ಕಲಬುರಗಿ: ನಗರದಲ್ಲಿ ನಡೆಯುತ್ತಿರುವ ಹಲವು ಕೊಲೆ, ದರೋಡೆ, ಗಾಂಜಾ ಪೂರೈಕೆಯಲ್ಲಿ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳೇ ಶಾಮೀಲಾಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ರೌಡಿ ಶೀಟರ್‌ಗಳೊಂದಿಗೆ ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಬುರಗಿಯು ಬೆಳೆಯುತ್ತಿರುವ ನಗರವಾದ್ದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಕಮಿಷನರ್ ಕಚೇರಿಯನ್ನು ಆರಂಭಿಸಲಾಗಿತ್ತು. ಆದರೆ, ಆ ಆಶಯ ಈಡೇರಲಿಲ್ಲ. ಪೊಲೀಸರೇ ಕಳ್ಳರು, ಸಮಾಜ ಘಾತುಕ ಶಕ್ತಿಗಳೊಂದಿಗೆ ಕೈಜೋಡಿಸಿದ್ದಾರೆ. ಈ ಬಗ್ಗೆ ದಾಖಲೆಗಳು ನನ್ನ ಬಳಿ ಇವೆ’ ಎಂದರು.
‘ಆಳುವ ಬಿಜೆಪಿ ಪಕ್ಷ ಹೇಳಿದಂತೆ ಇಲ್ಲಿನ ಪೊಲೀಸರು ಕೇಳುತ್ತಿದ್ದಾರೆ. ಬಿಜೆಪಿ ಸೇರಿದ ದುಷ್ಕರ್ಮಿಗಳನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಕಳೆದ ಎರಡೂವರೆ ವರ್ಷದಲ್ಲಿ ಎಷ್ಟು ಜನರನ್ನು ಹೀಗೆ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಮಾಹಿತಿ ಕೇಳಿದರೆ ಪೊಲೀಸರು ನೀಡಲು ನಿರಾಕರಿಸುತ್ತಿದ್ದಾರೆ. ನಗರದ ಕೆಲವು ಲಾಡ್ಜ್‌ಗಳು ಪೊಲೀಸರು ಹಾಗೂ ದುಷ್ಕರ್ಮಿಗಳು ಡೀಲ್ ಕುದುರಿಸುವ ತಾಣಗಳಾಗಿವೆ’ ಎಂದು ಹರಿಹಾಯ್ದರು.
‘ಚಿತ್ತಾಪುರದ ಸಿಪಿಐ ಎರಡು ಸಲ ವರ್ಗಾವಣೆಯಾದರೂ ಅಲ್ಲಿಯೇ ಉಳಿದುಕೊಂಡಿದ್ದಾರೆ ಎಂದರೆ ಕಾರಣ ಏನು? ಅವರನ್ನು ವರ್ಗಾವಣೆ ಮಾಡುವಂತೆ ಯಾರೂ ಹೇಳಿರಲಿಲ್ಲ. ದಿಢೀರ್ ವರ್ಗಾವಣೆ ಮಾಡಿ ಬಿಜೆಪಿ ಮುಖಂಡರೊಬ್ಬರ ಮೌಖಿಕ ಸೂಚನೆ ಮೇರೆಗೆ ಮತ್ತೆ ವರ್ಗಾವಣೆ ರದ್ದಾಯಿತು’ ಎಂದರು.
‘ಅಫೀಮು ಗಾಂಜಾ ತಾಣಗಳ ಮೇಲೆ ದಾಳಿ ಮಾಡುವ ಮುನ್ನ ಪೊಲೀಸರೇ ಅಕ್ರಮ ಸಂಗ್ರಹಗಾರರಿಗೆ ಮಾಹಿತಿ ನೀಡಿ ಕಡಿಮೆ ಪ್ರಮಾಣದಲ್ಲಿ ಸಂಗ್ರಹಿಸಿಡುವಂತೆ ಹೇಳುತ್ತಾರೆ. ಪ್ರತಿಯೊಂದು ವೈನ್ ಶಾಪ್‌ಗಳಿಂದ ಪೊಲೀಸ್ ಇಲಾಖೆಗೆ ಕನಿಷ್ಠ ₹ 5 ಸಾವಿರ ಪ್ರತಿ ತಿಂಗಳ ಮಾಮೂಲು ನಿಗದಿ ಮಾಡಲಾಗಿದೆ. ಅಕ್ರಮ ಅಕ್ಕಿ ಸಾಗಾಣಿಕೆಗೆ ಬಳಸುವ ಲಾರಿಗಳಲ್ಲಿ 45 ಲಾರಿಗಳು ಪೊಲೀಸರಿಗೆ ಸೇರಿವೆ. ಅಕ್ರಮ ಗುಟ್ಕಾ ಮಾರಾಟಕ್ಕೆ ಪ್ರತಿ ತಿಂಗಳು ₹ 2.50 ಲಕ್ಷ ಮಾಮೂಲು ನೀಡಬೇಕಾಗಿದೆ’ ಎಂದು ವಿವರಿಸಿದರು.
ಕಲಬುರಗಿ ನಗರ ಕೊಲೆ ಪಾತಕಿಗಳ ತಾಣವಾಗಿದೆ. ಹಾಡುಹಗಲೇ ಇತ್ತೀಚೆಗೆ ಕೇಂದ್ರ ಬಸ್ ನಿಲ್ದಾಣದಲ್ಲಿ ಕೊಲೆ ನಡೆದು ಸಾರ್ವಜನಿಕರಿಗೆ ಭೀತಿ ಮೂಡಿಸಿತ್ತು. ಪಾತಕಿಗಳು ಯಾವುದೇ ಅಂಜಿಕೆಯಿಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಭೀತಿ ಹುಟ್ಟಿಸಿ ಕೊಲೆ ಮಾಡುತ್ತಿದ್ದಾರೆ ಎಂದರೆ ಈ ವ್ಯವಸ್ಥೆಯಲ್ಲಿ ಅವರಿಗೆ ರಕ್ಷಣೆ ಸಿಗುತ್ತಿದೆ ಎಂದು ಗೊತ್ತಿದೆ. ಜನರಿಗೆ ತೋರಿಸಲು ಆರೋಪಿಗಳನ್ನು ಬಂಧಿಸಿರುವುದಾಗಿ ಹೇಳಿದ್ದಾರೆ. ಯಾವ ವಯಸ್ಸಿನಲ್ಲಿ ಯುವಕರು ಉದ್ಯೋಗ ಮಾಡಬೇಕಾಗಿತ್ತೋ ಆ ವಯಸ್ಸಲ್ಲಿ ಕೊಲೆಯಂತಹ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ವಿಷಾದಿಸಿದರು.