ಚೆನ್ನೈ: ತಮಿಳುನಾಡಿನ ಮಾಮಲ್ಲಪುರಂ ದೇವಸ್ಥಾನದಲ್ಲಿ ನಾರಿಕುರುವ ಅಲೆಮಾರಿ ಮಹಿಳೆಗೆ ಊಟ ನಿರಾಕರಿಸಲಾಗಿತ್ತು. ಸರ್ಕಾರದ ವತಿಯಿಂದ ನಡೆಯುವ ದೇವಸ್ಥಾನದ ಅನ್ನ ಸಂತರ್ಪಣೆಯಲ್ಲಿ ನಮ್ಮ ಸಮುದಾಯಕ್ಕೆ ಪ್ರವೇಶವಿಲ್ಲ ಏಕೆ ಎಂದು ಆ ಮಹಿಳೆ ಪ್ರಶ್ನಿಸುವ ವಿಡಿಯೋವೊಂದು ವೈರಲ್ ಆಗಿತ್ತು. ಇದು ಸರ್ಕಾರದ ಗಮನಕ್ಕೆ ಬಂದ ನಂತರ ತಮಿಳುನಾಡು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಚಿವರು ಯಾವ ದೇವಸ್ಥಾನದಲ್ಲಿ ಆ ಮಹಿಳೆಗೆ ಆಹಾರ ನಿರಾಕರಿಸಲಾಯಿತೋ ಅದೇ ದೇವಸ್ಥಾನದಲ್ಲಿ ಆ ಮಹಿಳೆಯೊಟ್ಟಿಗೆ ಕುಳಿತು ಊಟ ಮಾಡುವ ಮೂಲಕ ಕ್ರಾಂತಿಕಾರಿ ನಡೆ ಅನುಸರಿಸಿದ್ದಾರೆ.
ಅಕ್ಟೋಬರ್ 29 ರಂದು ಸಚಿವ ಪಿ.ಕೆ ಸೇಕರ್ ಬಾಬುರವರೊಂದಿಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಮತ್ತು ತಿರುಪೊರುರು ಶಾಸಕರಾದ ಎಸ್.ಎಸ್ ಬಾಲಾಜಿಯವರು ಸಹ ಸ್ಥಳಸಯನ ಪೆರುಮಾಳ್ ದೇವಾಲಯದಲ್ಲಿ ನಡೆದ ಸಾಮೂಹಿಕ ಭೋಜನ ಕಾರ್ಯಕ್ರಮದಲ್ಲಿ ತಾರತಮ್ಯಕ್ಕೊಳಗಾಗಿದ್ದ ಅಶ್ವಿನಿಯವರೊಂದಿಗೆ ಊಟ ಮಾಡಿದರು. ಅಶ್ವಿನಿಯವರ ನಾರಿಕುರುವ ಅಲೆಮಾರಿ ಸಮುದಾಯದ ಹಲವು ಮಂದಿ ಭಾಗವಾಗಿಸಿದ್ದರು. ಆ ಮೂಲಕ ಜಾತಿ ತಾರತಮ್ಯವನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ತಮಿಳುನಾಡು ಸರ್ಕಾರ ಸಾರಿದೆ.
ನಮ್ಮ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿಯೂ ಪಂಕ್ತಿಭೇದಗಳು ನಡೆದಾಗ ಸರ್ಕಾರ ಇಂಥದ್ದೇ ಕ್ರಮ ಕೈಗೊಂಡರೆ ಈ ಭೇದಗಳು ನಿಲ್ಲುವುದರಲ್ಲಿ ಅನುಮಾನವಿಲ್ಲ.