ ಲಭಿಸಿದೆ. ‘ಗೋದಾವರಿ’ ಎಂಬ ಚಿತ್ರದಲ್ಲಿ ದಿವಂಗತ ನಿರ್ಮಾಪಕ ಹಾಗೂ ನಟ ನಿಶಿಕಾಂತ್ ಕಾಮತ್ ಪಾತ್ರಕ್ಕೆ ಜೀವ ತುಂಬಿದ್ದಕ್ಕಾಗಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಚಿತ್ರ ನಿರ್ದೇಶಿಸಿದ ನಿಖಿಲ್ ಮಹಾಜನ್ ಅವರು ‘ತೀರ್ಪುಗಾರರ ವಿಶೇಷ ಪ್ರಶಸ್ತಿ’ಗೆ ಭಾಜನರಾಗಿದ್ದು, ‘ರಜತ ಮಯೂರ’ ಲಭಿಸಿದೆ.