ಬೆಂಗಳೂರು: ‘ಅಹೋರಾತ್ರಿ ಧರಣಿ ಎರಡು ದಿನ ಮುಗಿದಿದ್ದು, ಶನಿವಾರ ಕೂಡ ಮುಂದುವರೆಯಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಆವರಣದಲ್ಲಿ ಶನಿವಾರ ಬೆಳಿಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಸೋಮವಾರ (ಫೆ. 21) ರಾಜ್ಯದಾದ್ಯಂತ ಎಲ್ಲ ತಾಲ್ಲೂಕುಗಳಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಬಳಿಕ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಿದ್ದಾರೆ. ಬಳಿಕ ಹಳ್ಳಿ ಹಳ್ಳಿಗಳಲ್ಲೂ ಹೋರಾಟ ಹಮ್ಮಿಕೊಳ್ಳುತ್ತೇವೆ’ ಎಂದರು.
‘ರಾಷ್ಟ್ರಧ್ವಜದ ಕುರಿತು ಈಶ್ವರಪ್ಪ ನೀಡಿದ್ದ ಹೇಳಿಕೆಯನ್ನು ಜನತಾ ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಈಶ್ವರಪ್ಪ ನಮ್ಮ ಮೇಲೆ ಕೇಸ್ ಹಾಕಲಿ’ ಎಂದು ಸವಾಲು ಹಾಕಿದರು.
‘ಮೇಕೆದಾಟು ಯೋಜನೆ ಆರಂಭಿಸುವಂತೆ ಆಗ್ರಹಿಸಿ ಮುಂದಿನ ದಿನಗಳಲ್ಲಿ ಪಾದಯಾತ್ರೆ ಆರಂಭವಾಗಲಿದೆ. ಅದಕ್ಕೆ ನಾವು ಸಿದ್ಧರಾಗಬೇಕಿದೆ. ರಾಜ್ಯದ ಹಿತಕ್ಕೆ ಈ ಹೋರಾಟ ನಡೆಯಲಿದೆ’ ಎಂದರು.
‘ನಾವು (ಕಾಂಗ್ರೆಸ್) ಪಾದಯಾತ್ರೆ ಮಾಡಿದರೆ ಕೇಸ್ ಹಾಕಿದ್ದಾರೆ. ಆದರೆ, ಸಚಿವ ಮುರುಗೇಶ್ ನಿರಾಣಿ ಕಾರ್ಯಕ್ರಮ ಮಾಡಿದ್ದರೂ ಕೇಸ್ ಹಾಕಿಲ್ಲ. ಅವರ ಮೇಲೆ ಕೇಸ್ ಯಾಕೆ ಹಾಕಿಲ್ಲ. ಮುಖ್ಯಮಂತ್ರಿ ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳುತ್ತಾರೆ ಅಂದುಕೊಂಡಿದ್ದೆ’ ಎಂದರು.
‘ನದಿ ಜೋಡಣೆಯ ಬಗ್ಗೆ ಕೇಂದ್ರದ ಜಲಶಕ್ತಿ ಆಯೋಗದ ನೇತೃತ್ವದಲ್ಲಿ ಸಭೆ ನಡೆದಿದ್ದು, ಹೊರ ರಾಜ್ಯದವರು ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಆದರೆ, ನಮ್ಮ ರಾಜ್ಯದ ಬೇಡಿಕೆಯಲ್ಲಿ ಸ್ಪಷ್ಟತೆ ಇಲ್ಲ. ಡಬಲ್ ಇಂಜಿನ್ ಸರ್ಕಾರ ಇದ್ದರೂ ಕೆಲಸ ಆಗುತ್ತಿಲ್ಲ’ ಎಂದು ದೂರಿದರು.