ಚಿಕ್ಕಬಳ್ಳಾಪುರ: ತಾಲ್ಲೂಕಿನ ಸೂಸೆಪಾಳ್ಯ ಬಳಿ ಅಂತೋಣಿ ಸ್ವಾಮಿ ವಿಗ್ರಹವನ್ನು ದುಷ್ಕರ್ಮಿಗಳು ಗುರುವಾರ ಧ್ವಂಸಗೊಳಿಸಿದ್ದಾರೆ.
ಸೂಸೆಪಾಳ್ಯಕ್ಕೆ ಸಾಗುವ ಹಾಗೂ ರಂಗಧಾಮ ಕೆರೆ ಹಿಂಬದಿಯ ರಸ್ತೆಯಲ್ಲಿ ಚಿಕ್ಕಗುಡಿ ನಿರ್ಮಿಸಿ ಇಲ್ಲಿ ಅಂತೋಣಿ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಮೂರ್ತಿಯು ಮುರಿದು ಬಿದ್ದು ದ್ವಾರದ ಗಾಜುಗಳು ಪುಡಿಯಾಗಿವೆ. ಪ್ರತಿ ಮಂಗಳವಾರ ಇಲ್ಲಿ ಕ್ರೈಸ್ತ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಿದ್ದರು.
ಭಗ್ನವಾದ ಮೂರ್ತಿ ಪೊಲೀಸರ ಸುಪರ್ದಿನಲ್ಲಿದೆ. ಸೂಸೆಪಾಳ್ಯದ ಚರ್ಚ್‌ನಿಂದ ಮತ್ತೆ ಹೊಸದಾಗಿ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ.
‘42 ವರ್ಷಗಳ ಹಿಂದೆಯೇ ಅಂತೋಣಿ ಸ್ವಾಮಿ ಮೂರ್ತಿಯನ್ನು ಗವಿಯಲ್ಲಿ ಇಡಲಾಗಿತ್ತು. ನಾವು ಯಾರನ್ನೂ ಇಲ್ಲಿ ಮತಾಂತರ ಮಾಡಿಲ್ಲ. ಯಾರ ಭಾವನೆಗಳಿಗೂ ಧಕ್ಕೆ ತರದಂತೆ ಜೀವಿಸುತ್ತಿದ್ದೇವೆ. ಸೂಸೆಪಾಳ್ಯ ಚರ್ಚ್‌ಗೆ 150 ವರ್ಷಗಳ ಇತಿಹಾಸ ಇದೆ’ ಎಂದು ಸೂಸೆಪಾಳ್ಯ ಚರ್ಚ್‌ನ ಪಾದ್ರಿ ಅಂತೋಣಿ ಡ್ಯಾನಿಯಲ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಪ್ಪಿತಸ್ಥರನ್ನು ಪೊಲೀಸರು ಪತ್ತೆಹಚ್ಚಬೇಕು. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಜನವರಿಯಲ್ಲಿ ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಕರ್ನಾಟಕ ಕ್ರೈಸ್ತ ಸಂಘಟನೆ ಅಧ್ಯಕ್ಷ ಸ್ಟ್ಯಾನಿ ಪಿಂಟೊ ತಿಳಿಸಿದರು.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಭೇಟಿ ನೀಡಿದ್ದರು.
ಆರೋಪಿಗಳ ಪತ್ತೆಗೆ ಚಿಕ್ಕಬಳ್ಳಾಪುರ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿದೆ ಎಂದು ಮಿಥುನ್ ಕುಮಾರ್ ತಿಳಿಸಿದ್ದಾರೆ.