ಅಮೇರಿಕಾದ ಸಾರ್ವಜನಿಕ ಸಾರಿಗೆಗಳಲ್ಲಿ ಬಸ್ಸುಗಳು ತುಂಬಾ ಜನಪ್ರಿಯವಾಗಿದ್ದವು. ಕಾರು ಅಥವಾ ಯಾವುದೇ ಖಾಸಗಿ ವಾಹನಗಳನ್ನ ಕೊಳ್ಳಲಾಗದ ಶೇಕಡಾ 75 ಕಪ್ಪು ವರ್ಣದವರು ಸಾರ್ವಜನಿಕ ಸಾರಿಗೆಯ ಮೇಲೆಯೇ ಅವಲಂಬಿತರಾಗಿದ್ದರು. ಅವರು ಬಸ್ಸಿನಲ್ಲಿ ಪ್ರಯಾಣಿಸುವಾಗ ಮಧ್ಯ ಭಾಗದ ಸೀಟುಗಳಲ್ಲಿ ಕುಳಿತುಕೊಂಡು ಮುಂದಿನ ಸೀಟುಗಳನ್ನ ಖಾಲಿ ಬಿಡಬೇಕಿತ್ತು. ಬಿಳಿಯರು ಬಂದು ಮುಂದಿನ ಸೀಟುಗಳನ್ನ ಆಕ್ರಮಿಸಿಕೊಳ್ಳುತ್ತಿದ್ದಂತೆ ಅವರು ಹಿಂದಿನ ಸೀಟುಗಳಿಗೆ ಸರಿಯಬೇಕಿತ್ತು. ಕೆಲ ಊರುಗಳಲ್ಲಿ ಸೀಮಿತ ಸೀಟುಗಳನ್ನ ಮಾತ್ರ ಕಪ್ಪು ವರ್ಣದವರಿಗೆ ಮೀಸಲಿಡಲಾಗುತ್ತಿತ್ತು.
ಜಾರಿಯಲ್ಲಿದ್ದ ಜಿಮ್ ಕ್ರೋ ನೀತಿಯ ಪ್ರಕಾರ ಕಪ್ಪು ವರ್ಣದವರು ಅಮೇರಿಕಾದ ಪ್ರಜೆಗಳೆ ಆದರೂ, ಬಿಳಿಯರಿಗೆ ಸಮಾನರೆಂದು ಬಾಯ್ಮಾತಿಗೆ ಹೇಳಿದರು, ಅವರನ್ನ ಪ್ರತ್ಯೇಕವಾಗಿಡಬೇಕಾಗಿತ್ತು. ಈ ತಾರತಮ್ಯದ ನೀತಿಯನ್ನ ವಿರೋಧಿಸಿ ರೋಸ ಪಾರ್ಕ್ಸ್ ಎಂಬ ಮಹಿಳೆ, ಬಿಳಿಯರಿಗೆ ಮಿಸಲಿದ್ದ ಸೀಟಿನಲ್ಲಿ ಕುಳಿತುಕೊಂಡಳು. ಕೆಂಡಮಂಡಲವಾದ ಬಸ್ ಚಾಲಕ ಜೇಮ್ಸ್ ಬ್ಲೇಕ್ ‘ಏ ಎದ್ದೇಳು ಅಲ್ಲಿಂದ’ ಎಂದು ಅಬ್ಬರಿಸಿದ. ಹೂಹು ರೋಸ ಜಗ್ಗಲಿಲ್ಲ. ರೋಸಳನ್ನ ಬಂಧಿಸಲಾಯಿತು. ಬಂಧನದ ಹಿನ್ನೆಲೆಯಲ್ಲೇ ಮಾಂಟೆಗೊಮೇರಿ ಬಸ್ ಬಹಿಷ್ಕಾರ ಮಾರ್ಟಿನ್ ಲೂಥರ್ ಕಿಂಗ್ ಅವರ ನೇತೃತ್ವದಲ್ಲಿ ಶುರುವಾಯಿತು.
ಇಸವಿ 1959, ಹೋರಾಟದ ಹಾದಿ ಜಯದ ಕಡೆ ತಿರುಗುವ ಹೊತ್ತಿಗೆ ಮಾರ್ಟಿನ್ ಲೂಥರ್ ಕಿಂಗ್ ತನ್ನ ಪತ್ನಿ ಕೋರೆಟ್ಟ ಸಹಿತ ಭಾರತಕ್ಕೆ ಬಂದ. ಆತನಿಗೋ ಅಮೇರಿಕಾದ ಹೋರಾಟಗಳಿಗೆ ಸ್ಪೂರ್ತಿಯಾದ, ಅಹಿಂಸೆಯ ಹಾದಿಯಲ್ಲೇ ನೆಡೆದು ಪ್ರಬಲ ಬ್ರಿಟಿಷ್ ಸಾಮ್ರಾಜ್ಯವನ್ನ ಹಿಮ್ಮೆಟ್ಟಿಸಿದ ತೆಳು ದೇಹದ ಗಾಂಧಿಯ ನಾಡನ್ನು ನೋಡುವ ತವಕ. ಬಾಂಬೆಗೆ ಬಂದಿಳಿದ ಕಿಂಗ್ ಪತ್ರಕರ್ತರಿಗೆ ಹೇಳಿದ- “ ನಾನು ನಾನಾ ದೇಶಗಳಿಗೆ ಪ್ರವಾಸಿಯಾಗಿ ಹೋದರು, ಭಾರತಕ್ಕೆ ಮಾತ್ರ ಒಬ್ಬ ತೀರ್ಥಯಾತ್ರಿಯಾಗಿಯೇ ಬರುತ್ತೇನೆ” ಎಂದು. ಗಾಂಧಿಯ ದೇಶಕ್ಕೆ ಹೋಗಬೇಕೆನ್ನುವ ಆತನ ಹಲವು ವರ್ಷಗಳ ಕನಸು ಪ್ರಧಾನಿ ನೆಹರು ನೀಡಿದ ಆಹ್ವಾನದಿಂದ ಆ ವರ್ಷ ಈಡೆರಿತ್ತು.
ಭಾರತಕ್ಕೆ ಬಂದೊಡನೆ ಕಿಂಗ್ ಅಸ್ಪೃಶ್ಯರನ್ನ ಭೇಟಿ ಮಾಡುವ ಇಂಗಿತ ವ್ಯಕಪಡಿಸಿದ್ದ. ಗಾಂಧಿಯ ಹರಿಜನರ ಬಗ್ಗೆ ಆತನಿಗೆ ಅತಿಯಾದ ಅನುಕಂಪ. ಭಾರತಕ್ಕೆ ಸ್ವಾಂತಂತ್ರ್ಯ ಬಂದ ಮೇಲೂ ಹಾಳು ಜಾತಿ ವ್ಯವಸ್ಥೆಯಿಂದ ಸಮಾನತೆ ಸಿಗದೆ ಹಿಂದುಳಿದಿದ್ದ ಅಸ್ಪೃಶ್ಯರನ್ನ ನೋಡಿ ಮಾತನಾಡಿಸುವ ಹಂಬಲ ಮಾರ್ಟಿನ್ಗೆ. ಭಾರತದಲ್ಲಿ ದಲಿತರು, ಅಸ್ಪೃಶ್ಯರು ಹಿಡಿದ ಹೋರಾಟದ ಹಾದಿ ಮತ್ತು ಅಮೇರಿಕಾದಲ್ಲಿ ಕಿಂಗ್ ನಡೆಸುತ್ತಿದ್ದ ಹೋರಾಟದ ಸ್ವರೂಪ ಮತ್ತು ಗುರಿ ಒಂದೆಯಾಗಿತ್ತು. ಭಾರತದ ಜನರಿಗೂ ಅಮೇರಿಕಾದಲ್ಲಿ ಕಿಂಗ್ ನಡೆಸುತ್ತಿದ್ದ ಹೋರಾಟದ ಬಗ್ಗೆ ಸಾಕಷ್ಟು ಅರಿವಿತ್ತು. ಕಿಂಗ್ ಭಾರತೀಯರಿಗೆ ಅಂತರರಾಷ್ಟ್ರೀಯ ಸೆಲೆಬ್ರೆಟಿ. ಬಾಂಬೆ, ದೆಹಲಿ ಎಲ್ಲೆಡೆ ಆಟೋಗ್ರಾಫ್ ಪಡೆಯಲು ಭಾರತೀಯರು ಮುಗಿಬೀಳುತ್ತಿದ್ದರು.
ಒಂದು ಮಧ್ಯಾಹ್ನ, ಕಿಂಗ್ ಮತ್ತು ಆತನ ಹೆಂಡತಿ ದಕ್ಷಿಣ ರಾಜ್ಯವಾದ ಕೇರಳದ ತ್ರಿವೇಂಡ್ರಂ ಬಂದು ಅಸ್ಪೃಶ್ಯರಿದ್ದ ಹೈಸ್ಕೂಲ್ ಒಂದಕ್ಕೆ ಭೇಟಿ ನೀಡಿದರು. ಅವರನ್ನ ಮಕ್ಕಳಿಗೆ ಪರಿಚಯಿಸುವ ಜವಾಬ್ದಾರಿ ಶಾಲೆಯ ಮುಖ್ಯೋಪಾಧ್ಯಾಯನ ಮೇಲೆ ಬೀಳುತ್ತದೆ. ಆತ ಕಿಂಗ್ ಮತ್ತು ಕೋರೆಟ್ಟರನ್ನು ಅಸ್ಪೃಶ್ಯರ ತರಗತಿಗೆ ಕರೆದುಕೊಂಡು ಹೋಗಿ. “ಮಕ್ಳಾ ಇವತ್ತು ನಿಮ್ಮನ್ನ ನೋಡೋಕೆ ಅಮೇರಿಕಾದ ಅಸ್ಪೃಶ್ಯರು ಬಂದಿದ್ದಾರೆ ಕಣ್ರೋ” ಅಂತ ಪರಿಚಯಿಸಿಬಿಡುತ್ತಾನೆ!!
ಕಿಂಗ್ ಒಂದು ಕ್ಷಣ ದಂಗಾಗುತ್ತಾನೆ. ಅನಿರೀಕ್ಷಿತವಾಗಿ ದೈತ್ಯ ಅಲೆಯೊಂದು ಅವನಿಗೆ ಅಪ್ಪಳಿಸಿದಂತಾಗುತ್ತದೆ. ಅಸ್ಪೃಶ್ಯವೆಂಬ ಪದವನ್ನ ಅವನಿಗೆ ಅನ್ವಯಿಸಿ ಬಳಸಲಾಗುತ್ತದೆಯೆಂದು ಕನಸು ಮನಸಲ್ಲೂ ಕಿಂಗ್ ಅಂದುಕೊಂಡಿರಲಿಲ್ಲ. ವಿಶೇಷ ವಿಮಾನದಲ್ಲಿ ಬೇರೆ ಕಾಂಟಿನೆಂಟ್ನಿಂದ ಹಾರಿ ಬಂದು, ದೇಶದ ಪ್ರಧಾನಿ ಜೊತೆಗೆ ಭೋಜನ ಮುಗಿಸಿ ಬಂದಿದ್ದ ಕಿಂಗ್ ಅಸ್ಪೃಶ್ಯನೆ? ಭಾರತದ ಜಾತಿ ಪದ್ಧತಿಗೂ ಅವನಿಗೂ ಯಾವ ಸಂಬಂಧ? ಭಾರತದ ಜಾತಿ ಪದ್ದತಿಯಲ್ಲಿ ಅತಿ ಕೆಳಜಾತಿಯ ಅಸ್ಪೃಶ್ಯರು ಅಮೇರಿಕಾದ ಖ್ಯಾತ ನೀಗ್ರೋವನ್ನು ಅಸ್ಪೃಶ್ಯನೆಂದು ಪರಿಗಣಿಸಿದ್ದೇಕೆ? “ನನ್ನನ್ನೂ ಅಸ್ಪೃಶ್ಯನೆಂದು ಕರೆದಾಗ ನಾನೊಂದು ಕ್ಷಣ ಆಘಾತಕ್ಕೊಳಗಾದೆ, ಕಿರಿಕಿರಿಗೊಂಡೆ” ಎಂದು ಹೇಳಿಕೊಂಡ ಕಿಂಗ್
ಆ ನಂತರ ಆಳವಾಗಿ ಯೋಚಿಸಿದ ಕಿಂಗ್. ಇಪ್ಪತ್ತು ಮಿಲಿಯನ್ ಕಪ್ಪು ಜನರಿಗಾಗಿ ನಾನು ನನ್ನ ದೇಶದಲ್ಲಿ ಹೋರಾಟ ಮಾಡುತ್ತಿದ್ದೇನೆ. ಅನೇಕ ಶತಮಾನಗಳಿಂದ ಅವರು ಕೆಳಸ್ತರದಲ್ಲೇ ಉಳಿದುಬಿಟ್ಟಿದ್ದಾರೆ. ಬಡತನವೆಂಬ ಸಣ್ಣ ಪಂಜರದಿಂದ ತಪ್ಪಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ. ಅವರ ಮೇಲೆ ಸಣ್ಣ ಸಣ್ಣ ಸ್ಲಾಮ್ಗಳಲ್ಲೇ ಬಾಳುವ ದಿಗ್ಬಂಧನ ಹೇರಲಾಗಿದೆ. ತಮ್ಮ ದೇಶದಲ್ಲೇ ಅವರ ಪರಕೀಯರಾಗಿದ್ದಾರೆಂಬ ಅರಿವು ಮೂಡಿದ ಮೇಲೆ ಕಿಂಗ್ ಹೇಳಿದ- “ ಹೌದು ನಾನು ಅಸ್ಪೃಶ್ಯನೇ. ನನ್ನ ದೇಶ ಪ್ರತಿಯೊಬ್ಬ ನೀಗ್ರೋ ಕೂಡ ಅಸ್ಪೃಶ್ಯನೆ.” ಎಂದು. ಭಾರತದ ಜಾತಿ ಪದ್ಧತಿಯನ್ನೇ ಅಮೇರಿಕಾದಂತಹ ಮುಕ್ತ ರಾಷ್ಟ್ರ ಕಪ್ಪು ವರ್ಣದವರ ಮೇಲೆ ಹೇರಿದೆಯೆಂದು ಕಿಂಗ್ ಅಂದು ಅರಿತ. ವರ್ಣಭೇದದ ಅಡಿಯಲ್ಲಿದುದು ಜಾತಿಬೇಧದ ಬೇರುಗಳೆ ಎಂಬುದು ಆತನಿಗೆ ಅಂದು ಅರ್ಥವಾಯಿತು. ಅವನು ವರ್ಣಭೇದದ ವಿರುದ್ದ ನಡೆಸಿದ್ದ ಹೋರಾಟ ಜಾತಿ ಪದ್ಧತಿಯ ವಿರುದ್ದದ ಹೋರಾಟವೇ ಆಗಿತ್ತು.
ಭೂಮಿಯನ್ನು ಆಕ್ರಮಿಸಿ, ಮೂಲ ನಿವಾಸಿಗಳನ್ನ ಗುಳೆಯೆಬ್ಬಿಸಿ, ಬಂಧಿಸಿ, ಹಿಂಸಿಸಿ, ಜೀತಕಿಟ್ಟುಕೊಂಡು, ಪ್ರಾಣಿಗಳಂತೆ ಕಂಡು, ಪ್ರಕೃತಿಯ ಒಡಲು ಬಗೆದು ಲೂಟಿ ಮಾಡಿ, ನರಮೇಧ ನಡೆಸಿ, ಒಂದು ಹೈರಾರ್ಕಿಕಲ್ ಪಿರಮಿಡ್ ಸ್ಥಾಪಿಸಿ ಅದಕ್ಕೆ ಧರ್ಮಗ್ರಂಥಗಳ ಸಮ್ಮತಿಯಿದೆಯೆಂದು, sanction ಪಡೆದು ಚಲಾವಣೆಗೆ ತಂದ ವರ್ಣಭೇದ ನೀತಿಗೂ, ಭಾರತದ ಜಾತಿ ಪದ್ಧತಿಗೂ ಯಾವ ವ್ಯತ್ಯಾಸವೂ ಕಾಣಲಿಲ್ಲ.
ಜಾತಿ ಅಂತರ್ಗತ ಮಾಡಿಕೊಂಡು, ಅದು ಇಲ್ಲವೇ ಇಲ್ಲ ಎಂದು ಪ್ರತಿಪಾದಿಸುತ್ತ ಆದರೆ ಸಬ್ಕಾನ್ಶಿಯಸ್ ಆಗಿ ಫಾಲೋ ಮಾಡುತ್ತಾ , ಮೇಲು ಕೀಳು ಸಹಜ, ದೇವರ ಇಚ್ಛೆಯದು ಎಂಬ ಭ್ರಮೆಯಲ್ಲಿ ಬದುಕುವ ಭಾರತೀಯ ಮೇಲ್ಜಾತಿಯವರು ಮತ್ತು ಇದೇ ಮನಸ್ಥಿತಿಯಿರುವ ಅಮೆರಿಕಾದ ಬಿಳಿಯರು ಒಂದಾದರೆ, ಕೀಳಿರಿಮೆಯಿಂದ ನರಳುವ ಭಾರತದ ಕೆಳಜಾತಿಯವರು ಹಾಗು ಅಮೆರಿಕಾದ ಕಪ್ಪು ವರ್ಣದವರು ಒಂದೇ ಅಂತ ಕಿಂಗ್ ಗೆ ಅನಿಸಿತ್ತು.
ಅಂದು ಕಿಂಗ್ ನನ್ನು ದಂಗು ಬಡಿಸಿದ ಜಾತಿ ಪದ್ಧತಿ ಇಂದಿಗೂ ಮಾಯವಾಗಿಲ್ಲ. ಅದು ಬೇಗ ಮಾಯವಾಗುವ ಬದಲು ಇನ್ನಷ್ಟು ಹರಡುತ್ತಲೇ ಇದೆ. ಕಣ್ಣಿಗೆ ಕಾಣಸದ ಕಬ್ಬಿಣದ ಸರಳುಗಳು ಹೇಗೆ ಕಟ್ಟಡಕ್ಕೆ ಒಂದು ರೂಪ ಕೊಟ್ಟರೂ ಕಟ್ಟಡದೊಳಗೆ ಇರುವವರಿಗೆ ಕಾಣುವುದಿಲ್ಲವೋ ಹಾಗೆ ಭಾರತದ ಜಾತಿ ಕೂಡ. ಜಾತಿಯ ಶಕ್ತಿ ಮತ್ತು ದೀರ್ಘಯುಷ್ಯವಿರುವುದೇ ಅದರ ಈ ಅಗೋಚರತೆಯಲ್ಲಿ.
ಅಮೇರಿಕಾದಲ್ಲಿರುವುದು ಕೂಡ ವರ್ಣಭೇದವಲ್ಲ, ಜಾತಿಬೇಧವೆಂದು ಅಮೇರಿಕಾದ ಮಾಜಿ ಸೆನೆಟರ್ ಚಾರ್ಲ್ಸ್ ಸಂನರ್, ಸ್ವೀಡನಿನ್ನ ಸಾಮಾಜಿಕ ಅರ್ಥಶಾಸ್ತ್ರಜ್ಞ ಗುನ್ನಾರ್ ಮಿರ್ಡಲ್, ಅಂಥ್ರೋಪಾಲಗಜಿಸ್ಟ್ ಆಷ್ಲಿ ಮಾಂಟಗು, ಮ್ಯಾಡಿಸನ್ ಗ್ರಾಂಟ್, ಥಾಮಸ್ ಪೀಯರ್ಸ್ ಬೈಲಿ ವಾದಿಸುತ್ತಾರೆ. ಅಂಬೇಡ್ಕರ್ ಕೂಡ ಇದನ್ನು ಒಪ್ಪುತ್ತಾರೆ.
ಅಮೇರಿಕಾದ ಕಪ್ಪು ವರ್ಣದ ಬುದ್ದಿಜೀವಿ ಡಬ್ಲ್ಯೂ.ಇ.ಬಿ. ಡು ಬ್ವ ಅಲ್ಪ ಸಂಖ್ಯಾತರ ರಕ್ಷಣೆ ಹಾಗು ಹಕ್ಕಿಗಾಗಿ ಬೇಡಿಕೆಯಿಡುವಾಗ ಅಂಬೇಡ್ಕರ್ ಅವರಿಗೆ ಬೆಂಬಲ ಸೂಚಿಸಿ “ ಭಾರತದಲ್ಲಿ ಅಸ್ಪೃಶ್ಯಯನ ಸ್ಥಿತಿಗು ಮತ್ತು ಅಮೆರಿಕಾದ ನೀಗ್ರೋವಿನ ಸ್ಥಿತಿಗು ಸಾಕಾಷ್ಟು ಸಾಮ್ಯತೆಗಳಿವೆ”ಯೆನ್ನುತ್ತಾರೆ. ವರ್ಣಭೇದವನ್ನ ಅರ್ಥಮಾಡಿಕೊಳ್ಳು ಜಾತಿ ಪದ್ಧತಿಯನ್ನ ಅಧ್ಯಯನ ಮಾಡುವ ಅವಶ್ಯಕತೆಯಿದೆಯೆನ್ನುತ್ತಾರೆ.
ಅಂಬೇಡ್ಕರ್ ಪತ್ರಕ್ಕೆ “ every sympathy with the untouchables of India” ಎಂದು ಡು ಬ್ವ ಉತ್ತರಿಸುತ್ತಾರೆ ಕೂಡ. ಈ ಹಿಂದೆ 1870ರಲ್ಲಿ ಅಮೇರಿಕಾದಲ್ಲಿ ಗುಲಾಮಗಿರಿಗೆ ಅಂತ್ಯ ಹಾಡಬೇಕು, ಕಪ್ಪು ವರ್ಣದವರಿಗೆ ಸಮಾನ ಹಕ್ಕುಗಳು ಸಿಗಬೇಕು ಎಂದು ಚಳುವಳಿ ನಡೆಸಿದ ಅಬಾಲಿಷನಿಸ್ಟರಿಂದ ಜೋತಿಬಾ ಫುಲೆ “ That my country may take their noble example as their guide.” ಎಂದು ಕರೆಕೊಟ್ಟದ್ದು ಕೂಡ ಸೋಜಿಗದ ಸಂಗತಿ.
ವರ್ಣಭೇದ ಮುಂದೆ ಜರ್ಮನ್ ನಾಟ್ಜಿಗಳಿಗೆ ಹೇಗೆ ಸ್ಪೂರ್ತಿಯಾಯಿತು ಎಂಬುದರ ಬಗ್ಗೆ ಹಲವು ಅಧ್ಯಯನಗಳು ನೆಡೆದು, ಬೆಚ್ಚಿಬಿಳಿಸುವ ಮಾಹಿತಿಗಳು ಹೊರಬಿದ್ದೇವೆ. ಹಿಟ್ಲರನ ಥರ್ಡ್ ರೀಕ್ ಅಧಿಕಾರಕ್ಕೆ ಬರುವ ದಶಕಗಳ ಮುನ್ನದ ಜರ್ಮನಿ-ಅಮೇರಿಕಾ unsettling ಕನೆಕ್ಷನ್ಗಳ ಮೇಲೆ ಬೆಳಕು ಚೆಲ್ಲುವ ಅನೇಕ ಪುಸ್ತಕಗಳಿವೆ.
ಜರ್ಮನಿಯ ನಾಟ್ಜಿಗಳು ನಡೆಸಿದ ನರಮೇಧಕ್ಕೆ, ಅನುಸರಿಸಿದ ಅಮಾನವೀಯ ತಾರತಮ್ಯಕ್ಕೆ (anti-semitism) ಅಮೇರಿಕಾದ ವರ್ಣಬೇಧ ನೀತಿ ಸ್ಪೂರ್ತಿಯಾದರೆ, ಅಮೇರಿಕಾದ ಮೃಗೀಯ ವರ್ಣಬೇಧ ನೀತಿಗೆ ಬ್ಲೂ ಪ್ರಿಂಟ್ ಒದಗಿಸಿದ್ದು ಭಾರತದ ಜಾತಿ ಪದ್ಧತಿ. ಜಾತಿಯೆಂಬುದು ಭಾರತದ ಮಟ್ಟಿಗಿನ ಪಿಡುಗೆಂದರೆ ತಪ್ಪಾದೀತು. ಭಾರತದ ಜಾತಿ ಪದ್ಧತಿ ಕರೋನ ವೇರಿಯಂಟ್ನಂತೆ ಹೊಸ ಹೊಸ ರೂಪ ಪಡೆದು ಇಡಿಯ ಪ್ರಪಂಚವನ್ನೇ ಶತ ಶತಮಾನಗಳಿಂದ ಕಾಡಿದೆ. ಇಂದಿಗೂ ಜಾತಿಯನ್ನ ನಾವು ಜಗತ್ತಿನ ಮೂಲೆ ಮೂಲೆಗೆ ರವಾನೆ ಮಾಡುತ್ತಿದ್ದೇವೆ. ಅದು ಒಂದೊಂದು ದೇಶದಲ್ಲಿ ಒಂದೊಂದು ರೂಪ ಪಡೆದು ವಿಕಸನಗೊಳ್ಳುತ್ತಿದೆ. ಜಾತಿ, ವರ್ಣ, ಯುಜನಿಕ್ಸ್, anti-semitism, ಮೂಲಭೂತವಾದಗಳ ತೌಲನಿಕ ಅಧ್ಯಯನ ತುರ್ತು ಈಗಿದೆ.
(ಈ ಲೇಖನಕ್ಕೆ ಸ್ಪೂರ್ತಿಯಾದ ಇಸಬೆಲ್ ವಿಲ್ಕರ್ಸನ್ ಅವರ ಕೃತಿಗಳನ್ನು ಪರಿಚಯಿಸಿದ Puttaraju P Prabhuswamy ಯವರಿಗೆ ಅಭಾರಿಯಾಗಿದ್ದೇನೆ)
- * ಹರೀಶ್ ಗಂಗಾಧರ್
ಚಿತ್ರ ಕೃಪೆ: ದ ವಾಷಿಂಗ್ಟನ್ ಪೋಸ್ಟ್