Saturday, December 14, 2024
Homeಕರಾವಳಿ ಕರ್ನಾಟಕಉಡುಪಿಅರಣ್ಯ ಅಧಿಕಾರಿಗಳ ಗೈರು: ಮಡಾಮಕ್ಕಿ ಗ್ರಾಮಸಭೆಯಲ್ಲಿ ಆಕ್ರೋಶ

ಅರಣ್ಯ ಅಧಿಕಾರಿಗಳ ಗೈರು: ಮಡಾಮಕ್ಕಿ ಗ್ರಾಮಸಭೆಯಲ್ಲಿ ಆಕ್ರೋಶ

ಸಿದ್ದಾಪುರ: ಇಲ್ಲಿನ ಮಡಾಮಕ್ಕಿಯಲ್ಲಿ ಬುಧವಾರ ನಡೆದ ಗ್ರಾಮಸಭೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಾರದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ಗ್ರಾಮ ಪಂಚಾಯಿತಿಯಿಂದ ಇಲಾಖೆಗೆ ಅಧಿಕೃತವಾಗಿ ಪತ್ರ ಬರೆದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಬೆಳೆ ನಷ್ಟ ಪರಿಹಾರ, ಕಾಡುಪ್ರಾಣಿ ಹಾವಳಿ ಇತ್ಯಾದಿ ಸಮಸ್ಯೆಗಳ ಕುರಿತು ಗ್ರಾಮಮಟ್ಟದ ಅಧಿಕಾರಿಗಳಿಗೆ ಸರಿಯಾದ ಮಾಹಿತಿಯಿಲ್ಲ ಎನ್ನುವ ಆರೋಪ ಗ್ರಾಮಸ್ಥರಿಂದ ಕೇಳಿಬಂತು. ಮುಂದಿನ ಗ್ರಾಮಸಭೆಗೆ ಅಧಿಕಾರಿಗಳನ್ನು ಕರೆಸುವ ಭರವಸೆಯನ್ನು ಗ್ರಾಮಪಂಚಾಯಿತಿ ಪ್ರಮುಖರು ನೀಡಿದ ನಂತರ ಸಭೆ ಮುಂದುವರಿಯಿತು.

ನಂತರ ಮಾತನಾಡಿದ ವನ್ಯಜೀವಿ ವಿಭಾಗದ ಸೆಲ್ವಂ ಮುರುಗನ್,‘ಬೆಳೆ ನಷ್ಟ ಪರಿಹಾರಕ್ಕೆ 15 ಮಂದಿ ರೈತರು ಅರ್ಜಿ ಸಲ್ಲಿಸಿದ್ದು, 8 ರೈತರಿಗೆ ದೊರಕಿದೆ.

ರಸ್ತೆ ಬಂದ್!
‘ಬೆಪ್ಡೆ ಹತ್ತೊಕ್ಲು ಕೆಳಮನೆ ಸಂಪರ್ಕಿಸಲು ಈಚೆಗೆ ಸುಮಾರು ₹25 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಆದರೆ, ಇತ್ತೀಚಿಗೆ ಈ ರಸ್ತೆ ಬಂದ್ ಮಾಡಿದ್ದು, ತೆರವುಗೊಳಿಸಿ ನ್ಯಾಯ ಒದಗಿಸಬೇಕು ಎಂದು ನ್ಯಾಯ ಸಮಿತಿಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಹಾಗೆ ಗ್ರಾಮಸ್ಥ ಜಯಪ್ರಕಾಶ್ ಕುಲಾಲ್ ದೂರಿದರು.

ಉಪಾಧ್ಯಕ್ಷ ದಯಾನಂದ ಪೂಜಾರಿ ಪ್ರತಿಕ್ರಿಯಿಸಿ, ‘ರಸ್ತೆ ಬಂದ್ ಮಾಡಿದ ಮನೆಯವರು ಪಟ್ಟಾ ಜಾಗದಲ್ಲಿ ರಸ್ತೆ ಬಿಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ನೀರಾವರಿ ಇಲಾಖೆಯಿಂದ ನಿರ್ಮಾಣಗೊಂಡ ಸೇತುವೆಯನ್ನು ಗ್ರಾಮಪಂಚಾಯಿತಿಗೆ ಹಸ್ತಾಂತರಿಸಿಲ್ಲ. ಈ ಸಮಸ್ಯೆ ಕುರಿತು ತಹಶೀಲ್ದಾರ್ ಅವರಿಗೆ ಪತ್ರ ಬರೆಯಲಿದ್ದೇವೆ’ ಎಂದರು.

ಸಂಚಾರವೇ ದುಸ್ತರ!
ಕೊಂಜಾಡಿ ಗಂಟುಬೀಳು ಚಕ್ಕಾರಮಕ್ಕಿ-ಮಾಯಾಬಜಾರ್ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. 2002ರಲ್ಲಿ ರಚನೆಯಾದ ಚಿಕ್ಕ ಸೇತುವೆಯಲ್ಲಿ ಸಂಚಾರ ಭಯ ಹುಟ್ಟಿಸುತ್ತಿದೆ ಎಂದು ಸಂತೋಷ ಪೂಜಾರಿ ಸಮಸ್ಯೆ ಮುಂದಿಟ್ಟರು.

ಸದಸ್ಯ ಉದಯ ಕುಮಾರ್ ಶೆಟ್ಟಿ, ‘ಎರಡು ಬಾರಿ ಅನುದಾನ ಕಾದಿರಿಸಿ ರಸ್ತೆ ದುರಸ್ತಿಗೊಳಿಸಿದ್ದೇವೆ. ಈ ಬಾರಿಯ ಕ್ರಿಯಾಯೋಜನೆಯಲ್ಲಿ ₹1 ಲಕ್ಷ ಅನುದಾನ ಮೀಸಲಿಟ್ಟಿದ್ದೇವೆ’ ಎಂದರು.

ಶೇಡಿಮನೆ ವಾರ್ಡ್‌ನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಆಶಾ ಕಾರ್ಯಕರ್ತೆಯರಿಗೆ ಸಮವಸ್ತ್ರ ವಿತರಣೆಯಾಗಿಲ್ಲ. ನಾಲ್ಕು ವಾರ್ಡ್‌ಗಳಲ್ಲಿ 108 ಜನರಿಗೆ ಕೋವಿಡ್ ಲಸಿಕೆ ಹಾಕಿಲ್ಲ. ಶೇಡಿಮನೆ ವಾರ್ಡ್‌ನಲ್ಲಿ ಸ್ಮಶಾನ ಜಾಗ ಗುರುತಿಸಲು ವಿಳಂಬವಾಗಿದೆ. ನೆಟ್‌ವರ್ಕ್ ಸಮಸ್ಯೆ, ಸಮಯಕ್ಕೆ ಸರಿಯಾಗ ಬಾರದ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಎರಡು ಬಾರಿ ತೆರಿಗೆ ಸಂಗ್ರಹಿಸಿರುವುದು ಸೇರಿದಂತೆ ವಿವಿಧ ದೂರುಗಳಗಳ ಬಗ್ಗೆ ಚರ್ಚೆ ನಡೆಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸುಶೀಲ, ಬೇಬಿ, ಸುರೇಶ ಶೆಟ್ಟಿ, ಜ್ಯೋತಿ ಪೂಜಾರ್ತಿ, ಸದಾನಂದ ಪೂಜಾರಿ, ಮಾರ್ಗದರ್ಶಿ ಅಧಿಕಾರಿಯಾಗಿ ಹೆಬ್ರಿ ಹಿರಿಯ ಪಶು ವೈದ್ಯಾಧಿಕಾರಿ ಪರಶುರಾಮ, ಕಾರ್ಯದರ್ಶಿ ಭಾಸ್ಕರ ಶೆಟ್ಟಿ ಇದ್ದರು. ಶಿಕ್ಷಕ ಗಣೇಶ ಹೇರಳೆ ಮತ್ತು ಶ್ರೀನಿವಾಸ ಉಪ್ಪೂರು ಅವರನ್ನು ಗೌರವಿಸಲಾಯಿತು.