ಬೆಳಗಾವಿ: ‘ರಾಯಚೂರಿನಲ್ಲಿ ಗಣರಾಜ್ಯೋತ್ಸವ ಆಚರಣೆ ವೇಳೆ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಫೋಟೊಗೆ ಅವಮಾನ ಮಾಡಿರುವ ಆರೋಪ ಎದುರಿಸುತ್ತಿರುವ ಅಲ್ಲಿನ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದವರು ಇಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
‘ಆ ನ್ಯಾಯಾಧೀಶರು ಅಂಬೇಡ್ಕರ್ ಭಾವಚಿತ್ರ ತೆಗೆಸಿ ಬಳಿಕ ಧ್ವಜಾರೋಹಣ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಅಂಬೇಡ್ಕರ್ ಬರೆದ ಸಂವಿಧಾನ ಆಧರಿಸಿಯೇ ನ್ಯಾಯಾಂಗ ವ್ಯವಸ್ಥೆ ನಡೆಯುತ್ತದೆ. ಆದರೆ, ಅದನ್ನು ಗೌರವಿಸಬೇಕಾದ ನ್ಯಾಯಾಧೀಶರೇ ಅಪಮಾನ ಎಸಗಿರುವುದು ಅವರ ಮನೋಭಾವವನ್ನು ತೋರಿಸುತ್ತದೆ. ಅವರಿಗೆ ಪರಿಶಿಷ್ಟರ ಬಗೆಗಿರುವ ಮನಸ್ಥಿತಿಯೂ ವ್ಯಕ್ತವಾಗಿದೆ. ಇಂಥವರು ನ್ಯಾಯದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಾಗೂ ಪವಿತ್ರ ಸ್ಥಾನದಲ್ಲಿರಲು ಎಷ್ಟು ಯೋಗ್ಯ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಆ ನ್ಯಾಯಾಧೀಶರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅವರ ಮೇಲೆ ದೇಶ ದ್ರೋಹ ಪ್ರಕರಣ ದಾಖಲಿಸಬೇಕು. ಅಂಬೇಡ್ಕರ್ ಅವರನ್ನು ಅವಮಾನಿಸುವ ಘಟನೆಗಳು ಮುಂದೆ ನಡೆಯದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಅಧ್ಯಕ್ಷ ಕಲ್ಲಪ್ಪ ರಾಮಚನ್ನವರ ಮತ್ತು ಉಪಾಧ್ಯಕ್ಷ ರವಿ ಬಸ್ತವಾಡಕರ ನೇತೃತ್ವ ವಹಿಸಿದ್ದರು.